ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಯತ್ತ ಸಂಸ್ಥೆಗಳ ಮೇಲೆ ದಾಳಿಗೆ ಕಳವಳ

ಮುಳಬಾಗಿಲಿನಲ್ಲಿ 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ
Last Updated 10 ಜನವರಿ 2021, 1:26 IST
ಅಕ್ಷರ ಗಾತ್ರ

ಮುಳಬಾಗಿಲು: ಈಚಿನ ದಿನಗಳಲ್ಲಿ ಸಮ್ಮೇಳನಗಳನ್ನು ಹೀಗೆಯೇ ನಡೆಸಬೇಕು, ಇಂತಿಷ್ಟು ಜನರೇ ಇರಬೇಕು, ಇಂಥವರನ್ನೇ ಆಹ್ವಾನಿಸಬೇಕೆಂಬ ನಿಯಮಗಳನ್ನು ಸಾಹಿತ್ಯ ಪರಿಷತ್‌ನಂತಹ ಸ್ವಾಯತ್ತವಿರುವ ಸಂಸ್ಥೆಗಳ ಮೇಲೆ ಸರ್ಕಾರದಿಂದ ಒತ್ತಡ ತರಲಾಗುತ್ತಿದೆ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಕಳವಳ ವ್ಯಕ್ತಪಡಿಸಿದರು.

ನಗರದ ಡಾ.ಡಿ.ವಿ.ಗುಂಡಪ್ಪ ಸುವರ್ಣ ಕನ್ನಡ ಗಡಿಭವನದಲ್ಲಿ ಶನಿವಾರ 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಫಾಟಿಸಿ ಮಾತನಾಡಿದರು.

ಸಾಹಿತ್ಯ ಪರಿಷತ್‌ನ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಅತಿರೇಕದ ಕೆಲಸಗಳನ್ನು ಸರ್ಕಾರಗಳು ಮಾಡಲು ಮುಂದಾಗಬಾರದು. ಭಾರತದಲ್ಲಿ ಹಲವಾರು ಭಾಷೆಗಳನ್ನು ಮಾತನಾಡುವವರಿದ್ದಾರೆ. ಅವರ ಮೇಲೆ ಕೇಂದ್ರ ಸರ್ಕಾರ ಹಿಂದಿಯನ್ನು ಹೇರಲು ಪ್ರಯತ್ನಿಸುತ್ತಿದ್ದು ಇದನ್ನು ವಿರೋಧಿಸಬೇಕಿದೆ ಎಂದು ಹೇಳಿದರು.

1947ರಲ್ಲಿ ಸ್ವಾತಂತ್ರ್ಯ ಬಂದ ನಂತರ ರಾಜ್ಯಗಳ ಪುನರ್‌ ವಿಂಗಡಣೆ ಸಮಯದಲ್ಲಿ ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ತೆಲುಗು ಮಾತನಾಡುತ್ತಿದ್ದರು. ಆಗ ಯಾರು ಕೋಲಾರ ಜಿಲ್ಲೆಯನ್ನು ಆಂಧ್ರಪ್ರದೇಶಕ್ಕೆ ಸೇರಿಸಬೇಕು ಎನ್ನಲಿಲ್ಲ. ಮದುವೆ ಅಹ್ವಾನ ಪತ್ರಿಕೆಗಳು ಕನ್ನಡ, ತೆಲುಗಿನಲ್ಲಿ ಇರುತ್ತಿತ್ತು. ಎಲ್ಲೆಡೆಯೂ ತೆಲುಗುಮಯವಿತ್ತು. ಆದರೆ ಎಂದಿಗೂ ತೆಲುಗು ಮತ್ತು ಕನ್ನಡ ಭಾಷಿಗರು ಸಂಘರ್ಷಕ್ಕಿಳಿಯಲಿಲ್ಲ. ಬರುಬರುತ್ತ ಮನೆಯಲ್ಲಿ ತೆಲುಗು ಮಾತನಾಡುವವರು ಕನ್ನಡವನ್ನು ಒಪ್ಪಿಕೊಂಡಿದ್ದಾರೆ. ಇಂದು ಹೆಚ್ಚಿನ ಜನ ಕನ್ನಡದಲ್ಲಿಯೇ ವ್ಯವಹರಿಸುತ್ತಿದ್ದಾರೆ. ಇನ್ನೊಂದು ಭಾಷೆಯನ್ನು ತುಳಿಯದೆ ಕನ್ನಡವನ್ನು ಕಟ್ಟಲಾಗಿದೆ. ಭಾಷೆ ಸೌಹಾರ್ದತೆಗೆ ಜಿಲ್ಲೆ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.

ಕಳೆದ ಹತ್ತು ವರ್ಷಗಳ ಹಿಂದೆ ದೇಶದಲ್ಲಿ 10ಸಾವಿರ ಭಾಷೆಗಳಿತ್ತು. ಇಂದು ಅದು ಆರುವರೆ ಸಾವಿರಕ್ಕಿಳಿದಿದೆ. ಮಿಕ್ಕ ಮೂರುವರೆ ಸಾವಿರ ಭಾಷೆಗಳು ಕಣ್ಮರೆಯಾಗಿದೆ. ಪ್ರತಿ ಭಾಷೆಯಲ್ಲೂ ವೈವಿಧ್ಯ ಇರುವುದರಿಂದ ಎಲ್ಲ ಭಾಷೆಗಳನ್ನು ಉಳಿಸಬೇಕು. ಕನ್ನಡ ಅನ್ನದ ಭಾಷೆಯಾಗಿ ಹೊರಬರಬೇಕು. ರಾಜ್ಯದಲ್ಲಿರುವ ಬೇರೆ ಭಾಷೆಯವರು ಕನ್ನಡ ಭಾಷೆಯನ್ನು ಕಲಿಯಬೇಕು. ಬದುಕು ಎಂದರೆ ಭೂಮಿ, ಜಲದ ಪ್ರಶ್ನೆಯು ಆಗಿರುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಿಂಗಳಿಗೆ ಎರಡು ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅದರಲ್ಲಿ ವಿಚಾರಸಂಕಿರಣ ಮತ್ತು ಚರ್ಚೆಗಳಿಗೆ ಅವಕಾಶ ಇರಬೇಕು ಎಂದರು.

ನಿವೃತ್ತ ಐಎಎಸ್ ಅಧಿಕಾರಿ ಪಿ.ಎನ್.ಶ್ರೀನಿವಾಸಾಚಾರಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಈಚಿನ ದಿನಗಳಲ್ಲಿ ಓದುವ ಹವ್ಯಾಸ ಯುವಜನರಲ್ಲಿ ಕಡಿಮೆಯಾಗಿದೆ. ಎಲ್ಲರೂ ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಸಮ್ಮೇಳನದ ಅಂಗವಾಗಿ ವಿಶೇಷ ಉಪನ್ಯಾಸ ಮುಳಬಾಗಿಲಿನಲ್ಲಿ ಹುಟ್ಟಿ ಬೆಳೆದ ಡಿ.ವಿ.ಗುಂಡಪ್ಪನವರ ಸಾಹಿತ್ಯ ಸೇವೆ ಕನ್ನಡ ಭಾಷೆಗೆ ಅಮೂಲ್ಯವಾದುದು. ಅವರ ಕೃತಿಗಳು ಬದುಕಿನ ಭಾಗವಾಗಿದೆ ಎಂದರು.

ಕೆ.ಆರ್.ನರಸಿಂಹನ್ ತಾಲ್ಲೂಕಿನ ಶಿಲಾಶಾಸನಗಳ ಕುರಿತು ಮಾತನಾಡಿ, ತಾಲ್ಲೂಕಿನಲ್ಲಿ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಿಗೆ ಸಂಬಂಧಿಸಿದ ಹೊಸಹೊಸ ಶಾಸನಗಳು ಇಂದಿಗೂ ಸಿಗುತ್ತಿದೆ. ಇವುಗಳು ಒಂದು ಕಾಲದ ಪುಲಿನಾಡು ಎಂಬ ಸಂಸ್ಥಾನಕ್ಕೆ ಸೇರಿದುದಾಗಿದೆ ಎಂದರು.

ಸರ್ಕಾರಿ ಮಹಿಳಾ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಅರಿವು ಶಿವಪ್ಪ, ಮುಳಬಾಗಿಲು ತಾಲ್ಲೂಕಿನ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಒಂದು ಅವಲೋಕನ ಕುರಿತು ಮಂಡಿಸಿ, ಅಂತರ್ಜಲ ಮಟ್ಟ ಕುಸಿದರೂ ಜನ ಇರುವ ನೀರಿನಲ್ಲಿಯೇ ಹಲವಾರು ಹೊಸ ಪ್ರಯೋಗಗಳಲ್ಲಿ ಕೃಷಿಯನ್ನು ಅವಲಂಬಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರಿಗೆ ಕೃಷಿಯೇ ಆಧಾರವಾಗಿದ್ದು ನೇರವಾಗಿ ಅವರ ಆರ್ಥಿಕ ಸ್ಥಿತಿಗತಿಗಳ ಕೃಷಿಯಲ್ಲಿಯೇ ಅವಲಂಬಿಸಿದೆ ಎಂದರು.

ಸರ್ಕಾರ ಕನ್ನಡಕ್ಕೆ ಆದ್ಯತೆ ನೀಡಲಿ: ರಾಜ್ಯ ಸರ್ಕಾರವು ಕನ್ನಡ ಭಾಷೆಯನ್ನು ವ್ಯಾವಹಾರಿಕ ಭಾಷೆ ಎಂದು ಘೋಷಿಸಿದೆ. ಅದರಂತೆ ಎಲ್ಲ ಇಲಾಖೆ, ಕಚೇರಿ, ನ್ಯಾಯಾಲಯ, ಬ್ಯಾಂಕ್‌ ಮತ್ತು ಐಟಿಬಿಟಿ ಕಂಪನಿಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ವ್ಯವಹರಿಸುವಂತೆ ಮಾಡಬೇಕು ಎಂದು ತಾಲ್ಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಚಾನ್ಪಾಷ ಹೇಳಿದರು.

7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು.

ಗೋಕಾಕ್ ವರದಿಯನ್ನು ಕಡ್ಡಾಯವಾಗಿ ಕಾರ್ಯಗತ ಮಾಡಬೇಕು. ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜ್ಞಾನಪೀಠ ಪ್ರಶಸ್ತಿಗಳನ್ನು ಕನ್ನಡಿಗರು ಪಡೆದಿದ್ದಾರೆ. ಮುಳಬಾಗಿಲಿನಲ್ಲಿ ಹುಟ್ಟಿದ ಡಾ.ಡಿ.ವಿ.ಗುಂಡಪ್ಪನವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಘಟಕದಿಂದ ಡಿವಿಜಿ ಅವರ ಪ್ರತಿಮೆ ಪ್ರತಿಷ್ಠಾಪನೆ ಮಾಡುತ್ತಿರುವುದು ಸಂತೋಷದ ವಿಷಯ ಎಂದರು.

ಬೆಳಿಗ್ಗೆ ರಾಷ್ಟ್ರಧ್ವಜವನ್ನು ತಹಶೀಲ್ದಾರ್ ಕೆ.ಎನ್.ರಾಜಶೇಖರ್, ನಾಡಧ್ವಜವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ನಾಗನಂದ ಕೆಂಪರಾಜ್, ಪರಿಷತ್ ಧ್ವಜವನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಯರಾಮರೆಡ್ಡಿ ಧ್ವಜಾರೋಹಣ ಮಾಡಿದರು.

ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಬಿ.ಆರ್.ದೇವರಾಜ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಕವಿಗಳಾದ ರಾಜೇಶ್ವರಿ, ಎಸ್.ಟಿ.ಭಾರತಿ, ಪ್ರಭಾವತಿ ಕೃಷ್ಣಪ್ಪ, ಅಸಲಿ ಅತ್ತಿಕುಂಟಿ ಸುಬ್ರಮಣಿ, ಎಂ.ವರದರಾಜ್, ಜಿ.ಎಸ್.ಕವಿತಾ, ಕೆ.ಬಿ.ಮಂಜುನಾಥ್, ಆರ್.ಎನ್.ಪುಷ್ಪಾ ಊರುಕುಂಟಿ ರವಿಕುಮಾರ್, ಕೆ.ಎಸ್.ವೆಂಕಟೇಶಬಾಬು, ನಂಗಲಿ ನಾಗರಾಜ್, ಬಲ್ಲಸೋಮು, ಚಿ.ನಾ.ನಾಗೇಶ್, ಶ್ರೀನಿವಾಸ್, ಎನ್.ಶಾರದಾ, ವೆಂಕಟೇಶ್‌ ಬಾಬು, ಹರಿನಾರಾಯಣ ಭಾಗವಹಿಸಿದ್ದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಆರ್.ಶಂಕರಪ್ಪ, ನಗರಸಭೆ ಅಧ್ಯಕ್ಷ ರಿಯಾಜ್ಅಹಮದ್, ತಾಲ್ಲೂಕು ಕನ್ನಡಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಕೆಂಬೋಡಿ ನಾಗರಾಜ್, ಆಲಂಗೂರು ಶಿವಣ್ಣ, ಡಾ.ವರ್ಣಶ್ರೀ, ಕೆ.ಎನ್.ಅರವಿಂದ್, ಸಿ.ಶ್ರೀನಿವಾಸ್, ಜಿ.ಶ್ರೀನಿವಾಸಮೂರ್ತಿ, ಟಿ.ಎಸ್.ರಮೇಶ್, ಡಾ.ಜಮಿನಿ ರಮೇಶ್, ರಾಮೇಗೌಡ, ವಕೀಲ ವಿ.ಜಯಪ್ಪ, ಯಾನಾದಹಳ್ಳಿ ನಾರಾಯಣಸ್ವಾಮಿ, ಬಂಗವಾದಿ ಶ್ರೀನಿವಾಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT