ಶನಿವಾರ, ಜುಲೈ 24, 2021
22 °C
ಮಳೆಗಾಲದಲ್ಲಿ ಉಕ್ಕಿ ಹರಿಯುವ ರಹಮತ್‌ನಗರ ರಾಜಕಾಲುವೆ: ಮಳೆ ಬಂದರೆ ಜಾಗರಣೆ ಕಟ್ಟಿಟ್ಟಬುತ್ತಿ

ಕೋಲಾರದ ರಹಮತ್‌ ನಗರ ಬಡಾವಣೆಯ ಜಲವ್ಯೂಹಕ್ಕೆ ಜನರ ಬದುಕು ನಿತ್ಯನರಕ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ನಗರದ ರಹಮತ್‌ನಗರ ಬಡಾವಣೆಗೆ ಹೊಂದಿಕೊಂಡಂತಿರುವ ರಾಜಕಾಲುವೆಯು ಸ್ಥಳೀಯರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಮಳೆಗಾಲದಲ್ಲಿ ವರುಣ ದೇವ ರಾಜಕಾಲುವೆ ಅಕ್ಕಪಕ್ಕದ ಬಡಾವಣೆ ನಿವಾಸಿಗಳಿಗೆ ಕಣ್ಣೀರು ತರಿಸುತ್ತಾನೆ.

ಅಂತರಗಂಗೆ ಬೆಟ್ಟದಿಂದ ಕೋಲಾರಮ್ಮ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯ ಇಕ್ಕೆಲದಲ್ಲಿರುವ 24ನೇ ವಾರ್ಡ್‌, 30ನೇ ವಾರ್ಡ್‌್, 31ನೇ ವಾರ್ಡ್‌ ಹಾಗೂ 32ನೇ ವಾರ್ಡ್‌ ವ್ಯಾಪ್ತಿಯ ರಹಮತ್‌ನಗರ ರಾಜಾನಗರ, ಶಾಂತಿನಗರ, ನೂರ್‌ನಗರ, ಖಾಕಿಷಾ ಮೊಹಲ್ಲಾ, ಫೂಲ್‌ಷಾ ಮೊಹಲ್ಲಾ, ವಿನಾಯಕನಗರ ಬಡಾವಣೆಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಅಂತರಗಂಗೆ ಬೆಟ್ಟದಿಂದ ಕೋಲಾರಮ್ಮ ಕೆರೆವರೆಗಿನ ಬಹುಪಾಲು ಬಡಾವಣೆಗಳ ಕೊಳಚೆ ನೀರು ರಾಜಕಾಲುವೆಯಲ್ಲಿನ ಒಳಚರಂಡಿ ಮಾರ್ಗದ (ಯುಜಿಡಿ) ಮೂಲಕ ನಗರದ ಹೊರವಲಯದ ಮಣಿಘಟ್ಟ ರಸ್ತೆಯಲ್ಲಿನ ಗ್ರಾಮಸಾರ ಶುದ್ಧೀಕರಣ ಘಟಕಕ್ಕೆ ಹರಿದು ಹೋಗುತ್ತದೆ. ಮಳೆಗಾಲದಲ್ಲಿ ಮಳೆ ನೀರು ರಾಜಕಾಲುವೆ ಮೂಲಕ ಹರಿದು ಕೋಲಾರಮ್ಮ ಕೆರೆ ಸೇರುತ್ತದೆ.

ರಾಜಕಾಲುವೆ ಅಕ್ಕಪಕ್ಕದ ಬಡಾವಣೆಗಳು ತಗ್ಗು ಪ್ರದೇಶದಲ್ಲಿದ್ದು, ಪ್ರತಿ ಬಾರಿ ಮಳೆ ಬಂದಾಗಲೂ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸುತ್ತದೆ. ರಾಜಕಾಲುವೆಯೊಳಗಿನ ಯುಜಿಡಿ ಪೈಪ್‌ಗಳು ಒಡೆದಿರುವುದರಿಂದ ಮತ್ತು ಮ್ಯಾನ್‌ಹೋಲ್‌ಗಳು ಕಟ್ಟಿಕೊಳ್ಳುವುದರಿಂದ ಕೊಳಚೆ ನೀರು ಹಾಗೂ ಮಲಮೂತ್ರ ಹೊರಗೆ ಹರಿಯುತ್ತದೆ. ಇದರಿಂದ ನೈರ್ಮಲ್ಯ ಸಮಸ್ಯೆ ಸೃಷ್ಟಿಯಾಗಿದ್ದು, ಸ್ಥಳೀಯರ ಬದುಕು ನಿತ್ಯನರಕವಾಗಿದೆ.

ಕೊಳೆಗೇರಿ

ರಾಜಕಾಲುವೆ ಸ್ವಚ್ಛಗೊಳಿಸಿ ನಾಲ್ಕೈದು ವರ್ಷಗಳಾಗಿದ್ದು, ಉದ್ದಕ್ಕೂ ಕಳೆ ಗಿಡಗಳು ಬೆಳೆದಿವೆ. ಸ್ಥಳೀಯರು ಕಾಲುವೆಯೊಳಗೆ ಪ್ರತಿನಿತ್ಯ ತ್ಯಾಜ್ಯ ಸುರಿಯುತ್ತಿರುವುದರಿಂದ ಮತ್ತು ಮನೆಗಳ ಕೊಳಚೆ ನೀರನ್ನು ಪೈಪ್‌ ಮೂಲಕ ರಾಜಕಾಲುವೆಗೆ ಹರಿ ಬಿಡುತ್ತಿರುವುದರಿಂದ ಇಡೀ ಪ್ರದೇಶ ಕೊಳೆಗೇರಿಯಂತಾಗಿದೆ. ತ್ಯಾಜ್ಯ ಮತ್ತು ಕೊಳಚೆ ನೀರಿನ ದುರ್ನಾತದಿಂದಾಗಿ ಸ್ಥಳೀಯರ ಬದುಕು ಅಸಹನೀಯವಾಗಿದೆ. ದಾರಿಹೋಕರು ಈ ಭಾಗದಲ್ಲಿ ದುರ್ನಾತ ಸಹಿಸಲಾಗದೆ ಮೂಗು ಮುಚ್ಚಿಕೊಂಡು ಓಡಾಡುತ್ತಾರೆ.

ರಾಜಕಾಲುವೆ ಬಳಿ ಹಂದಿ, ಬೀದಿ ನಾಯಿ, ನೊಣ, ಸೊಳ್ಳೆ ಕಾಟ ಹೆಚ್ಚಿದ್ದು, ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ. ಬೀದಿ ನಾಯಿಗಳ ಸಂಖ್ಯೆ ಹೆಚ್ಚಿರುವುದರಿಂದ ಪೋಷಕರು ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಭಯಪಡುವ ಪರಿಸ್ಥಿತಿಯಿದೆ.

ತಂತಿ ಬೇಲಿ ಅಳವಡಿಕೆ

ಸುಮಾರು 6 ಕಿ.ಮೀ ಉದ್ದದ ರಾಜಕಾಲುವೆಯು ಹಲವೆಡೆ ಒತ್ತುವರಿಯಾಗಿತ್ತು. ಹೀಗಾಗಿ ಜಿಲ್ಲಾಡಳಿತವು ಏಳೆಂಟು ವರ್ಷಗಳ ಹಿಂದೆ ಒತ್ತುವರಿ ತೆರವುಗೊಳಿಸಿ ರಾಜಕಾಲುವೆ ಉದ್ದಕ್ಕೂ ಎರಡೂ ಬದಿಯಲ್ಲಿ ತಂತಿ ಬೇಲಿ (ಫೆನ್ಸಿಂಗ್‌) ಹಾಕಿಸಿತ್ತು. ಜತೆಗೆ ರಾಜಕಾಲುವೆ ತಡೆಗೋಡೆಗಳನ್ನು ದುರಸ್ತಿ ಮಾಡಿಸಿತ್ತು.

ಆದರೆ, ರಾಜಾನಗರ ಸರ್ಕಾರಿ ಉರ್ದು ಶಾಲೆ ಬಳಿ ಸ್ಥಳೀಯರ ಓಡಾಟಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ತಂತಿ ಬೇಲಿ ಅಳವಡಿಸಿರಲಿಲ್ಲ. ಈ ಭಾಗದಲ್ಲಿ ಸ್ಥಳೀಯರು ಮನಬಂದಂತೆ ಕಸ ಸುರಿದಿದ್ದು, ಕಸದ ರಾಶಿಯಿಂದ ಕೊಳಚೆ ನೀರಿನ ಹರಿವಿಗೆ ಅಡ್ಡಿಯಾಗಿದ್ದು, ನೀರು ನಿಂತಲ್ಲೇ ನಿಲ್ಲುತ್ತದೆ.

ಜಲವ್ಯೂಹ

ಮಳೆಗಾಲದಲ್ಲಿ ರಾಜಕಾಲುವೆ ಉಕ್ಕಿ ಹರಿದರೆ ಬಡಾವಣೆಗಳು ಜಲವ್ಯೂಹದಲ್ಲಿ ಸಿಲುಕುತ್ತವೆ. ಮಳೆ ನೀರಿನಿಂದ ಬಡಾವಣೆಗಳು ಕೆರೆಯಂತಾಗುತ್ತವೆ. ಮನೆಗಳಿಗೆ ಮಳೆ ನೀರು ನುಗ್ಗಿ ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌ನಂತಹ ವಿದ್ಯುತ್‌ ಉಪಕರಣಗಳು ಹಾಳಾಗುತ್ತವೆ. ಬಟ್ಟೆ, ಹಾಸಿಗೆ, ಅಕ್ಕಿ, ರಾಗಿ, ಬೇಳೆ ಕಾಳು ಮೂಟೆಗಳು ನೀರಿನಲ್ಲಿ ಮುಳುಗುತ್ತವೆ.

ರಾತ್ರಿ ವೇಳೆ ಮಳೆ ಬಂದರೆ ಸ್ಥಳೀಯರಿಗೆ ಜಾಗರಣೆ ಕಟ್ಟಿಟ್ಟಬುತ್ತಿ. ರಾಜಕಾಲುವೆಯಲ್ಲಿ ಹಿಮ್ಮುಖವಾಗಿ ಹರಿಯುವ ಮಳೆ ನೀರಿನ ಜತೆ ಹಾವು, ಕಪ್ಪೆ, ಚೇಳುಗಳು ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತವೆ. ಮಳೆ ನೀರನ್ನು ಮನೆಯಿಂದ ಹೊರ ಹಾಕುವುದರಲ್ಲೇ ರಾತ್ರಿ ಕಳೆಯುವ ಸ್ಥಳೀಯರು ಜೀವ ಭಯದಲ್ಲಿ ಬದುಕುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು