ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲೂರು | ಕೆರೆಗೆ ಮಲಿನ ನೀರು: ರೋಗ ಭೀತಿ

ತಿಂಗಳಿಂದ ಸ್ಥಗಿತವಾಗಿದೆ ಕೊಳಚೆ ನೀರು ಸಂಸ್ಕರಣ ಘಟಕ
Published 8 ಜುಲೈ 2024, 7:43 IST
Last Updated 8 ಜುಲೈ 2024, 7:43 IST
ಅಕ್ಷರ ಗಾತ್ರ

ಮಾಲೂರು: ಪಟ್ಟಣದ ಕೊಳಚೆ ನೀರು ಸಂಸ್ಕರಣ ಘಟಕ ಸ್ಥಗಿತಗೊಂಡು ಒಂದು ತಿಂಗಳು ಕಳೆದರೂ ದುರಸ್ತಿಯಾಗಿಲ್ಲ. ಹಾಗಾಗಿ, ಒಳಚರಂಡಿ ಕೊಳಚೆ ನೀರು ದೊಡ್ಡಕೆರೆಗೆ ಸೇರುತ್ತಿದೆ. ಇದರಿಂದ ಪಟ್ಟಣದ ನಾಗರಿಕರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

ಸಂಸ್ಕರಣ ಘಟಕದಲ್ಲಿ ವಿದ್ಯುತ್ ಪರಿವರ್ತಕದ ಸಮಸ್ಯೆ ಎದುರಾಗಿದೆ. ಹಾಗಾಗಿ, ಒಂದು ತಿಂಗಳಿನಿಂದ ಕೊಳಚೆ ನೀರು ಸಂಸ್ಕರಣ ಘಟಕ ಸ್ಥಗಿತಗೊಂಡಿದೆ. ಘಟಕ ಸ್ಥಗಿತಗೊಂಡಿರುವುದರಿಂದ ಪಟ್ಟಣದ ಕೊಳಚೆ ನೀರು ಸಂಸ್ಕರಣ ಘಟಕಕ್ಕೆ ಬಾರದಂತೆ ಬಂದ್ ಮಾಡಲಾಗಿದೆ.

ಪಟ್ಟಣದ ಮನೆಗಳಿಂದ ಹೊರ ಬರುವ ಕೊಳಚೆ ನೀರನ್ನು ಕೆರೆ ಅಂಗಳದಲ್ಲಿರುವ ಮುಖ್ಯ ಕೊಳಚೆ ನೀರು ಚೇಂಬರ್‌ಗೆ ಹೋಗುವಂತೆ ಮಾಡಲಾಗಿದೆ. ಇದರಿಂದ ಚೇಂಬರ್‌ನ ಮುಚ್ಚಳ ಮೀರಿ ಕೊಳಚೆ ನೀರು ಹರಿದು, ದೊಡ್ಡಕೆರೆಯ ಒಡಲಿಗೆ ಸೇರುತ್ತಿದೆ. ಇದರಿಂದ ನಾಗರಿಕರಷ್ಟೇ ಅಲ್ಲ, ರೈತರೂ ಆತಂಕಗೊಂಡಿದ್ದಾರೆ.

ಮಾಲೂರಿನಲ್ಲಿ 2010ರ ಜೂನ್‌ನಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವತಿಯಂದ ₹ 22.50 ಕೋಟಿ ವೆಚ್ಚದಲ್ಲಿ ಒಳ ಚರಂಡಿ ಕಾಮಗಾರಿ ಕೈಗೊಳ್ಳಲಾಗಿತ್ತು. ಪಟ್ಟಣದಾದ್ಯಂತ 86 ಕಿ.ಮೀ ಕೊಳವೆ ಮಾರ್ಗ ನಿರ್ಮಾಣ ಮಾಡಿದ್ದು, ಇದರಲ್ಲಿ 3,299 ಮ್ಯಾನ್ ಹೋಲ್ ಅಳವಡಿಸಲಾಗಿದೆ.

ಒಳಚರಂಡಿ ಯೋಜನೆ 2012ಕ್ಕೆ ಪೂರ್ಣಗೊಂಡಿತ್ತು. ಆದರೆ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಪುರಸಭೆ ವತಿಯಿಂದ 2016ರಲ್ಲಿ ಎರಡು ಎಕರೆ ಭೂಮಿ ಖರೀದಿಸಿ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನೀಡಲಾಯಿತು. ಶುದ್ಧೀಕರಣ ಕಟ್ಟಡ ಕಾಮಗಾರಿ 2017ಕ್ಕೆ ಪೂರ್ಣವಾಯಿತು. ₹ 4 ಕೋಟಿ ವೆಚ್ಚದಲ್ಲಿ ಮಲಿನ ನೀರು ಶುದ್ಧೀಕರಣ ಘಟಕವನ್ನು ಪಟ್ಟಣದ ದೊಡ್ಡಕೆರೆ ಕಟ್ಟೆಯ ಮಾಲೂರು–ಕಾಡದೇನಹಳ್ಳಿ ರಸ್ತೆ ಬಳಿ ಒಂದು ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ.

ಕೆರೆಯ ಒಡಲಿಗೆ ಸೇರುತ್ತಿರುವ ಕೊಳಚೆ ನೀರು: ಪಟ್ಟಣದ ದೊಡ್ಡಕೆರೆ ಸುಮಾರು 132 ಎಕರೆ ವಿಸ್ತೀರ್ಣ ಹೊಂದಿದೆ.  ಮಾಲೂರು-ಮಡಿವಾಳ ದೊಡ್ಡಕೆರೆ ಪಟ್ಟಣಿಗರ ಹಾಗೂ ಸುತ್ತಲ ಸುಮಾರು 20 ಗ್ರಾಮಗಳ ರೈತರ ಪಾಲಿಗೆ ಸಂಜೀವಿನಿಯಾಗಿದೆ.

ಕುಡಿಯುವ ನೀರಿನ ಕೊಳವೆ ಬಾವಿಗಳ ಅಂತರ್ಜಲ ಹೆಚ್ಚಳಕ್ಕೂ ಇದೇ ಕಾರಣವಾಗಿದೆ.

ಆದರೆ, ಈಗ ಕೊಳಚೆ ನೀರು ಕೆರೆಯ ಅಂಗಳಕ್ಕೆ ಹರಿಯುತ್ತಿದ್ದು, ಕುಡಿಯುವ ನೀರಿನಲ್ಲಿ ಮಿಶ್ರಣವಾಗುವ ಭೀತಿ ಏದುರಾಗಿದೆ. ರಾಜ್ಯದಲ್ಲಿ ಡೆಂಗೆ ಮಹಾಮಾರಿ ಹೆಚ್ಚಾಗಿದೆ. ಮಲಿನ ನೀರು ಕರೆಯ ಒಡಲಿಗೆ ಸೇರುತ್ತಿರುವುದರಿಂದ ಸಾಂಕ್ರಾಮಿಕ ರೋಗ ಎದುರಾಗಿದೆ.

‘ಜಾನುವಾರುಗಳಿಗೂ ಕೊಳಚೆ ನೀರು’

ಕೊಳಚೆ ನೀರು ಚೇಂಬರ್‌ನಿಂದ ಮಲಿನ ನೀರು ಹೊರಗೆ ಹರಿಯುತ್ತಿದೆ. ಇದರಿಂದ ದೊಡ್ಡ ಕೆರೆಯ ನೀರು ಮಲಿನವಾಗುತ್ತಿದೆ.  ಜಾನುವಾರು ಈ ಕೆರೆಯ ನೀರನ್ನೇ ಕುಡಿಯುತ್ತಿವೆ. ಇದರಿಂದ ಆತಂಕ ಎದುರಾಗಿದೆ – ಮುನಿಸ್ವಾಮಿ, ರೈತ

‘ಮಲಿನ ನೀರು ಕೆರೆಗೆ’

ದೊಡ್ಡಕೆರೆ ಅಂಗಳದಲ್ಲಿ ಪುರಸಭೆ ಕೊರೆದಿರುವ ಕೊಳವೆಬಾವಿಗಳಿಂದ ಪಟ್ಟಣದಲ್ಲಿ ನಿವಾಸಿಗಳಿಗೆ ಪೈಪ್ ಲೈನ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕೊಳಚೆ ನೀರು ದೊಡ್ಡ ಕೆರೆಯ ನೀರಿನಲ್ಲಿ ಮಿಶ್ರಣ ಆಗುತ್ತಿದೆ. ಪೈಪ್‌ಲೈನ್ ಕೂಡಾ ಇದೇ ಕೆರೆ ಅಂಗಳದಲ್ಲಿ ಇರುವುದರಿಂದ ನಾಗರಿಕರಲ್ಲಿ ಭೀತಿ ಎದುರಾಗಿದೆ – ದಯಾನಂದ್, ಕನ್ನಡಪರ ಹೋರಾಟಗಾರ

‘ಸಮಸ್ಯೆಗೆ ಶೀಘ್ರ ಪರಿಹಾರ’

ವಿದ್ಯುತ್ ಪರಿವರ್ತಕದಲ್ಲಿ ಸಮಸ್ಯೆಯಾಗಿ ವಿದ್ಯುತ್ ಸರಬರಾಜಿನಲ್ಲಿ ತೊಂದರೆ ಆಗಿತ್ತು. ಹಾಗಾಗಿ, ಕೊಳಚೆ ನೀರು ಸಂಸ್ಕರಣ ಘಟಕ ಸ್ಥಗಿತವಾಗಿದೆ. ಈ ಬಗ್ಗೆ ಬೆಸ್ಕಾಂ ಎಇಇ ಬಳಿ ಚರ್ಚಿಸಲಾಗಿದೆ. ಕೂಡಲೇ ಸಂಸ್ಕರಣ ಘಟಕಕ್ಕೆ ವಿದ್ಯುತ್ ಪರಿವರ್ತಕ ಅಳವಡಿಸಲು ಸೂಚಿಸಿದ್ದಾರೆ. ಎರಡು–ಮೂರು ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ – ಪ್ರದೀಪ್ ಕುಮಾರ್, ಮುಖ್ಯಾಧಿಕಾರಿ, ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT