ಸೋಮವಾರ, ಏಪ್ರಿಲ್ 12, 2021
26 °C

ಮಹಾ ಶಿವರಾತ್ರಿ ಹಬ್ಬಕ್ಕೆ ಸಿದ್ಧತೆ: ಮಾರುಕಟ್ಟೆಯಲ್ಲಿ ಜನಜಂಗುಳಿ- ವಹಿವಾಟು ಜೋರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಮಹಾ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರು ಪೂಜಾ ಸಾಮಗ್ರಿ ಖರೀದಿಸಲು ನಗರದ ಮಾರುಕಟ್ಟೆಗಳಿಗೆ ಬುಧವಾರ ಮುಗಿಬಿದ್ದರು. ವಸ್ತುಗಳ ಬೆಲೆ ಏರಿಕೆ ನಡುವೆಯೂ ಮಾರುಕಟ್ಟೆಯಲ್ಲಿ ವಹಿವಾಟು ಜೋರಾಗಿತ್ತು.

ಹಳೆ ಬಸ್‌ ನಿಲ್ದಾಣ, ಎಂ.ಜಿ.ರಸ್ತೆ, ಹೊಸ ಬಸ್‌ ನಿಲ್ದಾಣ, ದೊಡ್ಡಪೇಟೆ, ವಾಸವಿ ದೇವಸ್ಥಾನ ರಸ್ತೆ, ಕಾಳಮ್ಮ ಗುಡಿ ರಸ್ತೆ, ಅಮ್ಮವಾರಿಪೇಟೆ ಸೇರಿದಂತೆ ಪ್ರಮುಖ ವಾಣಿಜ್ಯ ಸ್ಥಳಗಳಲ್ಲಿ ಜನಜಂಗುಳಿಯೇ ಕಂಡುಬಂತು. ಬೆಳಿಗ್ಗೆಯಿಂದ ರಾತ್ರಿವರೆಗೂ ಭರ್ಜರಿ ವಹಿವಾಟು ನಡೆಯಿತು.

ಹಣ್ಣು, ತರಕಾರಿ ಹಾಗೂ ದಿನಸಿ ಅಂಗಡಿಗಳು ಗ್ರಾಹಕರಿಂದ ತುಂಬಿ ಹೋಗಿದ್ದವು. ಪ್ರಮುಖ ರಸ್ತೆಗಳ ಬದಿಯಲ್ಲಿ ಹಾಗೂ ಪಾದಚಾರಿ ಮಾರ್ಗದಲ್ಲಿ ವರ್ತಕರು ಹೂವು, ಹಣ್ಣು, ಬಾಳೆಕಂದು, ಮಾವಿನ ಸೊಪ್ಪು, ಸಾಮೆ ಪುರಿ, ಕಡಲೆಕಾಯಿ, ಗೆಣಸು, ಕಬ್ಬು ಮಾರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಟಿ.ಚನ್ನಯ್ಯ ರಂಗಮಂದಿರ ಮುಂಭಾಗದ ರಸ್ತೆಯ ಅಕ್ಕಪಕ್ಕದ ಮಳಿಗೆಗಳು ಗ್ರಾಹಕರಿಂದ ಗಿಜಿಗುಡುತ್ತಿದ್ದವು. ಕೆಲ ವ್ಯಾಪಾರಿಗಳು ತಳ್ಳು ಗಾಡಿಗಳಲ್ಲಿ ಹಬ್ಬದ ಸಾಮಗ್ರಿ ಮಾರುತ್ತಿದ್ದ ದೃಶ್ಯ ಬಡಾವಣೆಗಳಲ್ಲಿ ಕಂಡುಬಂತು. ಗ್ರಾಹಕರು ಬಿಸಿಲ ಝಳ ಲೆಕ್ಕಿಸದೆ ಖರೀದಿಯಲ್ಲಿ ತೊಡಗಿದ್ದರು. ಮಾರುಕಟ್ಟೆಗಳ ಅಕ್ಕಪಕ್ಕದ ಐಸ್‌ಕ್ರೀಮ್‌, ಎಳನೀರು, ಕಬ್ಬಿನ ಹಾಲು ಹಾಗೂ ತಂಪು ಪಾನೀಯ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು.

ಗಗನಕ್ಕೇರಿದ ಬೆಲೆ: ಹಬ್ಬದ ಹಿನ್ನೆಲೆಯಲ್ಲಿ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದವು. ಏಲಕ್ಕಿ ಬಾಳೆ ಕೆ.ಜಿಗೆ ₹ 60, ಪಚ್ಚ ಬಾಳೆ ₹ 30, ಮೋಸಂಬಿ ಮತ್ತು ಕಿತ್ತಳೆ ₹ 100, ಸೇಬು ₹ 250, ದಾಳಿಂಬೆ ₹ 200, ಕಪ್ಪು ದ್ರಾಕ್ಷಿ ₹ 210, ಬಿಳಿ ದ್ರಾಕ್ಷಿ ₹ 120, ಕೆಕ್ಕೆರೆ ಹಣ್ಣು ₹ 40, ಬೆಲ್ಲದ ಹಣ್ಣು ಒಂದಕ್ಕೆ ₹ 10 ಇತ್ತು. ತೆಂಗಿನಕಾಯಿ ಒಂದಕ್ಕೆ ₹ 30, ತುಳಸಿ ಹಾಗೂ ಮಾವಿನ ಸೊಪ್ಪು ಕಟ್ಟಿಗೆ ₹ 15, ಬಾಳೆಕಂದು ಎರಡಕ್ಕೆ ₹ 60, ಸಾಮೆ ಪುರಿ ಲೀಟರ್‌ಗೆ ₹ 20, ಕಬ್ಬಿನ ಜಲ್ಲೆ ಒಂದಕ್ಕೆ ₹ 40, ಗೆಣಸು ಕೆ.ಜಿಗೆ ₹ 40 ಇತ್ತು.

ಮಲ್ಲಿಗೆ ಬಿಡಿ ಹೂವು ಕೆ.ಜಿಗೆ ₹ 700, ಕನಕಾಂಬರ ₹ 800, ಗುಲಾಬಿ ಹಾಗೂ ಹಳದಿ ಸೇವಂತಿ ₹ 160, ಸುಗಂಧರಾಜ ₹ 240, ಬಿಳಿ ಸೇವಂತಿ ₹ 200, ಮಾರಿ ಗೋಲ್ಡ್‌ ₹ 180, ಕಾಕಡ ₹ 500, ಚೆಂಡು ಹೂವು ₹ 30 ಇತ್ತು. ಹೂವು, ಹಣ್ಣಿನ ಜತೆಗೆ ದಿನಸಿ ಪದಾರ್ಥಗಳ ಬೆಲೆಗಳು ಏರಿಕೆಯಾಗಿದ್ದವು. ಮಾರುಕಟ್ಟೆಗೆ ಬಂದಿದ್ದ ಗ್ರಾಹಕರಿಗೆ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಿತು.

ಸಂಚಾರ ನಿರ್ಬಂಧ: ಸಂಜೆಯಾದಂತೆ ಮಾರುಕಟ್ಟೆಗೆ ಬರುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಇದರಿಂದ ವಾಣಿಜ್ಯ ಸ್ಥಳಗಳಲ್ಲಿ ವಾಹನ ದಟ್ಟಣೆ ಉಂಟಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ಭಾರಿ ವಾಹನಗಳ ಓಡಾಟ ನಿರ್ಬಂಧಿಸಲಾಗಿತ್ತು. ಮಾರುಕಟ್ಟೆಗಳ ಸುತ್ತಮುತ್ತ ಸಂಚಾರ ನಿರ್ವಹಣೆಗೆ ಹೆಚ್ಚಿನ ಪೊಲೀಸರು ಹಾಗೂ ಗೃಹರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಪರಸ್ಥಳದ ಸಾರ್ವಜನಿಕರು ಹಬ್ಬದ ಆಚರಣೆಗೆ ಸ್ವಂತ ಊರುಗಳಿಗೆ ಹೋಗಲು ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಬಸ್‌ಗೆ ಕಾಯುತ್ತಾ ನಿಂತಿದ್ದ ದೃಶ್ಯ ಕಂಡುಬಂತು. ರಾತ್ರಿ ವೇಳೆಗೆ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಪ್ರಯಾಣಿಕರ ದೊಡ್ಡ ದಂಡೇ ಕಂಡುಬಂತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.