ಬುಧವಾರ, ಜನವರಿ 20, 2021
24 °C

ಮನುಷ್ಯನ ದುರಾಸೆಗೆ ಪರಿಸರ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಅರಿವಿನ ಕೊರತೆಯಿಂದ ಮನುಷ್ಯ ಪರಿಸರದ ಮೇಲೆ ದಾಳಿ ನಡೆಸುತ್ತಿದ್ದು, ಇದರಿಂದ ಪ್ರಾಕೃತಿಕ ಅಸಮತೋಲನವಾಗುತ್ತಿದೆ’ ಎಂದು ನಗರಸಭೆ 15ನೇ ವಾರ್ಡ್‌ ಸದಸ್ಯೆ ವಿ.ಸಂಗೀತಾ ಕಳವಳ ವ್ಯಕ್ತಪಡಿಸಿದರು.

ನಗರದ 15ನೇ ವಾರ್ಡ್‌ ವ್ಯಾಪ್ತಿಯ ಹಾರೋಹಳ್ಳಿಯಲ್ಲಿ ಮಂಗಳವಾರ ನಡೆದ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಅಭಿಯಾನದಲ್ಲಿ ಮಾತಾನಾಡಿ, ‘ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ದುರಾಸೆಯ ಫಲವಾಗಿ ಪರಿಸರ ನಾಶವಾಗಿದೆ’ ಎಂದು ವಿಷಾದಿಸಿದರು.

‘ಕೇಂದ್ರ ಸರ್ಕಾರವು ಸ್ವಚ್ಛ ಭಾರತಕ್ಕಾಗಿ ಸ್ವಚ್ಛತಾ ಆಂದೋಲನ ಜಾರಿಗೊಳಿಸಿದೆ. ಜತೆಗೆ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಪ್ಲಾಸ್ಟಿಕ್‌ ನಿಷೇಧಿಸಿದೆ. ಪ್ಪಾಸ್ಟಿಕ್‌ ವಸ್ತುಗಳ ದುಷ್ಪರಿಣಾಮದ ಬಗ್ಗೆ  ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಮನುಷ್ಯನಿಗೆ ಅಗತ್ಯವಾಗಿ ಬೇಕಿರುವ ಮೂಲಸೌಕರ್ಯವನ್ನು ನಿಸರ್ಗ ಕಲ್ಪಿಸಿದೆ. ಒಂದು ಮರ ದಿನಕ್ಕೆ ಒಂದು ಕೆ.ಜಿ ಆಮ್ಲಜನಕ ಉತ್ಪಾದನೆ ಮಾಡುತ್ತದೆ, ಮರಗಳ ನಾಶದಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ಅರಿತು ಅರಣ್ಯ ಸಂಪತ್ತು ಉಳಿಸಿ’ ಎಂದು ಕಿವಿಮಾತು ಹೇಳಿದರು.

‘ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿ ಅಥವಾ ಡಬ್ಬ ರಸ್ತೆಗೆ ಬಿಸಾಡಬಾರದು. ಆಹಾರ ಪದಾರ್ಥ ಅಥವಾ ತರಕಾರಿ ಖರೀದಿಗಾಗಿ ಮಾರುಕಟ್ಟೆಗೆ ಹೋಗುವಾಗ ಜತೆಯಲ್ಲಿ ಬಟ್ಟೆ ಅಥವಾ ಸೆಣಬಿನ ಕೈ ಚೀಲ ಕೊಂಡೊಯ್ಯಬೇಕು. ಸಾಧ್ಯವಾದಷ್ಟು ಪ್ಲಾಸ್ಟಿಕ್‌ ಕವರ್‌ ಬಳಕೆ ಕಡಿಮೆ ಮಾಡಬೇಕು’ ಎಂದು ತಿಳಿಸಿದರು.

ಗಮನ ಮಹಿಳಾ ಸಮೂಹದ ಸದಸ್ಯೆ ಶಾಂತಮ್ಮ, ಪರ್ಯಾವರಣ ದಕ್ಷಿಣ ಪ್ರಾಂತ್ಯ ಸದಸ್ಯ ಕೆ.ಎನ್.ತ್ಯಾಗರಾಜ್‌, ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಅಭಿಯಾನದ ಸಂಚಾಲಕರಾದ ಮಹೇಶ್‌ರಾವ್ ಕದಂ, ಬಿ.ಶಿವಕುಮಾರ್ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.