ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಜಿಲ್ಲೆಗೆ ಮಹತ್ವದ ಸ್ಥಾನ

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಅಭಿಪ್ರಾಯ
Last Updated 15 ಆಗಸ್ಟ್ 2020, 15:27 IST
ಅಕ್ಷರ ಗಾತ್ರ

ಕೋಲಾರ: ‘ದೇಶದ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿರುವ ಕೋಲಾರ ಜಿಲ್ಲೆಯು ವೈಶಿಷ್ಟ್ಯತೆ ಹೊಂದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್ ಅಭಿಪ್ರಾಯಪಟ್ಟರು.

ಇಲ್ಲಿನ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ‘ಜಿಲ್ಲೆಯು ಹಲವು ಧೀಮಂತ ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ರಾಜಕೀಯ ಮುತ್ಸದಿಗಳಿಗೆ ಜನ್ಮ ನೀಡಿರುವ ಪವಿತ್ರ ನೆಲವಾಗಿದೆ’ ಎಂದು ಹೇಳಿದರು.

‘ರಾಜ್ಯದ ಪ್ರಥಮ ಮುಖ್ಯಮಂತ್ರಿಯಾದ ಕೆ.ಸಿ.ರೆಡ್ಡಿಯವರು ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡ ಜಿಲ್ಲೆಯ ಹೆಮ್ಮೆಯ ಪುತ್ರರಾಗಿದ್ದಾರೆ. ಕೆ.ಪಟ್ಟಾಭಿರಾಮನ್, ಬಿ.ಎಲ್.ನಾರಾಯಣಸ್ವಾಮಿ, ಎಂ.ಸಿ.ನಾಗಯ್ಯರೆಡ್ಡಿ, ಟಿ.ಚನ್ನಯ್ಯ ಸೇರಿದಂತೆ ಹಲವು ರಾಜಕೀಯ ಧುರೀಣರು ಜಿಲ್ಲೆಯ ಹೆಸರು ಹಸಿರಾಗಿಸಿದ್ದಾರೆ’ ಎಂದು ತಿಳಿಸಿದರು.

ಇಡೀ ಜಗತ್ತು ಕೋವಿಡ್‌–19 ಸಂಕಷ್ಟದಿಂದ ತಲ್ಲಣಗೊಂಡಿದೆ. ಕೊರೊನಾ ಸೋಂಕು ಹರಡುವಿಕೆ ತಡೆಗೆ ಕೇಂದ್ರ ಸರ್ಕಾರ ದೇಶದೆಲ್ಲೆಡೆ ಲಾಕ್‌ಡೌನ್‌ ಜಾರಿಗೊಳಿಸಿತ್ತು. ಸೋಂಕಿನ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್‌ಗಳ ಸೇವೆಗೆ ಬೆಲೆ ಕಟ್ಟಲಾಗದು’ ಎಂದು ಸ್ಮರಿಸಿದರು.

‘ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು ಮಾಡಲಾಗಿದೆ. ಅಲ್ಲದೇ, ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲೆಯ ಆಸ್ಪತ್ರೆಗಳಲ್ಲಿ 6,481 ಹಾಸಿಗೆ ಸಿದ್ಧಪಡಿಸಲಾಗಿದೆ’ ಎಂದು ವಿವರಿಸಿದರು.

ಜೀವನ ಕಟ್ಟಬೇಕು: ‘ಕೋವಿಡ್‌ನ ಸೂಕ್ಷ್ಮ ಪರಿಸ್ಥಿತಿಯಲ್ಲಿ ನಾವೆಲ್ಲಾ ಒಗ್ಗೂಡಿ ನೊಂದವರ ಜೀವನ ಮತ್ತೆ ಕಟ್ಟಬೇಕು. ಸ್ವಾತಂತ್ರ್ಯ ಹೋರಾಟದ ಧ್ಯೇಯ ದೇಶದ ಜನರನ್ನು ಒಗ್ಗೂಡಿಸಿದ ಮಾದರಿಯಲ್ಲಿ ಪ್ರಾಕೃತಿಕ ವಿಕೋಪ ಹಾಗೂ ಕೊರೊನಾ ತುರ್ತು ಪರಿಸ್ಥಿತಿಯು ಜನರೊಳಗಿನ ಭ್ರಾತೃತ್ವ ಗಟ್ಟಿಗೊಳಿಸಬೇಕು’ ಎಂದು ಆಶಿಸಿದರು.

‘ಜನರು ದ್ವೇಷ ಹಿಮ್ಮೆಟ್ಟಿಸಿ ಸೌಹಾರ್ದಯುತ ಜೀವನ ನಡೆಸಬೇಕು. ಬರ, ಪ್ರವಾಹ ಪರಿಸ್ಥಿತಿ ನಿಭಾಯಿಸಲು ಜನರು ಸಂಘಟಿತರಾಗಬೇಕು. ಪ್ರಾಕೃತಿಕ ಸಮತೋಲನ ಕಾಪಾಡುವ ದೃಢ ಸಂಕಲ್ಪ ಮಾಡಬೇಕು. ನೀರನ್ನು ಪೋಲು ಮಾಡದೆ ಸಂರಕ್ಷಿಸಬೇಕು’ ಎಂದು ಕಿವಿಮಾತು ಹೇಳಿದರು.

ಪ್ರತಿಭಾವಂತರಿಗೆ ಸನ್ಮಾನ: ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ (ಯುಪಿಎಸ್‌ಸಿ) ರ್‌್ಯಾಂಕ್‌ ಗಳಿಸಿದ ವಿವೇಕ್‌ರೆಡ್ಡಿ ಮತ್ತು ಕೆ.ಆರ್‌.ಭರತ್, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ರಚನಾ, ಕುಶಾಲ್‌ಗೌಡ, ಸಾಯಿ ಮೇಘನಾ, ದೀಕ್ಷಾ, ಕೆ.ಎಸ್‌.ಶ್ರೇಯಸ್‌ ಅವರನ್ನು ಸನ್ಮಾಸಲಾಯಿತು.

ಕೋವಿಡ್‌ ಸಂಬಂಧಿತ ಕರ್ತವ್ಯಗಳಲ್ಲಿ ತೊಡಗಿಸಿಕೊಂಡಿರುವ ವೈದ್ಯಕೀಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್‌ ಸಿಬ್ಬಂದಿ, ಕೆಎಸ್‌ಆರ್‌ಟಿಸಿ ಸಿಬ್ಬಂದಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ದೇಶವನ್ನು ಪ್ರತಿನಿಧಿಸಿದ ಜಿಲ್ಲೆಯ ಕ್ರೀಡಾಪಟುಗಳನ್ನು ಪುರಸ್ಕರಿಸಲಾಯಿತು.

ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಉಪಾಧ್ಯಕ್ಷೆ ಯಶೋದಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ ಆಂಜಿನಪ್ಪ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಸ್ವಾಮಿ, ಉಪ ವಿಭಾಗಾಧಿಕಾರಿ ಸೋಮಶೇಖರ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT