ಸೋಮವಾರ, ಜೂನ್ 1, 2020
27 °C

ಲಾಠಿ ಹಿಡಿದು ಬೀದಿಗಿಳಿದ ತಹಶೀಲ್ದಾರ್‌ ಶೋಭಿತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೊರೊನಾ ಸೋಂಕಿನ ಭೀತಿ ನಡುವೆಯೂ ನಗರದಲ್ಲಿ ಮಂಗಳವಾರ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಸಾರ್ವಜನಿಕರಿಗೆ ತಹಶೀಲ್ದಾರ್‌ ಶೋಭಿತಾ ಲಾಠಿ ಹಿಡಿದು ಬುದ್ಧಿಮಾತು ಹೇಳಿದರು.

ದೊಡ್ಡಪೇಟೆ ಮಾರುಕಟ್ಟೆ ರಸ್ತೆ, ಆಚಾರ್‌ ಪೇಟೆ, ಶಾರದಾ ಚಿತ್ರಮಂದಿರ ರಸ್ತೆ ಹಾಗೂ ಜೂನಿಯರ್‌ ಕಾಲೇಜು ಮೈದಾನದಲ್ಲಿನ ತರಕಾರಿ ವಹಿವಾಟಿನ ಸ್ಥಳಕ್ಕೆ ಬೆಳಿಗ್ಗೆಯೇ ಭೇಟಿ ಕೊಟ್ಟ ತಹಶೀಲ್ದಾರ್‌ ಲಾಠಿ ಹಿಡಿದು ಜನರಿಗೆ ಗುಂಪು ಸೇರದಂತೆ ಎಚ್ಚರಿಕೆ ನೀಡಿದರು.

ತರಕಾರಿ, ಹಣ್ಣು ಹಾಗೂ ದಿನಸಿ ಅಂಗಡಿಗಳ ಮುಂದೆ ಜನರು ಅಗತ್ಯ ವಸ್ತುಗಳ ಖರೀದಿಗೆ ಗುಂಪು ಗುಂಪಾಗಿ ನಿಂತಿದ್ದನ್ನು ನೋಡಿ ಅಸಮಾಧಾನಗೊಂಡ ತಹಶೀಲ್ದಾರ್‌, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಿವಿಮಾತು ಹೇಳಿದರು.

‘ದೇಶದಲ್ಲಿ ದಿನೇದಿನೇ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಸೋಂಕು ತಡೆಗಾಗಿ ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಅನ್ವಯವಾಗುವಂತೆ ದಿಗ್ಬಂಧನ ಘೋಷಿಸಿದೆ. ಆದರೆ, ಜನರು ಸರ್ಕಾರ ಆದೇಶವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೆಲ ವ್ಯಕ್ತಿಗಳು ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ರಸ್ತೆಗೆ ಬಂದು ಸಮಸ್ಯೆ ಸೃಷ್ಟಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಿಲ್ಲಾಧಿಕಾರಿ ಆದೇಶದಂತೆ ಆಹಾರ ಪದಾರ್ಥಗಳು, ಹಾಲು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಕಾಲಾವಕಾಶ ನೀಡಲಾಗಿದೆ. ಆದರೆ, ಜನರು ಈ ಅವಧಿಯ ನಂತರವೂ ರಸ್ತೆಗೆ ಬರುತ್ತಿದ್ದಾರೆ. ಮನೆಯಿಂದ ಹೊರಗೆ ಬರದಂತೆ ಪೊಲೀಸರು ಮನವಿ ಮಾಡಿದರೂ ಜನರು ಅವರ ಮಾತು ಕೇಳುತ್ತಿಲ್ಲ’ ಎಂದು ಕಿಡಿಕಾರಿದರು.

ಸಂಚಾರ ನಿಯಮ ಪಾಲಿಸದ ವಾಹನ ಸವಾರರು ಹಾಗೂ ಮುಖಗವಸು ಧರಿಸದೆ ಓಡಾಡುತ್ತಿದ್ದ ಜನರನ್ನು ತಹಶೀಲ್ದಾರ್‌ ತರಾಟೆಗೆ ತೆಗೆದುಕೊಂಡರು. ನಗರಸಭೆ ಆಯುಕ್ತ ಶ್ರೀಕಾಂತ್‌ ಮತ್ತು ಸಿಬ್ಬಂದಿಯು ತಹಶೀಲ್ದಾರ್‌ ಜತೆ ನಗರ ಪ್ರದಕ್ಷಿಣೆ ನಡೆಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು