ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ ಸರಿಯಲ್ಲ: ಬೀದಿಗಿಳಿದು ಹೋರಾಟ

ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಎಚ್ಚರಿಕೆ
Last Updated 16 ಜೂನ್ 2020, 15:42 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರ ಹಟಮಾರಿತನ ಮುಂದುವರಿಸಿ ದ್ವಿತೀಯ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಕೊರೊನಾ ಸೋಂಕಿನಿಂದ ರಾಜ್ಯದ ಯಾವುದೇ ವಿದ್ಯಾರ್ಥಿಗೆ ತೊಂದರೆಯಾದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಎಚ್ಚರಿಕೆ ನೀಡಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಇಡೀ ಜಗತ್ತು ಕೊರೊನಾ ಸೋಂಕಿನಿಂದ ತಲ್ಲಣಗೊಂಡಿದೆ. ಯಾರೂ ಊಹಿಸಲಾಗದಷ್ಟು ಆತಂಕ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಸೋಂಕಿನ ನಿಯಂತ್ರಣಕ್ಕೆ ಪ್ರಯತ್ನ ನಡೆದಿದ್ದು, ಎಲ್ಲರೂ ಸಹಕರಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಸರ್ಕಾರ ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆ ನಡೆಸಲು ಹೊರಟಿದೆ. ಈ ಹಿಂದೆ ಇಂಗ್ಲಿಷ್‌ ಪರೀಕ್ಷೆ ಮುಂದೂಡಿದ ಸಂದರ್ಭದಲ್ಲಿ ಸೋಂಕಿನ ತೀವ್ರತೆ ಹೆಚ್ಚಿರಲಿಲ್ಲ. ಆಗಲೇ ಪರೀಕ್ಷೆ ನಡೆಸಬಹುದಿತ್ತು. ಆದರೆ, ಈಗ ಸೋಂಕು ಹೆಚ್ಚಿರುವ ಸಂದರ್ಭದಲ್ಲಿ ಪರೀಕ್ಷೆ ನಡೆಸುತ್ತಿರುವುದು ಸರಿಯಲ್ಲ. ವಿದ್ಯಾರ್ಥಿಗಳಲ್ಲಿ ಒಬ್ಬರಿಗೆ ಸೋಂಕು ಬಂದರೂ ಪರಿಸ್ಥಿತಿ ಗಂಭೀರವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ದ್ವಿತೀಯ ಪರೀಕ್ಷೆ ಹಿನ್ನೆಲೆಯಲ್ಲಿ ಸುಮಾರು 6 ಲಕ್ಷ ವಿದ್ಯಾರ್ಥಿಗಳು, ಉಪನ್ಯಾಸಕರು, ಕಾಲೇಜು ಸಿಬ್ಬಂದಿ ಸೇರಿದಂತೆ 8 ಲಕ್ಷ ಮಂದಿ ಒಂದೆಡೆ ಸೇರುವಾಗ ಪರಿಸ್ಥಿತಿ ನಿಭಾಯಿಸುವುದು ಕಷ್ಟ. 8.25 ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಶಾಲಾ ಸಿಬ್ಬಂದಿ, ಶಿಕ್ಷಕರು ಸೇರಿ 25 ಲಕ್ಷ ಜನರು ಆಗುತ್ತಾರೆ. ಸರ್ಕಾರ ಇವರೆಲ್ಲರನ್ನೂ ಹೇಗೆ ನಿಯಂತ್ರಿಸುತ್ತದೆ?’ ಎಂದು ಪ್ರಶ್ನಿಸಿದರು.

ಹಟ ಬಿಡಲಿ: ‘ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ 12 ರಾಜ್ಯಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಗೊಳಿಸಿ ಎಲ್ಲಾ ಮಕ್ಕಳನ್ನು ಉತ್ತೀರ್ಣಗೊಳಿಸಿವೆ. ಹೀಗಿರುವಾಗ ರಾಜ್ಯದಲ್ಲೂ ಪರೀಕ್ಷೆ ರದ್ದುಪಡಿಸಲು ಸಮಸ್ಯೆ ಏನು? ಪರೀಕ್ಷೆ ವಿಚಾರದಲ್ಲಿ ಸರ್ಕಾರ ಹಟಮಾರಿತನ ಬಿಡಬೇಕು. ಪರೀಕ್ಷೆ ಸಂದರ್ಭದಲ್ಲಿ ಒಬ್ಬ ವಿದ್ಯಾರ್ಥಿಗೆ ತೊಂದರೆಯಾದರೂ ಹಾದಿ ಬೀದಿಯಲ್ಲಿ ಹೋರಾಟ ಮಾಡುತ್ತೇವೆ’ ಎಂದು ಗುಡುಗಿದರು.

‘ಕೊರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ನೀಡಬೇಕು. ಸೋಂಕು ನಿಯಂತ್ರಣಕ್ಕೆ ಬರುವವರೆಗೂ ಯಾವುದೇ ಸಮಾರಂಭ ನಡೆಸಬಾರದು. ಜನರು ವೈದ್ಯರು ಮತ್ತು ಪೊಲೀಸರನ್ನು ಗೌರವದಿಂದ ಕಾಣಬೇಕು’ ಎಂದು ಸಲಹೆ ನೀಡಿದರು.

ಕನ್ನಡಪರ ಸಂಘಟನೆಗಳ ಸದಸ್ಯರಾದ ವೆಂಕಟಪ್ಪ, ಕೆ.ನಾರಾಯಣಗೌಡ, ಚಂಬೆ ರಾಜೇಶ್, ಪುಟ್ಟರಾಜು, ಸಂತೋಷ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT