ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವೆ ಕಾರ್ಯ ಕುಂಠಿತ: ಜನರ ಅಲೆದಾಟ

ಭೂಮಾಪಕರ ಕೊರತೆ: ಕಡತದಲ್ಲೇ ದೂಳು ಹಿಡಿಯುತ್ತಿರುವ ಅರ್ಜಿಗಳು
Last Updated 15 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಭೂಮಾಪಕರ ವರ್ಗಾವಣೆ ಹಾಗೂ ಕೊರತೆಯಿಂದಾಗಿ ಆಸ್ತಿಗಳ ಸರ್ವೆ ಕಾರ್ಯ ಕುಂಠಿತಗೊಂಡಿದ್ದು, ಸರ್ವೆಗಾಗಿ ಸಲ್ಲಿಕೆಯಾದ ಅರ್ಜಿಗಳು ಕಡತದಲ್ಲೇ ದೂಳು ಹಿಡಿಯುತ್ತಿವೆ.

ಕೃಷಿ ಜಮೀನು ಸೇರಿದಂತೆ ವಿವಿಧ ಆಸ್ತಿಗಳ ಸರ್ವೆ ಕಾರ್ಯ ವಿಳಂಬವಾಗುತ್ತಿದ್ದು, ಹದ್ದುಬಸ್ತು, ಬಿನ್‌ಸೇತ್ಕಿ, ತಾತ್ಕಾಲಿಕ ಪೋಡಿ, ಇ–ಸ್ವತ್ತು ಸೇರಿದಂತೆ ಜಮೀನಿನ ಸರ್ವೆಗಾಗಿ ಅರ್ಜಿ ಸಲ್ಲಿಸಿರುವ ಜನರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

ಇ–ಆಸ್ತಿ, ಖಾತೆ ಬದಲಾವಣೆ, ಆಸ್ತಿ ವರ್ಗಾವಣೆಗೆ ಸರ್ವೆ ಸ್ಕೆಚ್ ಕಡ್ಡಾಯವಾಗಿದೆ. ಸಕಾಲದಲ್ಲಿ ಸರ್ವೆ ಕಾರ್ಯ ನಡೆಯದ ಕಾರಣ ರೈತರಿಗೆ ಅಗತ್ಯ ದಾಖಲೆಗಳು ದೊರೆಯದಾಗಿವೆ. ನಕ್ಷೆ, ಹದ್ದುಬಸ್ತು ಗುರುತಿಸುವಿಕೆ, ಜಮೀನು ಖರೀದಿ ಮತ್ತು ಮಾರಾಟ, ದಾನ ನೀಡಿಕೆ, ಪೋಡಿ ಪ್ರಕ್ರಿಯೆ ಪ್ರಮಾಣ ಕಡಿಮೆಯಾಗಿದೆ. ಹಿಸ್ಸಾ ಪ್ರಕ್ರಿಯೆ, ಹಕ್ಕು ಬದಲಾವಣೆಗೂ ತೊಡಕು ಆಗುತ್ತಿದೆ. ಭೂದಾಖಲೆಗಳ ಇಲಾಖೆ ಆದಾಯಕ್ಕೂ ಹೊಡೆತ ಬಿದ್ದಿದೆ.

ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ರೈತರು ಸಲ್ಲಿಸಿರುವ ಸಾವಿರಾರು ಅರ್ಜಿಗಳು ಬಾಕಿ ಉಳಿದಿವೆ. ಸರ್ವೆ ಸ್ಕೆಚ್‌ಗೆ ಹೆಚ್ಚಿನ ರೈತರು ಅರ್ಜಿ ಸಲ್ಲಿಸಿದ್ದು, ಮೇಲ್ವಿಚಾರಕರ ಟೇಬಲ್‌ಗಳ ಮೇಲೆಯೇ ಸಾಕಷ್ಟು ಅರ್ಜಿಗಳು ದೂಳು ಹಿಡಿಯುತ್ತಿವೆ. ಆರ್‌ಟಿಸಿ ದುರಸ್ತಿಗೂ ಹೆಚ್ಚಿನ ಮಂದಿ ಅರ್ಜಿ ಹಾಕಿ ಕಾದು ಕುಳಿತಿದ್ದಾರೆ. ನಿತ್ಯ ತಹಶೀಲ್ದಾರ್ ಕಚೇರಿಗಳಿಗೆ ಅಲೆದರೂ ರೈತರ ಅರ್ಜಿಗಳಿಗೆ ಮನ್ನಣೆ ಸಿಗದಾಗಿದೆ.

22 ಹುದ್ದೆ ಖಾಲಿ: ಜಿಲ್ಲೆಗೆ 84 ಮಂದಿ ಸರ್ಕಾರಿ ಭೂಮಾಪಕರ ಹುದ್ದೆ ಮಂಜೂರಾಗಿದ್ದು, ಈ ಪೈಕಿ 62 ಹುದ್ದೆಗಳು ಭರ್ತಿಯಾಗಿವೆ. 22 ಭೂಮಾಪಕರನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಬದಲಿ ಸಿಬ್ಬಂದಿಯನ್ನು ನಿಯೋಜಿಸಿಲ್ಲ. ಮತ್ತೊಂದೆಡೆ ಪರವಾನಗಿ ಪಡೆದ ಸರ್ವೆಯರ್‌ಗಳು ಸೇವೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಫೆಬ್ರುವರಿ ತಿಂಗಳಿಂದ ಕೆಲಸ ಬಹಿಷ್ಕರಿಸಿ ಮುಷ್ಕರ ನಡೆಸುತ್ತಿದ್ದಾರೆ.

‘ಇಲಾಖೆಯಲ್ಲಿ ಅಗತ್ಯಕ್ಕೆ ತಕ್ಕಂತೆ ನೌಕರರಿಲ್ಲ. ಇರುವ ಸಿಬ್ಬಂದಿಯನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಜನರಿಗೆ ನಿಗದಿತ ಅವಧಿಯೊಳಗೆ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಸಿಬ್ಬಂದಿ ಕೊರತೆಯಿಂದ ಕಾರ್ಯ ಒತ್ತಡ ಹೆಚ್ಚಿದೆ’ ಎಂದು ಸರ್ವೆ ಇಲಾಖೆ ಸಿಬ್ಬಂದಿ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಸರ್ವೆಗೆ ಅರ್ಜಿ ಸಲ್ಲಿಸಿದ 30 ದಿನದೊಳಗೆ ಅದು ವಿಲೇವಾರಿಯಾಗಬೇಕೆಂಬ ನಿಯಮವಿದೆ. ಆದರೆ, ಅರ್ಜಿ ಸಲ್ಲಿಸಿ ಮೂರ್ನಾಲ್ಕು ತಿಂಗಳಾದರೂ ಸರ್ವೆ ಮಾಡಿಸಲು ಸಾಧ್ಯವಾಗುತ್ತಿಲ್ಲ. ನಿರಂತರವಾಗಿ ಕಚೇರಿಗೆ ಅಲೆಯುತ್ತಿದ್ದೇವೆ. ವಿಚಾರಿಸಿದರೆ ಹಳೆಯ ಅರ್ಜಿಗಳು ವಿಲೇವಾರಿಯಾಗಬೇಕು, ಬಳಿಕ ತಮ್ಮ ಅರ್ಜಿ ಕೈಗೆತ್ತಿಕೊಳ್ಳುತ್ತೇವೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ’ ಎಂಬುದು ರೈತರ ದೂರು.

18,795 ಅರ್ಜಿ ಬಾಕಿ: ಹದ್ದುಬಸ್ತು, ಬಿನ್‌ಸೇತ್ಕಿ, ತಾತ್ಕಾಲಿಕ ಪೋಡಿ, ಇ–ಸ್ವತ್ತು, ದುರಸ್ತಿ, ಸರ್ಕಾರಿ ಜಮೀನುಗಳ ಅಳತೆ ಮತ್ತು ಇತರೆ ಅರ್ಜಿಗಳನ್ನು ಸರ್ಕಾರಿ ಸರ್ವೆಯರ್‌ಗಳು ವಿಲೇವಾರಿ ಮಾಡುತ್ತಾರೆ. 11ಇ, ಬಿನ್‌ಸೇತ್ಕಿಯನ್ನು ಪರವಾನಗಿ ಪಡೆದ ಸರ್ವೆಯರ್‌ಗಳು ಮಾಡುತ್ತಾರೆ. ಸದ್ಯ ಸರ್ಕಾರಿ ಭೂಮಾಪಕರ ಕೊರತೆಯಿಂದಾಗಿ ಸಕಾಲಕ್ಕೆ ಸರ್ವೆ ಕಾರ್ಯ ನಡೆಯದೆ ಜಮೀನು ವ್ಯಾಜ್ಯಗಳು ಕಲಹದಲ್ಲೇ ಮುಂದೂಡಿಕೆಯಾಗುತ್ತಿವೆ.

ಸರ್ವೆ ಕಾರ್ಯಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿ ಒಟ್ಟಾರೆ 18,795 ಅರ್ಜಿಗಳು ಬಾಕಿ ಇವೆ. ಈ ಪೈಕಿ ಸರ್ಕಾರಿ ಭೂಮಾಪಕರಿಂದ ಸರ್ವೆ ಆಗಬೇಕಿರುವ 8,311 ಅರ್ಜಿಗಳು ಹಾಗೂ ಪರವಾನಗಿ ಪಡೆದ ಸರ್ವೆಯರ್‌ಗಳಿಗೆ ಸಂಬಂಧಪಟ್ಟ 10,484 ಅರ್ಜಿಗಳು ಸೇರಿವೆ.

ಸರ್ವೆಯರ್‌ಗಳು ರೈತರ ಜಮೀನುಗಳಿಗೆ ಹೋಗಿ ಸರ್ವೆ ಮಾಡಿ ವರದಿ ಸಿದ್ಧಪಡಿಸಲು ಒಂದು ಅರ್ಜಿಗೆ ಕನಿಷ್ಠ ಅರ್ಧ ದಿನವಾದರೂ ಬೇಕು. ಹೀಗಾಗಿ ಸೀಮಿತ ಸಂಖ್ಯೆಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT