ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದ ಕಮಾಲ್‌!

Published 23 ನವೆಂಬರ್ 2023, 6:30 IST
Last Updated 23 ನವೆಂಬರ್ 2023, 6:30 IST
ಅಕ್ಷರ ಗಾತ್ರ

ಕೋಲಾರ: ನೆರೆಯ ತೆಲಂಗಾಣದ ರಾಜ್ಯದ ವಿಧಾನಸಭೆ ಚುನಾವಣೆ ರಂಗು ಪಡೆಯುತ್ತಿದ್ದು, ಕೋಲಾರ ಜಿಲ್ಲೆಯ ಕಾಂಗ್ರೆಸ್‌ ಹಾಗೂ ಬಿಜೆಪಿ ಮುಖಂಡರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಒಟ್ಟು 119 ವಿಧಾನಸಭಾ ಕ್ಷೇತ್ರಗಳು ತೆಲಂಗಾಣ ರಾಜ್ಯದಲ್ಲಿವೆ. ನ.30ರಂದು ಮತದಾನ ನಡೆಯಲಿದ್ದು, ಡಿ.3ರಂದು ಫಲಿತಾಂಶ ಹೊರಬೀಳಲಿದೆ.

ಈಗಾಗಲೇ ಎರಡು ಅವಧಿಗೆ ಅಧಿಕಾರ ನಡೆಸಿರುವ ಕೆ.ಚಂದ್ರಶೇಖರ್‌ ರಾವ್‌ ನೇತೃತ್ವದ ಭಾರತ್‌ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಹ್ಯಾಟ್ರಿಕ್‌ ಸಾಧನೆಯತ್ತ ಗುರಿ ನೆಟ್ಟಿದೆ. ಈ ಪಕ್ಷವನ್ನು ಕಟ್ಟಿಹಾಕಲು ಕಾಂಗ್ರೆಸ್‌ ಸಡ್ಡೊಡೆದು ನಿಂತಿದೆ. ಬಿಜೆಪಿ ಕೂಡ ಪ್ರಯತ್ನ ನಡೆಸುತ್ತಿದೆ.

ತೆಲುಗು ಭಾಷೆ ನಿರರ್ಗಳತೆ ಕೂಡ ಕೋಲಾರದ ಮುಖಂಡರು, ಶಾಸಕರು, ಸಂಸದರಿಗೆ ವರದಾನವಾಗಿ ಪರಿಣಮಿಸಿದೆ. ಎಲ್ಲರೂ ತೆಲುಗಿನಲ್ಲಿ ಮಾತನಾಡಿ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗ ಪರ ಮತಯಾಚನೆ ನಡೆಸುತ್ತಿದ್ದಾರೆ. 

ರಾಜ್ಯದಿಂದ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರ ನಿಯೋಗವೇ ತೆರಳಿದ್ದು, ನ.27ವರೆಗೆ ತೆಲಂಗಾಣದಲ್ಲಿದ್ದು ಪ್ರಚಾರ ನಡೆಸಲಿದೆ. ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದು, ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ಅಲ್ಲೂ ಸಾರುತ್ತಿದ್ದಾರೆ.

ತೆಲಂಗಾಣದ ಭುಪಾಲಪಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸತ್ಯನಾರಾಯಣ ರಾವ್ ಪರ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹಾಗೂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ ಪ್ರಚಾರ ನಡೆಸಿದರು.

ತೆಲಂಗಾಣದಲ್ಲಿ ಕಾಂಗ್ರೆಸ್‌ ಈ ಬಾರಿ ಸರ್ಕಾರ ರಚಿಸುವ ಭರವಸೆ ಇದೆ. ಬಿಆರ್‌ಎಸ್‌ ಪಕ್ಷದ ಬಗ್ಗೆ ಜನ ಬೇಸತ್ತಿದ್ದಾರೆ. ನಾವು ಎರಡು ದಿನ ಇದ್ದು ಪ್ರಚಾರ ನಡೆಸಿದೆವು.
ಸಿ.ಲಕ್ಷ್ಮಿನಾರಾಯಣ, ಕೋಲಾರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

‘ರಾಜ್ಯದಲ್ಲಿನ ಗ್ಯಾರಂಟಿ ಕಾರ್ಯಕ್ರಮ ಯಶಸ್ವಿ ಆಗಿರುವುದನ್ನು ತೆಲಂಗಾಣದಲ್ಲಿ ಪ್ರಚಾರದ ವೇಳೆ ಹೇಳಿದ್ದೇವೆ. ಅಲ್ಲೂ ಆರು ಗ್ಯಾರಂಟಿ ಘೋಷಿಸಿದ್ದೇವೆ. ಹಳ್ಳಿಗಳಿಗೆ ಹೋಗಿ ಪ್ರಚಾರ ನಡೆಸಿದೆವು. ಹಬ್ಬದ ವಾತಾವರಣ ನೆಲೆಸಿದೆ. ಅಲ್ಲಿನ ಜನರಲ್ಲಿ ರಾಜಕೀಯ ಪ್ರಜ್ಞೆ ಚೆನ್ನಾಗಿದೆ. ಸಿನಿಮಾದಷ್ಟೇ ರಾಜಕೀಯವನ್ನು ಪ್ರೀತಿಸುತ್ತಾರೆ. ಸ್ವಯಂಪ್ರೇರಿತರಾಗಿ ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಾರೆ’ ಎಂದು ಕೋಲಾರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯವರೇ ಆದ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಈಗಾಗಲೇ ತೆಲಂಗಾಣದ ಬೆಲ್ಲಂಪಳ್ಳಿ, ಚೆನ್ನೂರ್‌, ಧರ್ಮಪುರಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಎರಡನೇ ಸುತ್ತಿನಲ್ಲಿ ಮತ್ತೊಮ್ಮೆ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.

ಬಿಜೆಪಿ ಸಂಸದ ಎಸ್‌.ಮುನಿಸ್ವಾಮಿ ನಾಲ್ಕೈದು ದಿನಗಳಿಂದ ತೆಲಂಗಾಣದಲ್ಲಿ ಬೀಡುಬಿಟ್ಟಿದ್ದಾರೆ. ಮಕ್ತಲ್‌ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಲಂಧರ್ ರೆಡ್ಡಿ ಜೊತೆ ಪ್ರಚಾರ ನಡೆಸುತ್ತಿದ್ದಾರೆ.

ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌ ಬುಧವಾರ ತೆಲಂಗಾಣದ ಮಿರ್ಯಾಲಗುಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಾತ್ತಲ ಲಕ್ಷ್ಮಣ ರೆಡ್ಡಿ ಪರ ಪ್ರಚಾರ ನಡೆಸಿದರು. ಬಳಿಕ ಸಂಗಾರೆಡ್ಡಿ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡರು. ಕರ್ನಾಟಕದಲ್ಲಿ ಘೋಷಿಸಿರುವ ಐದು ಗ್ಯಾರಂಟಿ ಕುರಿತು ಭರ್ಜರಿ ಭಾಷಣ ಮಾಡಿದ್ದಾರೆ.

ಚೋಪ್ಪದಂಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೆಡಿಪಲ್ಲಿ ಸತ್ಯಂ ಅವರ ಪರ ಕೆಜಿಎಫ್‌ ಶಾಸಕಿ ರೂಪಕಲಾ ಶಶಿಧರ್‌ ಪ್ರಚಾರ ನಡೆಸಿದರು.

ಈ ಮಧ್ಯೆ, ಕೆಲ ಸಂಘಟನೆಗಳಿಂದ ಟೀಕೆಯೂ ಎದುರಾಗಿದೆ. ಜಿಲ್ಲೆಯಲ್ಲಿ ಬರ ನೆಲೆಸಿದ್ದು, ರೈತರ ಸಮಸ್ಯೆ ಆಲಿಸದೆ ಪಕ್ಕದ ರಾಜ್ಯದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ ಎಂಬ ಆಕ್ರೋಶವೂ ಕೇಳಿ ಬರುತ್ತಿದೆ.

ಸಂಸದ ಎಸ್‌.ಮುನಿಸ್ವಾಮಿ ತೆಲಂಗಾಣದ ಮಕ್ತಲ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಲಂಧರ್ ರೆಡ್ಡಿ ಪರ ಪ್ರಚಾರ ನಡೆಸಿದರು
ಸಂಸದ ಎಸ್‌.ಮುನಿಸ್ವಾಮಿ ತೆಲಂಗಾಣದ ಮಕ್ತಲ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಲಂಧರ್ ರೆಡ್ಡಿ ಪರ ಪ್ರಚಾರ ನಡೆಸಿದರು
ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ತೆಲಂಗಾಣದ ಧರ್ಮಪುರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಕುಮಾರ್ ಪರ ಈಚೆಗೆ ಮತಯಾಚಿಸಿದರು
ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ತೆಲಂಗಾಣದ ಧರ್ಮಪುರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಕುಮಾರ್ ಪರ ಈಚೆಗೆ ಮತಯಾಚಿಸಿದರು
ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌ ಬುಧವಾರ ತೆಲಂಗಾಣದ ಮಿರ್ಯಾಲಗುಡ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಾತ್ತಲ ಲಕ್ಷ್ಮಣ ರೆಡ್ಡಿ ಪರ ಮತಯಾಚಿಸಿದರು
ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌ ಬುಧವಾರ ತೆಲಂಗಾಣದ ಮಿರ್ಯಾಲಗುಡ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಾತ್ತಲ ಲಕ್ಷ್ಮಣ ರೆಡ್ಡಿ ಪರ ಮತಯಾಚಿಸಿದರು
ಕೆಜಿಎಫ್‌ ಶಾಸಕಿ ರೂಪಕಲಾ ಶಶಿಧರ್‌ ಚೋಪ್ಪದಂಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೆಡಿಪಲ್ಲಿ ಸತ್ಯಂ ಪರ ಮತ ಯಾಚಿಸಿದರು
ಕೆಜಿಎಫ್‌ ಶಾಸಕಿ ರೂಪಕಲಾ ಶಶಿಧರ್‌ ಚೋಪ್ಪದಂಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೆಡಿಪಲ್ಲಿ ಸತ್ಯಂ ಪರ ಮತ ಯಾಚಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT