ಶನಿವಾರ, ಜೂನ್ 12, 2021
28 °C
ರೈತರು– ಮಹಿಳೆಯರಿಗೆ ಸಾಲ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಹೇಳಿಕೆ

ಕೋಲಾರ: ಕೋವಿಡ್‌ ಸಂಕಷ್ಟದಲ್ಲೂ ಬ್ಯಾಂಕ್‌ ಸ್ಪಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋವಿಡ್ ಸಂಕಷ್ಟದ ನಡುವೆಯೂ ಜನರ ಆಶಯಕ್ಕೆ ಬ್ಯಾಂಕ್ ಕಳೆದ 4 ತಿಂಗಳಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ರೈತರು ಹಾಗೂ ಮಹಿಳೆಯರಿಗೆ ₹ 284 ಕೋಟಿ ಸಾಲ ವಿತರಿಸಿದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ತಿಳಿಸಿದರು.

ಇಲ್ಲಿ ಗುರುವಾರ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ₹ 1.64 ಕೋಟಿ ಸಾಲ ವಿತರಿಸಿ ಮಾತನಾಡಿ, ‘ಕೋವಿಡ್–19 ಮತ್ತು ಲಾಕ್‌ಡೌನ್‌ನಿಂದಾಗಿ ವಾಣಿಜ್ಯ ಬ್ಯಾಂಕ್‌ಗಳು ಆರ್ಥಿಕ ಸಂಕಷ್ಟ ಹಾಗೂ ಕೊರೊನಾ ಸೋಂಕಿನ ನೆಪವೊಡ್ಡಿ ಜನರಿಗೆ ಸಾಲ ನಿರಾಕರಿಸುತ್ತಿವೆ. ಆದರೆ, ಡಿಸಿಸಿ ಬ್ಯಾಂಕ್ ಸಾಲ ನೀಡುತ್ತಿದೆ’ ಎಂದರು.

‘4 ತಿಂಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ₹ 180 ಕೋಟಿ ಬಡ್ಡಿರಹಿತ ಸಾಲ ನೀಡಲಾಗಿದೆ. ಅದೇ ರೀತಿ ರೈತರಿಗೆ ₹ 92 ಕೋಟಿ ಬೆಳೆ ಸಾಲ, ಹಸು ಮತ್ತು ಕುರಿ ಖರೀದಿ, ಕೋಳಿ ಫಾರಂ ನಿರ್ಮಾಣಕ್ಕೆ ₹ 12 ಕೋಟಿ ಸಾಲ ನೀಡಿ ಸಂಕಷ್ಟದಲ್ಲೂ ಕೈಹಿಡಿದಿದೆ’ ಎಂದು ಹೇಳಿದರು.

‘ಬ್ಯಾಂಕ್ ಪ್ರಾಮಾಣಿಕವಾಗಿ ರೈತರು ಮತ್ತು ಮಹಿಳೆಯರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದರೂ ಬ್ಯಾಂಕ್‌ನ ವಿರುದ್ಧ ವೈಯಕ್ತಿಕ ಟೀಕೆ ಕೇಳಿ ಬರುತ್ತಿವೆ. ರೈತರು ಮತ್ತು ಮಹಿಳೆಯರಿಗೆ ನೆರವಾಗುವ ಮೂಲಕವೇ ಟೀಕೆಗಳಿಗೆ ಉತ್ತರ ನೀಡುತ್ತೇವೆ. ದಿವಾಳಿಯಾಗಿ ನಯಾಪೈಸೆ ಸಾಲ ನೀಡಲಾಗದ ಸ್ಥಿತಿಗೆ ತಲುಪಿದ್ದ ಬ್ಯಾಂಕನ್ನು ಸುಸ್ಥಿತಿಗೆ ತಂದಿದ್ದೇವೆ’ ಎಂದರು.

ಸದ್ಬಳಕೆ ಮಾಡಿ: ‘ಬ್ಯಾಂಕ್ ನೀಡುವ ಸಾಲ ಸದ್ಬಳಕೆ ಮಾಡಿಕೊಳ್ಳಿ. ಡಿಸಿಸಿ ಬ್ಯಾಂಕ್‌ನಲ್ಲೇ ಉಳಿತಾಯದ ಹಣ ಠೇವಣಿಯಿಟ್ಟು ಮತ್ತಷ್ಟು ಜನರಿಗೆ ಸಾಲ ಸೌಲಭ್ಯ ಸಿಗುವಂತೆ ಮಾಡಿ’ ಎಂದು ಬ್ಯಾಂಕ್ ನಿರ್ದೇಶಕ ಸೋಮಣ್ಣ ಮನವಿ ಮಾಡಿದರು.

‘ಡಿಸಿಸಿ ಬ್ಯಾಂಕ್ ವಿರುದ್ಧ ಟೀಕೆ ಮಾಡುವವರು ಬ್ಯಾಂಕ್‌ನ ಹಿಂದಿನ ಪರಿಸ್ಥಿತಿ ಅರಿತರೆ ಖಂಡಿತ ಅಂತಹ ತಪ್ಪು ಮಾಡುವುದಿಲ್ಲ. ಮತ್ತೊಮ್ಮೆ ಬ್ಯಾಂಕ್ ದುಸ್ಥಿತಿಗೆ ತಲುಪದಂತೆ ಕಾಪಾಡಲು ಎಲ್ಲರೂ ಆಡಳಿತ ಮಂಡಳಿಯೊಂದಿಗೆ ಕೈಜೋಡಿಸಬೇಕು’ ಎಂದು ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್‌ ಮನವಿ ಮಾಡಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕೆ.ವಿ.ದಯಾನಂದ್, ಸೊಣ್ಣೇಗೌಡ, ವ್ಯವಸ್ಥಾಪಕ ಅಂಬರೀಷ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು