ಶನಿವಾರ, ಅಕ್ಟೋಬರ್ 31, 2020
27 °C
ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಸತ್ಯಭಾಮ ಕಿವಿಮಾತು

ಸ್ವಚ್ಛ ನಗರ ನಿರ್ಮಾಣಕ್ಕೆ ಸಹಕರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸ್ವಚ್ಛ ನಗರ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ನಗರವಾಸಿಗಳು ಮನೆಯಲ್ಲೇ ಒಣ ಮತ್ತು ಹಸಿ ಕಸ ವಿಂಗಡಿಸಿ ಪೌರ ಕಾರ್ಮಿಕರಿಗೆ ವಿಲೇವಾರಿ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಕಿವಿಮಾತು ಹೇಳಿದರು.

ಇಲ್ಲಿನ ಭೈರೇಗೌಡ ನಗರದಲ್ಲಿ ಸೋಮವಾರ ಕಸ ವಿಂಗಡಣೆ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿ, ‘ಸ್ವಚ್ಛತೆ ವಿಚಾರದಲ್ಲಿ ನಗರಸಭೆಯಷ್ಟೇ ಜನರಿಗೂ ಜವಾಬ್ದಾರಿ ಇರಬೇಕು. ತ್ಯಾಜ್ಯ ಸಂಗ್ರಹಣೆ ಹಾಗೂ ವೈಜ್ಞಾನಿಕ ವಿಲೇವಾರಿಗೆ ನಗರವಾಸಿಗಳು ನಗರಸಭೆಗೆ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

‘ಮನೆಯಲ್ಲೇ ಹಸಿ ಮತ್ತು ಒಣ ವಿಂಗಡಿಸಿ ಕೊಡದ ನಗರವಾಸಿಗಳಿಗೆ ಪೌರ ಕಾರ್ಮಿಕರು ಮೊದಲ ಬಾರಿ ಎಚ್ಚರಿಕೆ ನೀಡಬೇಕು. ಆ ನಂತರವೂ ಕಸ ಬೇರ್ಪಡಿಸಿ ಕೊಡದಿದ್ದರೆ ಅವರ ಮನೆ ಮುಂದೆಯೇ ಕಸ ಸುರಿಯಿರಿ. ಆಗಲೂ ಸರಿ ದಾರಿಗೆ ಬರದಿದ್ದರೆ ನಗರಸಭೆ ಅಧಿಕಾರಿಗಳು ಶಿಸ್ತುಕ್ರಮ ಜರುಗಿಸಬೇಕು’ ಎಂದು ಸೂಚಿಸಿದರು.

‘ಕಸ ವಿಲೇವಾರಿ ವಿಚಾರದಲ್ಲಿ ಜನರಿಗೆ ಅರಿವಿನ ಕೊರತೆಯಿದೆ. ಆದ ಕಾರಣ ಅಧಿಕಾರಿಗಳು ಸ್ವಚ್ಛತೆ ಕಾಪಾಡುವ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು. ಕರಪತ್ರ, ಜಾಹೀರಾತು ಫಲಕಗಳ ಮೂಲಕ ಜನರಿಗೆ ಸ್ವಚ್ಛತೆಯ ಸಂದೇಶ ರವಾನಿಸಬೇಕು. ಕಸ ವಿಂಗಡಿಸಿ ಸಮರ್ಪಕವಾಗಿ ವಿಲೇವಾರಿ ಮಾಡದಿದ್ದರೆ ಇಡೀ ಭೂ ಮಂಡಲ ಕಲುಷಿತಗೊಳ್ಳುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಸಮಸ್ಯೆಗೆ ಸ್ಪಂದನೆ: ‘ನಗರಸಭೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿದ್ದೇವೆ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ವಿಳಂಬ ಮಾಡಿಲ್ಲ. ಪೌರ ಕಾರ್ಮಿಕರು ಕಡ್ಡಾಯವಾಗಿ ಸುರಕ್ಷತಾ ಸಲಕರಣೆ ಬಳಸಬೇಕು. ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

‘ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ನಗರವಾಸಿಗಳು ಕಡ್ಡಾಯವಾಗಿ ತೆರಿಗೆ ಪಾವತಿಸುವ ಮೂಲಕ ನಗರಸಭೆಯ ಆದಾಯ ಹೆಚ್ಚಿಸಿ ಮೂಲಸೌಕರ್ಯ ಪಡೆಯಬೇಕು’ ಎಂದು ತಿಳಿಸಿದರು.

‘ಲಾಕ್‌ಡೌನ್ ಕಾರಣಕ್ಕೆ ಕೋಲಾರದ ರಸ್ತೆ ಕಾಮಗಾರಿಗೆ ಮಂಜೂರಾತಿ ಸಿಗುವುದು ತಡವಾಯಿತು. ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿದ್ದ ಸಂಬಂಧ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದು ವಿವರಿಸಿದರು.

‘ಭೈರೇಗೌಡ ನಗರದಲ್ಲಿ 2 ತಿಂಗಳಿಂದ ನೀರಿನ ಸಮಸ್ಯೆಯಿದ್ದು, ನಗರಸಭೆ ಅಧಿಕಾರಿಗಳು ಸಮಸ್ಯೆ ಪರಿಹರಿಸದೆ ಸಬೂಬು ಹೇಳುತ್ತಾ ಸತಾಯಿಸುತ್ತಿದ್ದಾರೆ. ನೀರು ಲಭ್ಯವಿರುವ ಕೊಳವೆ ಬಾವಿಗೆ ಶೀಘ್ರವೇ ಪಂಪ್‌ ಮತ್ತು ಮೋಟರ್‌ ಅಳವಡಿಸಿ ಸಮಸ್ಯೆ ಬಗೆಹರಿಸಬೇಕು’ ಎಂದು ಸೂಚಿಸಿದರು.

ನಗರಸಭೆ ಆಯುಕ್ತ ಶ್ರೀಕಾಂತ್‌ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು