ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಂಡು ಮಲ್ಲಿಗೆಗೆ ಬಂಪರ್ ಬೆಲೆ: ಆಂಧ್ರಪ್ರದೇಶ, ತಮಿಳುನಾಡಿಗೆ ಹೂವು ಪೂರೈಕೆ

Last Updated 10 ಡಿಸೆಂಬರ್ 2021, 1:50 IST
ಅಕ್ಷರ ಗಾತ್ರ

ನಂಗಲಿ: ಮಾರುಕಟ್ಟೆಯಲ್ಲಿ ಚೆಂಡು ಮಲ್ಲಿಗೆ ಹೂವಿಗೆ ಉತ್ತಮ ಬೇಡಿಕೆ ಇದ್ದು ಬೆಲೆಯೂ ಹೆಚ್ಚಳವಾಗಿದೆ. ಇದರಿಂದ ಎರಡು ಎಕರೆಯಲ್ಲಿ ಚೆಂಡು ಹೂ ಬೆಳೆದಿದ್ದ ಇಲ್ಲಿನ ರೈತ ಮೈಸೂರು ಸುರೇಶ್ ರಾಜು ಉತ್ತಮ ಲಾಭಗಳಿಸಿದ್ದಾರೆ.

ಮೈಸೂರು ಸುರೇಶ್ ರಾಜು ಕೇವಲ ಎರಡು ಎಕರೆಯಲ್ಲಿ ಒಂದು ಸಸಿಗೆ
₹ 2.50 ದರದಲ್ಲಿ ಖರೀದಿಸಿ 16,000 ಸಸಿಗಳನ್ನು ನಾಟಿ ಮಾಡಿದ್ದರು. ಒಟ್ಟಾರೆ ಸುಮಾರು ₹ 1.50 ಲಕ್ಷ ವೆಚ್ಚ ಮಾಡಿದ್ದರು.

ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಹೂ ₹ 130ಕ್ಕೆ ಮಾರಾಟವಾಗುತ್ತಿದೆ. ತೋಟದ ಬಳಿಗೆ ವ್ಯಾ‍ಪಾರಿಗಳೇ ಬಂದು ಕೆ.ಜಿಗೆ ₹ 100 ನೀಡಿ ಖರೀದಿಸುತ್ತಿದ್ದಾರೆ. ಇದರಿಂದ ಒಂದು ಬಾರಿ ಹೂ ಕಟಾವಿಗೆ ₹ 85,000 ಗಳಿಸಿದ್ದಾರೆ. ಇದೇ ಬೆಲೆ ಇದ್ದರೆ ಇಡೀ ತೋಟದ ಹೂ ಮುಗಿಯುವುದರೊಳಗೆ ಸುಮಾರು ₹ 7 ಲಕ್ಷದಿಂದ ₹ 8 ಲಕ್ಷ ಆದಾಯದ
ನಿರೀಕ್ಷೆಯಲ್ಲಿದ್ದಾರೆ.

ಈಚೆಗೆ ಬಿದ್ದ ಮಳೆಗೆ ಬಹುತೇಕ ಬೆಳೆಗಳು ನಾಶಗೊಂಡಿವೆ. ಇಂತಹ ಸ್ಥಿತಿಯಲ್ಲಿ ಮಳೆ ನೀರು ತೋಟದಲ್ಲಿ ಮೊಳಕಾಲು ಉದ್ದ ನಿಂತಿತ್ತು. ಹಾಗಾಗಿ ಬೆಳೆ ನಾಶಗೊಳ್ಳಬಹುದು ಎಂದುಕೊಂಡಿದ್ದೆವು. ಛಲ ಬಿಡದೆ ತೋಟದಲ್ಲಿ ನಿಂತಿದ್ದ ಮಳೆ ನೀರನ್ನು ಹೊರ ಹೋಗಲು ಹಳ್ಳ ಇರುವ ಕಡೆ ಕಾಲುವೆಗಳನ್ನು ತೆಗೆದೆವು. ನೀರು ಆಚೆ ಹೋಗುವಂತೆ ಮಾಡಲಾಯಿತು. ತೋಟವನ್ನು ಅಧಿಕ ತೇವಾಂಶದಿಂದ ಉಳಿಸಲಾಯಿತು. ನಂತರ ವಾರಕ್ಕೆ ಎರಡು ಬಾರಿ ತೇವದಲ್ಲಿಯೇ ಗಿಡಗಳಿಗೆ ಔಷಧಿ ಸಿಂಪಡಣೆ ಮಾಡಲಾಗುತ್ತಿತ್ತು. ಹೀಗಾಗಿ ತೋಟ ಉಳಿದುಕೊಂಡಿದೆ ಎಂದು ಸುರೇಶ್‌ ಅವರ ಸಹೋದರ ಹರೀಶ್ ಹೇಳಿದರು.

ಚೆಂಡು ಹೂ ಮಳೆ ಮತ್ತು ಕೆರೆಗಳ ಕೋಡಿಗಳಿಗೆ ಸಿಲುಕಿ ನಾಶಗೊಂಡಿದೆ. ಆದ್ದರಿಂದ ಮಾರುಕಟ್ಟೆಯಲ್ಲಿ ಚೆಂಡು ಹೂಗೆ ಬೆಲೆ ಹೆಚ್ಚಾಗಿದ್ದು ಆಂಧ್ರಪ್ರದೇಶದ ವಿ. ಕೋಟೆ, ತಮಿಳುನಾಡಿನ ಚೆನ್ನೈ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಹೂ ₹ 130ಕ್ಕೆ ಮಾರಾಟವಾಗುತ್ತಿದೆ ಎಂದು ವಿವರಿಸಿದರು.

ಹೂವಿಗೆ ಬಾರಿ ಬೇಡಿಕೆ ಇರುವುದರಿಂದ ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ವ್ಯಾಪಾರಿಗಳು ನೇರವಾಗಿ ತೋಟದ ಬಳಿಯೇ ಬಂದು ಕೊಂಡು ಕೊಳ್ಳುತ್ತಿದ್ದಾರೆ. ಇದರಿಂದ ಮಾರುಕಟ್ಟೆಗೆ ಹೋಗುವ ಖರ್ಚು ಉಳಿದಿದೆ ಎಂದು ತಿಳಿಸಿದರು.

‘ಮಳೆಗೆ ಬೆಳೆ ಸಿಲುಕಿದ್ದರಿಂದ ಹೂ ಸರಿಯಾಗಿ ಬರಲಿಲ್ಲ. ಗಿಡಗಳಲ್ಲಿ ಹೂ ಸಮೃದ್ಧವಾಗಿ ಇಲ್ಲದಿದ್ದರೂ ಮೊದಲ ಕಟಾವಿಗೆ 40 ಕೆ.ಜಿ ತೂಕದ ಒಂದು ಬ್ಯಾಗ್ ₹ 4 ಸಾವಿರಕ್ಕೆ ಮಾರಾಟವಾಯಿತು. ಮೊದಲ ಕಟಾವಿನಲ್ಲೇ 22 ಬ್ಯಾಗ್‌ ಹೂವನ್ನು ಮಾರಿದ್ದೇನೆ’ ಎಂದು ರೈತ ಮೈಸೂರು ಸುರೇಶ್ ರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT