ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಬಾಗಿಲಿಗೆ ಪಠ್ಯಪುಸ್ತಕ ಪೂರೈಕೆ

ಶಿಕ್ಷಣ ಇಲಾಖೆ ಕ್ರಮ: ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಗೌಡ ಹೇಳಿಕೆ
Last Updated 16 ಜೂನ್ 2020, 14:36 IST
ಅಕ್ಷರ ಗಾತ್ರ

ಕೋಲಾರ: ‘ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಶೇ 80ರಷ್ಟು ಪಠ್ಯಪುಸ್ತಕಗಳು ಸರಬರಾಜಾಗಿದ್ದು, ತರಗತಿ ಆರಂಭಕ್ಕೆ ಮುನ್ನವೇ ಶಾಲೆಗಳಿಗೆ ಪುಸ್ತಕ ತಲುಪಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ತಿಳಿಸಿದರು.

ಈಗಾಗಲೇ ಎಸ್‍ಎಟಿಎಸ್‌ನಲ್ಲಿ ನಗದು ತುಂಬಿರುವ ಖಾಸಗಿ ಶಾಲೆಗಳ ಮುಖ್ಯಸ್ಥರಿಗೆ ನಗರದ ಪಠ್ಯಪುಸ್ತಕ ಗೋದಾಮಿನಲ್ಲಿ ಮಂಗಳವಾರ ಪಠ್ಯಪುಸ್ತಕ ವಿತರಿಸಿ ಮಾತನಾಡಿ, ‘ಶಾಲೆ ಆರಂಭದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ, ಮುಂದಿನ ಒಂದೆರಡು ವಾರದಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಪಠ್ಯಪುಸ್ತಕ ತಲುಪಿಸಲಾಗುತ್ತದೆ’ ಎಂದರು.

‘ಮೊದಲಿಗೆ ಹಣ ತುಂಬಿರುವ ಖಾಸಗಿ ಶಾಲೆ ಆಡಳಿತ ಮಂಡಳಿಯವರು ಇಲಾಖೆ ಗೋದಾಮಿಗೆ ಬಂದು ಪುಸ್ತಕ ಪಡೆಯಬೇಕು. ಒಂದೆರಡು ವಾರದಲ್ಲಿ ಬಾಕಿ ಇರುವ ಪಠ್ಯಪುಸ್ತಕಗಳು ಬರುವ ಸಾಧ್ಯತೆಯಿದ್ದು, ಎಲ್ಲಾ ಪುಸ್ತಕಗಳನ್ನು ಮಾರ್ಗಕ್ಕೊಂದು ವಾಹನ ವ್ಯವಸ್ಥೆ ಮಾಡಿ ಆಯಾ ಶಾಲೆಗೆ ತಲುಪಿಸಲಾಗುವುದು’ ಎಂದು ವಿವರಿಸಿದರು.

‘ಶಿಕ್ಷಕರು ಪಠ್ಯಪುಸ್ತಕಗಳಿಗೆ ಅಲೆಯುವಂತಾಗಬಾರದು. ಇಲಾಖೆಯೇ ಪುಸ್ತಕ ತಲುಪಿಸುವ ಕೆಲಸ ಮಾಡಲಿದೆ. ಪಡೆದ ಪುಸ್ತಕಗಳನ್ನು ಸೂಕ್ತ ಸ್ಥಳದಲ್ಲಿ ಸಂಗ್ರಹಿಸಿ ಮಕ್ಕಳಿಗೆ ವಿತರಿಸುವುದು ಶಿಕ್ಷಕರ ಜವಾಬ್ದಾರಿ’ ಎಂದು ಹೇಳಿದರು.

ಸ್ವಚ್ಛತೆಗೆ ಆದ್ಯತೆ: ‘ಶಾಲೆಗಳು ಈಗಾಗಲೇ ತೆರೆದಿದ್ದು, ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಮಕ್ಕಳ ದಾಖಲಾತಿ ಆಂದೋಲನದ ಜತೆಗೆ ಶಿಕ್ಷಕರು ಶಾಲಾ ಆವರಣ ಸ್ವಚ್ಛವಾಗಿ ಇಟ್ಟುಕೊಳ್ಳಲು ಆದ್ಯತೆ ನೀಡಬೇಕು. ಶಾಲೆಗಳ ಆರಂಭ ವಿಳಂಬವಾಗುವ ಸಾಧ್ಯತೆಯಿದ್ದು, ಹೊಸ ಪುಸ್ತಕಗಳಿಗೆ ಗೆದ್ದಲು ಹಿಡಿದು ಹಾಳಾಗಬಹುದು. ಅಂತಹ ಪರಿಸ್ಥಿತಿ ಎದುರಾಗದಂತೆ ಎಚ್ಚರಿಕೆ ವಹಿಸಬೇಕು. ಪುಸ್ತಕಗಳು ಹಾಳಾದರೆ ಆಯಾ ಶಾಲಾ ಮುಖ್ಯ ಶಿಕ್ಷಕರೇ ಜವಾಬ್ದಾರರು’ ಎಂದು ಎಚ್ಚರಿಕೆ ನೀಡಿದರು.

‘ಎಸ್ಸೆಸ್ಸೆಲ್ಸಿ ಪರೀಕ್ಷಾ ದಿನಾಂಕ ಪ್ರಕಟವಾಗಿರುವುದರಿಂದ ಮಕ್ಕಳಿಗೆ ಶೀಘ್ರವೇ ಪ್ರವೇಶಪತ್ರ ವಿತರಿಸಿ. ಅವರು ಕೇಂದ್ರದಲ್ಲಿ ಪರೀಕ್ಷೆ ಬರೆಯುವ ಕೊಠಡಿ ಸಂಖ್ಯೆಯ ಮಾಹಿತಿ ನೀಡಿ. ಪರೀಕ್ಷಾ ಕೊಠಡಿಯಲ್ಲಿ ಅಂತರ ಕಾಯ್ದುಕೊಳ್ಳುವಂತೆ ಮಾರ್ಗದರ್ಶನ ನೀಡಿ’ ಎಂದು ಸೂಚಿಸಿದರು.

ಜಿಲ್ಲಾ ಪಠ್ಯಪುಸ್ತಕ ವಿತರಣೆ ಪ್ರಕ್ರಿಯೆಯ ನೋಡಲ್ ಅಧಿಕಾರಿ ಗಾಯತ್ರಿ, ಬಿಇಒ ಕಚೇರಿ ವ್ಯವಸ್ಥಾಪಕ ಮುನಿಸ್ವಾಮಿಗೌಡ, ಇಸಿಒಗಳಾದ ವೆಂಕಟಾಚಲಪತಿ, ರಾಘವೇಂದ್ರ, ಬೈರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT