ಶನಿವಾರ, ಸೆಪ್ಟೆಂಬರ್ 25, 2021
22 °C
ವರ್ತಕರ ಲಾಭದಾಸೆಗೆ ಗ್ರಾಹಕರು ಬಲಿಪಶು: ಅಧಿಕಾರಿಗಳ ಮೌನ

ಕೋಲಾರ: ಕಲಬೆರಕೆ ಅಡುಗೆ ಎಣ್ಣೆ ಮಾರಾಟ ಜಾಲ ಸಕ್ರಿಯ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯಲ್ಲಿ ಕಲಬೆರಕೆ ಅಡುಗೆ ಎಣ್ಣೆ ಮಾರಾಟ ಜಾಲ ಸಕ್ರಿಯವಾಗಿದ್ದು, ಹಲವೆಡೆ ದಿನಸಿ ಅಂಗಡಿಗಳಲ್ಲಿ ಕದ್ದುಮುಚ್ಚಿ ಪ್ಯಾಕಿಂಗ್‌ ಇಲ್ಲದ ಎಣ್ಣೆಯನ್ನು ಚಿಲ್ಲರೆಯಾಗಿ ಮಾರಾಟ ಮಾಡಲಾಗುತ್ತಿದೆ.

ಆಂಧ್ರಪ್ರದೇಶ, ಕೇರಳ, ತಮಿಳುನಾಡು ರಾಜ್ಯದಿಂದ ಪ್ರತಿನಿತ್ಯ ಲೋಡ್‌ಗಟ್ಟಲೇ ಬರುವ ನಕಲಿ ಎಣ್ಣೆಯನ್ನು ವ್ಯಾಪಾರಿಗಳು ರಾಜಾರೋಷವಾಗಿ ಮಾರುತ್ತಿದ್ದಾರೆ. ಅಗ್ಗದ ಬೆಲೆಗೆ ಸಿಗುವ ಈ ಎಣ್ಣೆಯು ಆರೋಗ್ಯಕ್ಕೆ ಕಂಟಕವಾದರೂ ಗ್ರಾಹಕರು ಹಣ ಉಳಿಸುವ ಏಕೈಕ ಕಾರಣಕ್ಕೆ ಕಲಬೆರಕೆ ಎಣ್ಣೆ ಖರೀದಿಸಿ ಬಳಸುತ್ತಿದ್ದಾರೆ.

ದೊಡ್ಡ ಮಿಲ್‌, ಕಾರ್ಖಾನೆಗಳು, ಸಣ್ಣಪುಟ್ಟ ಘಟಕಗಳಿಂದ ಡ್ರಮ್‌ಗಳಲ್ಲಿ ಮಾರುಕಟ್ಟೆಗೆ ಬರುವ ಹಾಗೂ ಮಾರುಕಟ್ಟೆಯಲ್ಲಿ ಚಿಲ್ಲರೆಯಾಗಿ ಸಿಗುವ ಅಡುಗೆ ಎಣ್ಣೆಯು ಶೇ 50ರಿಂದ 80ರಷ್ಟು ಕಲಬೆರಕೆಯಿಂದ ಕೂಡಿರುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಸ್ಎಐ) ನಿಯಮದ ಪ್ರಕಾರ ಅಡುಗೆ ಎಣ್ಣೆಯನ್ನು ಕಡ್ಡಾಯವಾಗಿ ಪ್ಯಾಕೆಟ್‌, ಪ್ಲಾಸ್ಟಿಕ್‌ ಕ್ಯಾನ್‌ ಅಥವಾ ಡಬ್ಬದಲ್ಲಿ (ಟಿನ್‌) ತುಂಬಿಸಿ ಮಾರಾಟ ಮಾಡಬೇಕು. ಅಲ್ಲದೇ, ಉತ್ಪಾದನೆ ಮತ್ತು ವಹಿವಾಟಿಗೆ ಭಾರತೀಯ ಪ್ರಮಾಣಿತ ಸಂಸ್ಥೆ (ಬಿಎಸ್‌ಐ), ಎಫ್‌ಎಸ್‌ಎಸ್‌ಎಐನಿಂದ ವಾಣಿಜ್ಯ ಪರವಾನಗಿ ಪಡೆಯಬೇಕು. ಜತೆಗೆ ಎಣ್ಣೆ ಪ್ಯಾಕೆಟ್‌ ಅಥವಾ ಟಿನ್‌ ಮೇಲೆ ಗುಣಮಟ್ಟ ಖಾತ್ರಿಯ ಮುದ್ರೆ ಇರಬೇಕು.

ಆದರೆ, ಅಧಿಕ ಲಾಭದಾಸೆಗೆ ಹಾಗೂ ವಾಣಿಜ್ಯ ಪರವಾನಗಿ ಶುಲ್ಕ ಉಳಿಸುವ ಉದ್ದೇಶಕ್ಕೆ ಅಡ್ಡದಾರಿ ಹಿಡಿದಿರುವ ವರ್ತಕರು ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಡ್ರಮ್‌ಗಳಲ್ಲಿ ಎಣ್ಣೆ ತಂದು ಅದನ್ನು ಸ್ಥಳೀಯವಾಗಿ ಕ್ಯಾನ್‌, ಟಿನ್‌, ಪ್ಲಾಸ್ಟಿಕ್‌ ಕವರ್‌ಗೆ ತುಂಬಿಸಿ ಮಾರುತ್ತಿದ್ದಾರೆ. ನಗರಸಭೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಕಣ್ತಪ್ಪಿಸಿ ನಡೆಯುತ್ತಿರುವ ಈ ದಂದೆಗೆ ಜನರು ಅರಿವಿಲ್ಲದೆ ಬಲಿಪಶುವಾಗುತ್ತಿದ್ದಾರೆ.

ಪ್ಯಾರಾಫಿನ್‌ ಮಿಶ್ರಣ: ಚಿಲ್ಲರೆಯಾಗಿ ಮಾರಾಟ ಮಾಡುವ ಎಣ್ಣೆಗೆ ಪೆಟ್ರೋಲಿಯಂ ಉಪ ಉತ್ಪನ್ನವಾದ ಪ್ಯಾರಾಫಿನ್‌ ಬೆರೆಸಲಾಗುತ್ತಿದೆ. ದ್ರವ ರೂಪದ ಪ್ಯಾರಾಫಿನ್‌ನ ಬೆಲೆ ಕಡಿಮೆಯಿದ್ದು, ಈ ರಾಸಾಯನಿಕವನ್ನು ಅಡುಗೆ ಎಣ್ಣೆಯಲ್ಲಿ ಬೆರೆಸಿದರೆ ಬರಿಗಣ್ಣಿಗೆ ಪತ್ತೆ ಆಗುವುದೇ ಇಲ್ಲ. ಪೆಟ್ರೋಲಿಯಂ ಸಂಸ್ಕರಣೆ ಹಂತದಲ್ಲಿ ಕೊನೆಗೆ ಉಳಿಯುವ ಪ್ಯಾರಾಫಿನ್‌ ರಾಸಾಯನಿಕವು ಕಲಬೆರಕೆಗೆ ಸೂಕ್ತ ಪದಾರ್ಥ. ಹಾಲಿನಲ್ಲಿ ನೀರು ಹೊಂದಿಕೊಳ್ಳುವಂತೆ ಎಣ್ಣೆಯೊಡನೆ ಬೆರೆತು ಹೋಗುವ ಗುಣವುಳ್ಳ ಪ್ಯಾರಾಫಿನ್‌ ಕ್ಯಾನ್ಸರ್‌ಕಾರಕವಾಗಿದೆ.

ಕಡಿಮೆ ಬೆಲೆ, ಕೊಬ್ಬಿನ ಅಂಶ ಹೆಚ್ಚಿರುವ ತಾಳೆ ಎಣ್ಣೆ (ಪಾಮ್ ಆಯಿಲ್‌) ಹೆಚ್ಚಿನ ಪ್ರಮಾಣದಲ್ಲಿ ಮಲೇಷ್ಯಾ ಹಾಗೂ ಇಂಡೊನೇಷ್ಯಾದಿಂದ ಆಮದಾಗುತ್ತದೆ. ಅಪಾಯಕಾರಿಯಾದ ಈ ಎಣ್ಣೆಯನ್ನು ಹೆಚ್ಚಿನ ದರದ ಶೇಂಗಾ ಹಾಗೂ ಇತರೆ ಎಣ್ಣೆ ಜೊತೆ ಮಿಶ್ರಣ ಮಾಡಿ ಮಾರಲಾಗುತ್ತಿದೆ.

ಧಾರಾಳವಾಗಿ ಸಿಗುವ ಪೆಟ್ರೋಲಿಯಂ ಉಪ ಉತ್ಪನ್ನ ‘ಮಿನರಲ್‌ ಆಯಿಲ್‌’ ಅನ್ನು ಅಡುಗೆ ಎಣ್ಣೆಗೆ ಬೆರೆಸಲಾಗುತ್ತದೆ. ಮಿನರಲ್‌ ಆಯಿಲ್‌ ಬೆಲೆ ಲೀಟರ್‌ಗೆ ₹ 40ರಿಂದ ₹ 60 ಇದ್ದು, ವ್ಯಾಪಾರಿಗಳು ಇದನ್ನು ಅಡುಗೆ ಎಣ್ಣೆಗೆ ಬೆರೆಸಿ ಪ್ರತಿ ಲೀಟರ್‌ಗೆ ಕನಿಷ್ಠ ₹ 50 ಲಾಭ ಗಳಿಸುತ್ತಿದ್ದಾರೆ. ಮಿನರಲ್‌ ಆಯಿಲ್‌ ಎಲ್ಲಾ ಬಗೆಯ ಖಾದ್ಯ ತೈಲದಲ್ಲಿ ಸುಲಭವಾಗಿ ಮಿಶ್ರಣವಾಗುತ್ತದೆ. ಇದು ಯಾವುದೇ ವಾಸನೆ, ರುಚಿ, ಬಣ್ಣ ಹೊಂದಿಲ್ಲದೆ ಇರುವುದು ವ್ಯಾಪಾರಿಗಳಿಗೆ ಪಾಲಿಗೆ ವರದಾನವಾಗಿದೆ.

ಬೆಲೆ ಕಡಿಮೆ: ಗುಣಮಟ್ಟದ ಬ್ರಾಂಡೆಡ್‌ ಎಣ್ಣೆ ಬೆಲೆಗೆ ಹೋಲಿಸಿದರೆ ಚಿಲ್ಲರೆಯಾಗಿ ಮಾರಾಟ ಮಾಡುವ ಎಣ್ಣೆ ಬೆಲೆ ಕಡಿಮೆಯಿದೆ. ಬಹುಪಾಲು ಬ್ರಾಂಡೆಡ್‌ ಎಣ್ಣೆ ಬೆಲೆ ₹ 150ರ (ಲೀಟರ್‌ಗೆ) ಗಡಿ ದಾಟಿವೆ. ಆದರೆ, ಚಿಲ್ಲರೆಯಾಗಿ ಮಾರಾಟವಾಗುತ್ತಿರುವ ಎಣ್ಣೆ ಬೆಲೆ ₹ 95ರಿಂದ ₹ 100ರೊಳಗೆ ಇದೆ.

ಫಾಸ್ಟ್‌ಫುಡ್‌ ಮಳಿಗೆಗಳು, ಹೋಟೆಲ್‌ಗಳು, ಬೋಂಡ ಅಂಗಡಿ, ಗೋಬಿ ಮಂಚೂರಿ ಅಂಗಡಿ ಮಾಲೀಕರಿಗೆ ಮಾರುಕಟ್ಟೆಯಲ್ಲಿ ಚಿಲ್ಲರೆಯಾಗಿ ಸಿಗುವ ಅಡುಗೆ ಎಣ್ಣೆಯೇ ಹೆಚ್ಚು ಅಚ್ಚುಮೆಚ್ಚು. ದರ ಕಡಿಮೆಯಿರುವ ಕಾರಣಕ್ಕೆ ಮಾಲೀಕರು ಚಿಲ್ಲರೆಯಾಗಿ ಸಿಗುವ ಎಣ್ಣೆಯನ್ನೇ ಆಹಾರ ಪದಾರ್ಥಗಳಿಗೆ ಬಳಕೆ ಮಾಡುತ್ತಿದ್ದಾರೆ. ನಾಲಿಗೆ ರುಚಿಗಾಗಿ ಮನೆ ಆಹಾರ ಬಿಟ್ಟು ಹೋಟೆಲ್‌ ತಿನಿಸು, ಗೋಬಿ ಮಂಚೂರಿ, ಬೋಂಡ ಸವಿಯುವ ಮಂದಿ ಹಣ ಕೊಟ್ಟು ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ.

ಚಿಲ್ಲರೆಯಾಗಿ ಅಡುಗೆ ಎಣ್ಣೆ ಮಾರಾಟ ಮಾಡುವ ವರ್ತಕರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಎಫ್ಎಸ್ಎಸ್ಎಐ, ಆರೋಗ್ಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು