ಬುಧವಾರ, ಜುಲೈ 28, 2021
28 °C
ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಅಸಮಾಧಾನ

ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಜಡ್ಡುಗಟ್ಟಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಜಡ್ಡುಗಟ್ಟಿದ್ದು, ಅಧಿಕಾರಿ ವರ್ಗದಲ್ಲಿ ಆಲಸ್ಯವಿದೆ. ಇದಕ್ಕೆ ಚಾಟಿ ಬೀಸಿ ಸರಿ ದಾರಿಗೆ ತರಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅಭಿಪ್ರಾಯಪಟ್ಟರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಯ ಕಂದಾಯ, ಸಮಾಜ ಕಲ್ಯಾಣ ಹಾಗೂ ಇತರೆ ಇಲಾಖೆಗಳು ಹದಗೆಟ್ಟಿವೆ. ಕೊರೊನಾ ಸೋಂಕಿನ ಸಮಸ್ಯೆ ಮುಂದಿಟ್ಟುಕೊಂಡು ಕೆಲ ಅಧಿಕಾರಿಗಳು ಕೆಲಸ ಮಾಡುವುದನ್ನೇ ಮರೆತಿದ್ದಾರೆ’ ಎಂದು ಕಿಡಿಕಾರಿದರು.

‘ಕಂದಾಯ ಇಲಾಖೆಯಲ್ಲಿ ರೈತರ ಸಮಸ್ಯೆಗಳು ಸಾಕಷ್ಟಿವೆ. ಸಣ್ಣ ಕೆಲಸ ಮಾಡಿಸಿಕೊಳ್ಳಲೂ ತಿಂಗಳುಗಟ್ಟಲೇ ಕಚೇರಿಗೆ ಅಲೆಯಬೇಕಿದೆ. ಪಹಣಿ ಸೇರಿದಂತೆ ಜಮೀನಿನ ದಾಖಲೆಪತ್ರಗಳು ಸಕಾಲಕ್ಕೆ ಆಗುತ್ತಿಲ್ಲ. ಶಾಸಕ ಕೆ.ಶ್ರೀನಿವಾಸಗೌಡರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ 6 ಬಾರಿ ಕುಂದು ಕೊರತೆ ಸಭೆ ನಡೆಸಲಾಗಿದೆ ಆದರೆ, ರೈತರ ಕೆಲಸ ಕಾರ್ಯ ಪೂರ್ಣಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಧಿಕಾರಿಗಳು ಕಣ್ಣೊರೆಸುವ ಕೆಲಸ ಮಾಡುತ್ತಾರೆ. ಕಾಸಿಲ್ಲದೆ ಯಾವ ಕೆಲಸವೂ ಆಗುತ್ತಿಲ್ಲ. ಬಿಜೆಪಿಯವರು ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಕೋಲಾರ ಕ್ಷೇತ್ರದ ರೈತರು ಮತ್ತು ಬಡವರ ಸಮಸ್ಯೆ ತಿಳಿಯಲು ಶಾಸಕರ ನೇತೃತ್ವದಲ್ಲಿ ಹೋಬಳಿವಾರು ಸಭೆ ನಡೆಸುತ್ತೇವೆ’ ಎಂದು ವಿವರಿಸಿದರು.

ದೂರು ಬಂದಿವೆ: ‘ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶದಲ್ಲಿ ಸಾಕಷ್ಟು ಮಂದಿಗೆ ಸಕಾಲಕ್ಕೆ ವೃದ್ಧಾಪ್ಯ ವೇತನ ಪಾವತಿ ಆಗುತ್ತಿಲ್ಲ ಎಂಬ ದೂರುಗಳಿವೆ. ವಿಧವಾ ವೇತನ, ಮತ್ತಿತರ ಭತ್ಯೆ ಪಾವತಿ ಆಗದಿರುವ ಬಗ್ಗೆ ದೂರು ಬಂದಿವೆ. ಸದ್ಯದಲ್ಲೇ ಈ ಸಮಸ್ಯೆ ಪರಿಹರಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಲಾಕ್‌ಡೌನ್‌ ಪರಿಹಾರವಲ್ಲ. ಯಾವುದೇ ಕಾರಣಕ್ಕೂ ಎಪಿಎಂಸಿ ಬಂದ್ ಮಾಡಬಾರದು. ಜಿಲ್ಲೆಯ ರೈತರು ಈಗಾಗಲೇ ಲಾಕ್‌ಡೌನ್‌ನಿಂದ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಹೊರ ರಾಜ್ಯಗಳಿಗೆ ತರಕಾರಿ ಸಾಗಣೆ ಆಗುವ ಸಂದರ್ಭದಲ್ಲಿ ಎಪಿಎಂಸಿ ಬಂದ್ ಮಾಡಿದರೆ ರೈತರಿಗೆ ಮತ್ತಷ್ಟು ನಷ್ಟ ಆಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಎಪಿಎಂಸಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮಾರುಕಟ್ಟೆಗಳಲ್ಲಿನ ತರಕಾರಿ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಕೊರೊನಾ ಸೋಂಕಿನ ಹಿನ್ನೆಲ್ಲೆಯಲ್ಲಿ ಮಾರುಕಟ್ಟೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್‌ ಧರಿಸುವುದು ಮುಖ್ಯ. ಜತೆಗೆ ಸ್ಯಾನಿಟೈಸರ್‌ ಬಳಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.