ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಪುಷ್ಪ ಪ್ರದರ್ಶನಕ್ಕೆ ಜನಸಾಗರ, ನೋಡುಗರ ಗಮನ ಸೆಳೆದ ಕಲಾಕೃತಿ– ತರಕಾರಿ ಕೆತ್ತನೆ

Last Updated 26 ಜನವರಿ 2020, 15:29 IST
ಅಕ್ಷರ ಗಾತ್ರ

ಕೋಲಾರ: ಇಲ್ಲಿನ ತೋಟಗಾರಿಕೆ ಇಲಾಖೆ ನರ್ಸರಿ ಆವರಣದಲ್ಲಿ ಭಾನುವಾರ ಆರಂಭವಾದ ಫಲಪುಷ್ಪ ಪ್ರದರ್ಶನಕ್ಕೆ ಜನ ಸಾಗರವೇ ಹರಿದು ಬಂದಿತು.

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಯು ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದ್ದು, ಹೂವಿನ ಗಿಡಗಳು ನೋಡುಗರ ಗಮನ ಸೆಳೆದವು. ಗುಲಾಬಿ ಹೂವುಗಳಲ್ಲಿ ಅರಳಿದ ಶಿವಲಿಂಗ ಮಾದರಿ, ವೀಣೆ, ಪತಂಗ, ಸೇವಂತಿಗೆ ಹೂವುಗಳಿಂದ ರೂಪಿಸಿರುವ ನಂದಿ, ದೊಣ್ಣೆ ಮೆಣಸಿನ ಕಾಯಿಯಲ್ಲಿ (ಕ್ಯಾಪ್ಸಿಕಂ) ಮಾಡಿದ ಮನೆ ಮಾದರಿಯು ಜನರ ಮನಸೊರೆಗೊಂಡವು.

ಕಲ್ಲಂಗಡಿ ಹಣ್ಣಿನಲ್ಲಿ ರೂಪುಗೊಂಡ ಮಹಾತ್ಮ ಗಾಂಧೀಜಿ, ಅಂಬೇಡ್ಕರ್‌, ವಿಶ್ವೇಶ್ವರಯ್ಯ, ನರೇಂದ್ರ ಮೋದಿ, ದಿವಂಗತ ಶಿವಕುಮಾರ ಸ್ವಾಮೀಜಿ, ವಿಶ್ವೇಶತೀರ್ಥ ಸ್ವಾಮೀಜಿ, ಸ್ವಾಮಿ ವಿವೇಕಾನಂದ, ರಾಜ್‌ಕುಮಾರ್‌ರ ಪ್ರತಿಕೃತಿಗಳು ನೋಡುಗರನ್ನು ಮಂತ್ರಮುಗ್ಧವಾಗಿಸಿದವು.

ನರ್ಸರಿಯು 8 ಎಕರೆ ವಿಸ್ತಾರವಾಗಿದ್ದು, ಕುಂಡಗಳಲ್ಲಿ ಬೆಳೆಸಿರುವ ಸುಮಾರು 6 ಸಾವಿರ ಹೂವಿನ ಗಿಡ ಮತ್ತು ತರಕಾರಿ ಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಅಲಂಕಾರಿಕ ಗಿಡಗಳು, ಡೇಲಿಯಾ, ಸಾಲ್ವಿಯಾ, ಬೆರ್ಜೆನಿಯಾ, ಆಸ್ಟರ್, ಜರ್ಬರಸ್, ಸೆಲೋಸಿಯಾ, ಸೇವಂತಿಗೆ, ವಿಂಕ ರೋಸಿಯ, ಮಾರಿ ಗೋಲ್ಡ್‌ ಸೇರಿದಂತೆ ವಿವಿಧ ಹೂವುಗಳನ್ನು ಬೆಳೆಸಲಾಗಿದೆ.

ಬೂದ ಕುಂಬಳ ಕಾಯಿಯಿಂದ ಮಾಡಿದ ತಂಬೂರಿ, ಮೀನು, ಹಂಸ, ಬದನೆ ಕಾಯಿಯಿಂದ ಸಿದ್ಧಪಡಿಸಿದ ನವಿಲು, ಕೋಸಿನಿಂದ ಮಾಡಿದ ಬಾತು ಕೋಳಿ, ಹಾಗಲಕಾಯಿಯಿಂದ ಸಿದ್ಧಗೊಂಡ ಮೊಸಳೆ ಸೇರಿದಂತೆ ವಿವಿಧ ತರಕಾರಿ ಕೆತ್ತನೆಗಳು ಜನರನ್ನು ಆಕರ್ಷಿಸಿದವು.

ಅಧಿಕಾರಿಗಳು, ರೈತರು, ಶಾಲಾ ಮಕ್ಕಳು, ಸಾರ್ವಜನಿಕರು ತಂಡೋಪತಂಡವಾಗಿ ಬಂದು ಪ್ರದರ್ಶನದ ವೈಭೋಗ ಕಣ್ತುಂಬಿಕೊಂಡರು. ಯುವಕ ಯುವತಿಯರು ಅಂದದ ಕಲಾಕೃತಿಗಳ ಮುಂದೆ ನಿಂತು ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.
ಸಾವಯವ ಕೃಷಿ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳು, ಸಿರಿಧಾನ್ಯ, ಕೃಷಿ ಉಪಕರಣಗಳು, ಕೃಷಿಗೆ ಸಂಬಂಧಿಸಿದ ಪುಸ್ತಕಗಳು, ತರಕಾರಿ, ಹಣ್ಣು ಹಾಗೂ ಖಾದ್ಯಗಳಿಗೆ ಸಂಬಂಧಿಸಿದ 40ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ಈ ಮಳಿಗೆಗಳು ಜನರಿಂದ ತುಂಬಿ ಹೋಗಿದ್ದವು.

ಸಾರ್ವಜನಿಕರು ಸಿರಿಧಾನ್ಯ ಹಾಗೂ ಸಾವಯವ ಉತ್ಪನ್ನ, ಹಣ್ಣು, ತರಕಾರಿ. ಜೇನು ತುಪ್ಪ ಖರೀದಿಸಿದರು. ಬಾಳೆ ಹಣ್ಣು, ಹಲಸು ಹಣ್ಣು ಮತ್ತು ನೆಲ್ಲಿ ಕಾಯಿಯಿಂದ ತಯಾರಿಸಿದ ಪಾನೀಯಗಳು, ಚಿಪ್ಸ್‌ ಬಾಯಲ್ಲಿ ನೀರೂರಿಸಿದವು.

ಮೀನುಗಳ ಪ್ರದರ್ಶನ: ರೇಷ್ಮೆಗೂಡಿನ ಅಲಂಕಾರಿಕ ವಸ್ತುಗಳ ಪ್ರದರ್ಶನ, ಹಿಪ್ಪುನೇರಳೆ ಸಸಿಗಳ ಪ್ರಾತ್ಯಕ್ಷಿಕೆ, ಜಲಾನಯನ ಮಾದರಿ, ಕೃಷಿ ಹೊಂಡ, ಜಲ ಕೃಷಿ (ಹೈಡ್ರೋಫೋನಿಕ್), ಕೈತೋಟ, ತಾರಸಿ ತೋಟ, ಸಮಗ್ರ ಕೃಷಿ ಪದ್ಧತಿ, ನೆರಳು ಮನೆ, ಕೃಷಿ ಹೊಂಡ, ಪಾಲಿಹೌಸ್‌, ಮಳೆ ನೀರು ಕೊಯ್ಲು, ಸಸ್ಯ ಸಂತೆ, ಎರೆಜಲ ಸೌರಶಕ್ತಿ ಚಾಲಿತ ಕೀಟನಾಶಕ ಯಂತ್ರ, ಜೇನು ಸಾಕಾಣಿಕೆ, ಕುಂಡಗಳಲ್ಲಿ ತರಕಾರಿ ಬೆಳೆಯುವ ಮಾದರಿಯು ರೈತರನ್ನು ಆಕರ್ಷಿಸಿತು.

ಮೀನುಗಾರಿಕೆ ಇಲಾಖೆಯಿಂದ ವಿವಿಧ ಬಗೆಯ ಮೀನುಗಳನ್ನು ಪ್ರದರ್ಶಿಸಲಾಯಿತು. ಔಷಧ ಮತ್ತು ಸುಗಂಧ ದ್ರವ್ಯ ಸಸ್ಯಗಳು, ಮೇವು ಬೆಳೆಗಳ ಪ್ರಾತ್ಯಕ್ಷಿಕೆ, ಸಣ್ಣ ಹಸಿರುಮನೆ, ಕೈತೋಟ ಮಾದರಿಯು ರೈತರ ಗಮನ ಸೆಳೆಯಿತು. ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಜಿಲ್ಲೆಯ 30 ಮಂದಿ ಪ್ರಗತಿಪರ ರೈತರಿಗೆ ಮೇಳದಲ್ಲಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ವಿದ್ಯುತ್‌ ದೀಪಾಲಂಕಾರ: ಹೂವಿನ ಗಿಡ ಹಾಗೂ ಮರಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಿರುವುದು ಪ್ರದರ್ಶನಕ್ಕೆ ವಿಶೇಷ ಮೆರುಗು ನೀಡಿದೆ. ಸೋಮವಾರವು (ಜ.27) ಪ್ರದರ್ಶನ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT