ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನ– ಚರ್ಚ್‌ ತೆರೆಯಲು ಸಿದ್ಧತೆ

ಲಾಕ್‌ಡೌನ್‌ ಸಡಿಲಿಕೆ: ಮಸೀದಿಯಲ್ಲಿ ಪ್ರಾರ್ಥನೆ
Last Updated 7 ಜೂನ್ 2020, 15:20 IST
ಅಕ್ಷರ ಗಾತ್ರ

ಕೋಲಾರ: ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸೋಮವಾರ (ಜೂನ್‌ 8) ದೇವಸ್ಥಾನ, ಮಸೀದಿ ಹಾಗೂ ಚರ್ಚ್‌ಗಳನ್ನು ತೆರೆಯಲು ಸಿದ್ಧತೆ ನಡೆದಿದೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಾರ್ಚ್‌ 24ರಂದು ಲಾಕ್‌ಡೌನ್‌ ಜಾರಿಯಾದ ಕಾರಣ ಜಿಲ್ಲೆಯಲ್ಲಿ ದೇವಸ್ಥಾನ, ಮಸೀದಿ ಹಾಗೂ ಚರ್ಚ್‌ಗಳನ್ನು ಬಂದ್‌ ಮಾಡಲಾಗಿತ್ತು. ಇದೀಗ ಇವುಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ್ದು, ಅರ್ಚಕರು, ಮೌಲ್ವಿಗಳು ಹಾಗೂ ಪಾದ್ರಿಗಳು ಪ್ರತಿನಿತ್ಯದಂತೆ ಧಾರ್ಮಿಕ ವಿಧಿವಿಧಾನ ನಡೆಸಲು ಉತ್ಸುಕರಾಗಿದ್ದಾರೆ.

ಪ್ರಮುಖವಾಗಿ ಜಿಲ್ಲೆಯ ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ, ಕೆಜಿಎಫ್‌ ತಾಲ್ಲೂಕಿನ ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಸ್ಥಾನ, ಮುಳಬಾಗಿಲು ತಾಲ್ಲೂಕಿನ ಪ್ರಸಿದ್ಧ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಕುರುಡಮಲೆ ದೇವಸ್ಥಾನದಲ್ಲಿ ಪೂಜೆಗೆ ಸಿದ್ಧತೆ ನಡೆದಿದೆ.

ದೇವಸ್ಥಾನಗಳಲ್ಲಿ ಭಕ್ತರಿಗೆ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಜತೆಗೆ ಭಕ್ತರಿಗೆ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಸ್ಯಾನಿಟೈಸರ್ ನೀಡಲಾಗುತ್ತದೆ. ಅಲ್ಲದೇ, ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳುವಂತೆ ದೇವಸ್ಥಾನಗಳ ಪ್ರವೇಶ ದ್ವಾರದಲ್ಲೇ ಸೂಚನಾ ಫಲಕ ಹಾಕಲಾಗಿದೆ.

ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಪುರಾಣ ಪ್ರಸಿದ್ಧ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ 7 ಗಂಟೆಯಂದ ದೇವರ ದರ್ಶನಕ್ಕೆ ಸಿದ್ಧತೆ ಮಾಡಲಾಗಿದೆ. ದೇವಾಲಯದ ಆವರಣದಲ್ಲಿ ಚೌಕಾಕಾರದ ಪಟ್ಟಿಗಳನ್ನು ಬರೆದು ಭಕ್ತರಿಗೆ ಅಂತರ ಕಾಯ್ದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ದೇವಾಲಯದ ವಾಹನ ನಿಲುಗಡೆ ಜಾಗಕ್ಕೆ (ಪಾರ್ಕಿಂಗ್‌) ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಭಕ್ತರ ದೇಹದ ಉಷ್ಣತೆಯ ಪರೀಕ್ಷೆಗಾಗಿ ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆ ಮಾಡಲಾಗಿದೆ.

ತೀರ್ಥ–ಪ್ರಸಾದವಿಲ್ಲ: ದೇವಸ್ಥಾನಗಳಲ್ಲಿ ಯಾವುದೇ ಸೇವೆಗಳಿರುವುದಿಲ್ಲ. ಭಕ್ತರು ದೇವಾಲಯಕ್ಕೆ ಪೂಜಾ ಸಾಮಗ್ರಿ ತರುವಂತಿಲ್ಲ ಮತ್ತು ಮುಡಿ ಸೇವೆಗೆ ಅವಕಾಶವಿಲ್ಲ. 10 ವರ್ಷದೊಳಗಿನ ಮಕ್ಕಳಿಗೆ ಮತ್ತು 60 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ, ಗರ್ಭಿಣಿಯರಿಗೆ ದೇವಸ್ಥಾನಗಳಲ್ಲಿ ಪ್ರವೇಶವಿಲ್ಲ. ತೀರ್ಥ ಮತ್ತು ಪ್ರಸಾದ ವಿನಿಯೋಗ ಇರುವುದಿಲ್ಲ.

ಭಕ್ತರಿಗೆ ನಿರಾಸೆ: ಜಿಲ್ಲಾ ಕೇಂದ್ರದ ಕೋಟೆ ಬಡಾವಣೆಯಲ್ಲಿ ಕೊರೊನಾ ಸೋಂಕಿತ ಪತ್ತೆಯಾಗಿರುವ ಕಾರಣ ಇಡೀ ಬಡಾವಣೆಯನ್ನು ನಿರ್ಬಂಧಿತ ಪ್ರದೇಶವಾಗಿ (ಕಂಟೈನ್‌ಮೆಂಟ್‌ ಝೋನ್‌) ಘೋಷಿಸಿದೆ. ಇದೇ ಬಡಾವಣೆಯಲ್ಲಿರುವ ಕೋಲಾರಮ್ಮ ದೇವಸ್ಥಾನದಲ್ಲಿ ಪೂಜೆಗೆ ಅವಕಾಶವಿಲ್ಲ. ಕೆಲ ದಿನಗಳವರೆಗೆ ಕೋಲಾರಮ್ಮ ದೇವಸ್ಥಾನ ತೆರೆಯದಂತೆ ಆದೇಶಿಸಲಾಗಿದ್ದು, ನಗರ ದೇವತೆಯ ದರ್ಶನಕ್ಕೆ ಕಾದಿದ್ದ ಭಕ್ತರಿಗೆ ನಿರಾಸೆಯಾಗಿದೆ.

ಕೋಲಾರಮ್ಮ ದೇವಸ್ಥಾನದ ಪಕ್ಕದಲ್ಲೇ ಇರುವ ಸೋಮೇಶ್ವರ ದೇವಾಲಯ ಸಹ ಕಂಟೈನ್‌ಮೆಂಟ್‌ ಝೋನ್‌ನಲ್ಲಿದೆ. ಹೀಗಾಗಿ ಈ ದೇವಾಲಯ ಸಹ ತೆರೆಯುವುದಿಲ್ಲ.

ಎಲ್ಲರ ಜವಾಬ್ದಾರಿ: ‘ಮಸೀದಿಗಳಲ್ಲಿ ಪ್ರಾರ್ಥನೆ ನಡೆಯಲಿದ್ದು, ಪ್ರಾರ್ಥನೆಗೆ ಬರುವವರಿಗೆ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಜತೆಗೆ ಮಾಸ್ಕ್ ಧರಿಸಿ ಬರುವಂತೆ ಸೂಚನೆ ನೀಡಲಾಗಿದೆ’ ಎಂದು ಅಮಿನ್ ಮಸೀದಿ ಅಧ್ಯಕ್ಷ ಜಾಫರ್ ತಿಳಿಸಿದರು.

‘ಜನರು ತಮ್ಮ ಆರೋಗ್ಯ ತಾವೇ ಕಾಪಾಡಿಕೊಳ್ಳಬೇಕು. ಸರ್ಕಾರದ ಮಾರ್ಗಸೂಚಿಗೆ ಒಳಪಟ್ಟು ಸಮಾಜದ ಆರೋಗ್ಯ ಕಾಪಾಡುವುದು ಎಲ್ಲರ ಜವಾಬ್ದಾರಿ. ಮಸೀದಿಗೆ ಬರುವ ಪ್ರತಿಯೊಬ್ಬರ ದೇಹದ ಉಷ್ಣತೆ ಪರೀಕ್ಷಿಸಲಾಗುತ್ತದೆ. ದೇಹದ ಉಷ್ಣತೆ ಹೆಚ್ಚಿದ್ದರೆ ಅವರಿಗೆ ಪ್ರಾರ್ಥನೆಯಲ್ಲಿ ಭಾಗಿಯಾಗಲು ಅವಕಾಶವಿಲ್ಲ’ ಎಂದು ಹೇಳಿದರು.

ಸಂತಸ ತಂದಿದೆ: ‘ಲಾಕ್‌ಡೌನ್ ಕಾರಣಕ್ಕೆ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಲ್ಲಿಸಲಾಗಿತ್ತು. ಇದೀಗ ಸರ್ಕಾರ ಪ್ರಾರ್ಥನೆಗೆ ಅವಕಾಶ ನೀಡಿರುವುದು ಸಂತಸ ತಂದಿದೆ. ಕೊರೊನಾ ಸೋಂಕು ಹರಡದಂತೆ ಎಚ್ಚರ ವಹಿಸುತ್ತೇವೆ. ಭಾನುವಾರ ಮತ್ತು ಬುಧವಾರ ಮಾತ್ರ ಚರ್ಚ್ ತೆರೆದು ಪ್ರಾರ್ಥನೆ ನಡೆಸಲಾಗುತ್ತದೆ’ ಎಂದು ಮೆಥೋಡಿಸ್ಟ್ ಚರ್ಚ್‌ನ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಶಾಂತಕುಮಾರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT