ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಪೀಳಿಗೆಯಲ್ಲಿ ಆತ್ಮಹತ್ಯೆ ಪ್ರವೃತ್ತಿ

ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯಲ್ಲಿ ಜಿ.ಪಂ ಅಧ್ಯಕ್ಷ ವೆಂಕಟೇಶ್‌ ಹೇಳಿಕೆ
Last Updated 15 ಸೆಪ್ಟೆಂಬರ್ 2020, 14:35 IST
ಅಕ್ಷರ ಗಾತ್ರ

ಕೋಲಾರ: ‘ಇತ್ತೀಚಿನ ವರ್ಷಗಳಲ್ಲಿ ಯುವ ಪೀಳಿಗೆಯಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿದೆ. ಯುವ ಪೀಳಿಗೆಯು ದೇಶದ ಆಸ್ತಿ ಎಂಬುದನ್ನು ಮನವರಿಕೆ ಮಾಡಿಕೊಟ್ಟು ಆತ್ಮಹತ್ಯೆ ತಡೆಯಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಕಿವಿಮಾತು ಹೇಳಿದರು.

ಜಿಲ್ಲಾಡಳಿತವು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯಲ್ಲಿ ಮಾತನಾಡಿ, ‘ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ಸಮಸ್ಯೆ ಸವಾಲಾಗಿ ಸ್ವೀಕರಿಸಿ ಜಯಿಸಬೇಕು. ಆತ್ಮಹತ್ಯೆಯು ಸ್ವಯಂಕೃತ ಅಪರಾಧವಾಗಿದ್ದು, ಈ ಬಗ್ಗೆ ಪೋಷಕರು ಮಕ್ಕಳಿಗೆ ತಿಳಿವಳಿಕೆ ಹೇಳಿ ಆತ್ಮಹತ್ಯೆ ಪ್ರಕರಣ ತಡೆಯಬೇಕು’ ಎಂದು ಸಲಹೆ ನೀಡಿದರು.

‘ಮಾನಸಿಕವಾಗಿ ದುರ್ಬಲರಾದವರು ಬಲವಂತವಾಗಿ ಸಾವು ತಂದುಕೊಳ್ಳುತ್ತಾರೆ. ಜನರು ಸಾವು ನಿಗ್ರಹಿಸುವ ಶಕ್ತಿ ಪಡೆಯಬೇಕು. ಯಾವುದೇ ಸಮಸ್ಯೆ ಬಗೆಹರಿಸುವ ಆತ್ಮಸ್ಥೈರ್ಯ ಬರಬೇಕು. ಆತ್ಮಹತ್ಯೆಗೆ ವಯಸ್ಸಿನ ಅಂತರವಿಲ್ಲ. ಬಡವ ಶ್ರೀಮಂತ ಎನ್ನದೆ ಎಲ್ಲಾ ವರ್ಗದಲ್ಲೂ ಆತ್ಮಹತ್ಯೆ ಪ್ರವೃತ್ತಿ ಕಾಣಬಹುದು. ಆತ್ಮಹತ್ಯೆಯು ಅಪರಾಧವಾಗಿದ್ದು, ಈ ಬಗ್ಗೆ ಜನರಿಗೆ ತಿಳಿವಳಿಕೆ ನೀಡಿ ಆತ್ಮಹತ್ಯೆ ತಡೆಯಬೇಕು’ ಎಂದು ಕಿವಿಮಾತು ಹೇಳಿದರು.

‘ಸೋಲು ಗೆಲುವಿನ ಮೆಟ್ಟಿಲೆಂದು ಮಕ್ಕಳಿಗೆ ತಿಳಿ ಹೇಳಿ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ಮಕ್ಕಳನ್ನು ಅವರ ಆಸಕ್ತಿ ವಿಷಯಗಳಿಗೆ ಅನುಗುಣವಾಗಿ ಬೆಳೆಸಬೇಕು. ಆತ್ಮಹತ್ಯೆಯು ಮನಸ್ಸಿಗೆ ಸಂಬಂಧಿಸಿದ ವಿಷಯವಾಗಿದ್ದು, ಮನಸ್ಸು ದುರ್ಬಲವಾಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

ಒತ್ತಡ ಹೇರಬೇಡಿ: ‘ಪೋಷಕರು ಓದು ಮತ್ತು ಅಂಕ ಗಳಿಕೆ ವಿಚಾರದಲ್ಲಿ ಮಕ್ಕಳ ಮೇಲೆ ಮಾನಸಿಕ ಒತ್ತಡ ಹೇರಬಾರದು. ಮಕ್ಕಳ ಮೇಲೆ ಒತ್ತಡ ಹೆಚ್ಚಿದರೆ ಖಿನ್ನರಾಗುತ್ತಾರೆ. ಆದ ಕಾರಣ ಮಕ್ಕಳು ಒತ್ತಡಕ್ಕೆ ಒಳಗಾದಂತೆ ಪೋಷಕರು ನಿಗಾ ವಹಿಸಬೇಕು. ಮಕ್ಕಳಿಗೆ ಆಸಕ್ತಯಿರುವ ವಿಷಯಗಳಲ್ಲಿ ಗಮನ ಕೇಂದ್ರೀಕರಿಸಲು ಅವಕಾಶ ಕಲ್ಪಿಸಬೇಕು’ ಎಂದರು.

‘ಸರ್ಕಾರದ ಸೌಲಭ್ಯಗಳ ಕೊರತೆ ನಡುವೆಯೂ ಕೋವಿಡ್‌–19 ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ಆಶಾ ಕಾರ್ಯಕರ್ತೆಯರು ಆತ್ಮಹತ್ಯೆ ಮಹಾ ಅಪರಾಧವೆಂದು ಜನರಿಗೆ ಮನವರಿಕೆ ಮಾಡಿಕೊಟ್ಟು ಆತ್ಮಸ್ಥೈರ್ಯ ತುಂಬಬೇಕು. ಸಮಸ್ಯೆಗೆ ಪರಿಹಾರದ ಜತೆಗೆ ಅವಕಾಶಗಳಿವೆ ಎಂಬುದನ್ನು ತಿಳಿಸಿ ಕೊಡಬೇಕು’ ಎಂದು ಮನವಿ ಮಾಡಿದರು.

ಯುವಕರು ಹೆಚ್ಚು: ‘ಜಾಗತಿಕವಾಗಿ ಯುವಕ ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಲವು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ ಎಂಬುದು ಸೇರಿದಂತೆ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಯ ಹಾದಿ ಹಿಡಿಯುತ್ತಾರೆ’ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ.ಎನ್‌.ಸಿ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

‘ದೇಶದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 12 ಜನ ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಹಿಂದಿನ ವರ್ಷ ವಿವಿಧ ಕಾರಣದಿಂದ 11,288 ಮಂದಿ ಹಾಗೂ ಜಿಲ್ಲೆಯಲ್ಲಿ 239 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾಗತಿಕವಾಗಿ ಪ್ರತಿ ವರ್ಷ 8 ಲಕ್ಷಕ್ಕಿಂತ ಹೆಚ್ಚು ಜನ ಆತ್ಮಹತ್ಯೆಯಿಂದ ಮೃತಪಡುತ್ತಿದ್ದಾರೆ. ಆತ್ಮಹತ್ಯೆಯು ಘೋರ ದುರಂತ’ ಎಂದು ವಿವರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯ್‌ಕುಮಾರ್, ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್‌, ಜಿಲ್ಲಾ ಮಾನಸಿಕ ಆರೋಗ್ಯ ಘಟಕದ ಮನೋವೈದ್ಯೆ ಡಾ.ಎಸ್.ಪಾವನ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT