ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆಗಾಗಿ ನೀರಿಗೆ ಇಲಿ ಪಾಷಾಣ ಬೆರೆಸಿದ ವಿದ್ಯಾರ್ಥಿ!

ಬಂಗಾರಪೇಟೆ ವಸತಿ ಶಾಲೆಯ ಮೂವರು ಮಕ್ಕಳು ಅಸ್ವಸ್ಥ
Published 28 ನವೆಂಬರ್ 2023, 16:39 IST
Last Updated 28 ನವೆಂಬರ್ 2023, 16:39 IST
ಅಕ್ಷರ ಗಾತ್ರ

ಬಂಗಾರಪೇಟೆ (ಕೋಲಾರ ಜಿಲ್ಲೆ): ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೀರು ಕುಡಿದು ಮೂವರು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಪ್ರಕರಣದಲ್ಲಿ ಸಹಪಾಠಿ ವಿದ್ಯಾರ್ಥಿಯೇ ವಾಟರ್‌ ಫಿಲ್ಟರ್‌ಗೆ ಇಲಿ ಪಾಷಾಣ ಹಾಕಿರುವ ವಿಚಾರ ಮಂಗಳವಾರ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ವಿದ್ಯಾರ್ಥಿಗಳಿಗೆ ಏನಾದರೂ ಸಮಸ್ಯೆ ಆದರೆ ಶಾಲೆಗೆ ರಜೆ ಸಿಗಲಿದ್ದು, ಊರಿಗೆ ಹೋಗಬಹುದೆಂಬ ಉದ್ದೇಶದಿಂದ 9ನೇ ತರಗತಿಯ ವಿದ್ಯಾರ್ಥಿ ವಸತಿ ನಿಲಯದಲ್ಲಿ ಕುಡಿಯುವ ನೀರಿಗೆ ಇಲಿ ಪಾಷಾಣ ಬೆರೆಸಿದ್ದಾನೆ ಎಂದು ಕಾಮಸಮುದ್ರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಬಾಲಕ ಆಗಾಗ್ಗೆ ಖಿನ್ನತೆ ಒಳಗಾಗುತ್ತಿದ್ದ. ಆಗ ಪ್ರಾಂಶುಪಾಲರು ಪೋಷಕರನ್ನು ಕರೆಯಿಸಿ ಮನೋವೈದ್ಯರ ಸಲಹೆ ಪಡೆಯಲು ಸೂಚಿಸಿದ್ದರು.  ಬಾಲಕನನ್ನು ಬಾಲಾ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿದ್ದು, ಆತ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ಈ ವೇಳೆ ಆತನ ತಂದೆಯೂ ಇದ್ದರು ಎಂದು ಹೇಳಿದ್ದಾರೆ.

ತಾಲ್ಲೂಕಿನ ದೊಡ್ಡಪನ್ನಾಂಡಹಳ್ಳಿ ಕ್ರಾಸ್‌ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಾಸ್ಟೇಲ್‌ನಲ್ಲಿ ಸೋಮವಾರ ಪಾಷಾಣ ಬೆರೆಸಿದ ನೀರು ಕುಡಿದು 10ನೇ ತರಗತಿಯ ಗಿರೀಶ್‌, ಧನ್ವಂತ್ ಹಾಗೂ 9ನೇ ತರಗತಿಯ ಡಕಣಾಚಾರಿ ಎಂಬ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಅವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ವಸತಿ ಶಾಲೆಯಲ್ಲಿ ಒಟ್ಟು 220 ವಿದ್ಯಾರ್ಥಿಗಳು ಓದುತ್ತಿದ್ದು, ಮೂರು ಚಿಕ್ಕ ನೀರು ಶುದ್ಧೀಕರಣ ಘಟಕಗಳಿವೆ. ಪೊಲೀಸರು ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಆರ್‌.ಶ್ರೀನಿವಾಸ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ.

‘ಮನೆಯಿಂದಲೇ ಇಲಿ ಪಾಷಾಣ ತಂದಿದ್ದ’

‘ವಸತಿ ನಿಲಯದಲ್ಲಿ ಇರಲು ವಿದ್ಯಾರ್ಥಿಗೆ ಇಷ್ಟವಿರಲಿಲ್ಲ. ಪೋಷಕರು ಬಲವಂತದಿಂದ ಆತನನ್ನು ಹಾಸ್ಟೆಲ್‌ಗೆ ಕಳುಹಿಸಿದ್ದಾರೆ. ಹೀಗಾಗಿ ಆತ ಮನೆಯಿಂದ ಅವಧಿ ಮೀರಿದ ಇಲಿ ಪಾಷಾಣ ತಂದು ಕುಡಿಯುವ ನೀರಿಗೆ ಮಿಶ್ರಣ ಮಾಡಿದ್ದಾನೆ’ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಆರ್‌.ಶ್ರೀನಿವಾಸ್‌ ‘ಪ್ರಜಾವಾಣಿ’ ಗೆ ತಿಳಿಸಿದರು. ‘ಎರಡು ದಿನ ವಸತಿ ನಿಲಯದಲ್ಲೇ ಇದ್ದು ಮಕ್ಕಳನ್ನು ವಿಚಾರಿಸಿ ಮಾಹಿತಿ ಪಡೆದಿದ್ದೇನೆ. ಮಕ್ಕಳು ಹಾಗೂ ಪೋಷಕರ ಸಭೆ ನಡೆಸಿ ಮುಂದೆ ಇಂಥ ಅನಾಹುತ ಎಸಗದಂತೆ ಎಚ್ಚರಿಕೆ ನೀಡಿದ್ದೇನೆ. ಆಸ್ಪತ್ರೆಯಲ್ಲಿರುವ ಮಕ್ಕಳು ಆರೋಗ್ಯವಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT