ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೆಕ್ಸ್‌–ಬ್ಯಾನರ್‌ ಅಬ್ಬರ: ಅಂದಗೆಟ್ಟ ಕೋಲಾರ ನಗರ

ಪ್ರಚಾರದ ಗೀಳಿಗೆ ಸಾರ್ವಜನಿಕ ಸ್ಥಳಗಳು ವಿರೂಪ: ನಗರಸಭೆ ಅಧಿಕಾರಿಗಳ ಮೌನ
Last Updated 1 ಮೇ 2022, 19:30 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಫ್ಲೆಕ್ಸ್‌, ಬ್ಯಾನರ್‌, ಪೋಸ್ಟರ್‌, ಜಾಹೀರಾತು ಫಲಕಗಳದ್ದೇ ಅಬ್ಬರ. ಸರ್ಕಾರಿ ಕಚೇರಿ, ಶಾಲಾ ಕಾಲೇಜು ಕಟ್ಟಡಗಳು, ಬಸ್‌ ನಿಲ್ದಾಣದ ತಡೆಗೋಡೆ ಹೀಗೆ ಸಾರ್ವಜನಿಕ ಸ್ಥಳಗಳಲ್ಲೆಲ್ಲಾ ಇವುಗಳದ್ದೇ ಕಾರುಬಾರು.

ಪ್ರಚಾರದ ಗೀಳಿಗೆ ಬಿದ್ದಿರುವ ರಾಜಕೀಯ ಮುಖಂಡರು, ರಾಜಕಾರಣಿಗಳು ಮತ್ತು ಅವರ ಬೆಂಬಲಿಗರ ಪಡೆಯು ಹುಟ್ಟಿದ ಹಬ್ಬ ಹಾಗೂ ಹಬ್ಬಗಳಿಗೆ ಶುಭಾಶಯ ಕೋರುವ ನೆಪದಲ್ಲಿ ಸಿಕ್ಕ ಸಿಕ್ಕಲೆಲ್ಲಾ ಬ್ಯಾನರ್‌, ಫ್ಲೆಕ್ಸ್‌ಗಳನ್ನು ಹಾಕಿದೆ. ಮತ್ತೊಂದೆಡೆ ಚಿತ್ರಮಂದಿರಗಳ ಕೆಲಸಗಾರರು ಸಾರ್ವಜನಿಕ ಸ್ಥಳಗಳಲ್ಲಿ ಚಲನಚಿತ್ರದ ಪೋಸ್ಟರ್‌ಗಳನ್ನು ಅಂಟಿಸಿ ನಗರದ ಅಂದಗೆಡಿಸಿದ್ದಾರೆ.

ರಾಜಕಾರಣಿಗಳ ಬೆಂಬಲಿಗರು ಪರಸ್ಪರ ಸ್ಪರ್ಧೆಗೆ ಇಳಿದವರಂತೆ ತಮ್ಮ ಮುಖಂಡರ ಭಾವಚಿತ್ರವಿರುವ ಫ್ಲೆಕ್ಸ್‌, ಬ್ಯಾನರ್‌ ಹಾಕಿ ನಗರದ ಸೌಂದರ್ಯಕ್ಕೆ ಧಕ್ಕೆ ತಂದಿದ್ದಾರೆ. ಇನ್ನು ಅಶ್ಲೀಲ ಭಂಗಿಯ ಚಲನಚಿತ್ರಗಳ ಪೋಸ್ಟರ್‌ಗಳನ್ನು ಅಂಟಿಸಿರುವ ಜಾಗದಲ್ಲಿ ಮಹಿಳೆಯರು, ಮಕ್ಕಳು ಓಡಾಡುವುದೇ ಕಷ್ಟವಾಗಿದೆ.

ನಗರಸಭೆಯು ಜಾಹೀರಾತು ಶುಲ್ಕದ ರೂಪದಲ್ಲಿ ವರ್ಷಕ್ಕೆ ₹ 7.68 ಲಕ್ಷ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದೆ. ಆದರೆ, ಖಾಸಗಿ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳು ನಗರದಲ್ಲಿ ನಿಯಮಬಾಹಿರವಾಗಿ ಪ್ರಚಾರ ಸಾಮಗ್ರಿಗಳನ್ನು ಹಾಕುವ ಮೂಲಕ ನಗರಸಭೆಗೆ ವಂಚಿಸುತ್ತಿದ್ದಾರೆ. ಅಧಿಕಾರಿಗಳ ಕಣ್ತಪ್ಪಿಸಿ ನಡೆಯುತ್ತಿರುವ ಈ ಅಕ್ರಮದಿಂದ ನಗರಸಭೆಗೆ ಲಕ್ಷಾಂತರ ರೂಪಾಯಿ ಜಾಹೀರಾತು ತೆರಿಗೆ ಖೋತಾ ಆಗುತ್ತಿದೆ.

ನೆಚ್ಚಿನ ತಾಣಗಳು: ಹೆಚ್ಚು ಜನಸಂದಣಿ ಇರುವ ಸ್ಥಳಗಳು, ಪ್ರಮುಖ ವಾಣಿಜ್ಯ ಪ್ರದೇಶಗಳು, ಸರ್ಕಾರಿ ಕಚೇರಿಗಳ ತಡೆಗೋಡೆ, ಪ್ರಮುಖ ವೃತ್ತ ಹಾಗೂ ಜಂಕ್ಷನ್‌ಗಳು ಪ್ರಚಾರ ಪ್ರಿಯರ ನೆಚ್ಚಿನ ತಾಣಗಳಿವೆ. ಈ ಸ್ಥಳಗಳಲ್ಲಿ ಫ್ಲೆಕ್ಸ್‌, ಬ್ಯಾನರ್‌ ಹಾಕಿದರೆ ಹೆಚ್ಚು ಪ್ರಚಾರ ಸಿಗುತ್ತದೆ ಎಂಬುದು ಪ್ರಚಾರ ಪ್ರಿಯರ ಲೆಕ್ಕಾಚಾರ. ಹೀಗಾಗಿ ಈ ಸ್ಥಳಗಳನ್ನೇ ಗುರಿಯಾಗಿಸಿಕೊಂಡು ಪ್ರಚಾರ ಸಾಮಗ್ರಿ ಹಾಕುತ್ತಿದ್ದಾರೆ.

ಚಿತ್ರಮಂದಿರಗಳ ಕೆಲಸಗಾರರಿಗೆ ಶಾಲಾ ಕಾಲೇಜುಗಳ ಸುತ್ತಮುತ್ತಲಿನ ಪ್ರದೇಶವೇ ಹಾಟ್ ಸ್ಪಾಟ್‌. ವಿದ್ಯಾರ್ಥಿಗಳನ್ನು ಚಿತ್ರಮಂದಿರದತ್ತ ಆಕರ್ಷಿಸುವ ಉದ್ದೇಶಕ್ಕಾಗಿ ಹಸಿಬಿಸಿ ಪೋಸ್ಟರ್‌ಗಳನ್ನು ಹಾಕಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳು ಸಹ ಪ್ರವೇಶಾತಿ ಹೆಚ್ಚಳಕ್ಕಾಗಿ ಪ್ರಚಾರ ಸಾಮಗ್ರಿಗಳ ಮೊರೆ ಹೋಗಿವೆ. ಕೋರ್ಸ್‌ಗಳ ಮಾಹಿತಿ, ಪ್ರವೇಶಾತಿ ದಿನಾಂಕ, ಪ್ರವೇಶ ಶುಲ್ಕ, ಫಲಿತಾಂಶ ಸಾಧನೆ ವಿವರಗಳನ್ನು ಒಳಗೊಂಡ ಪ್ರಚಾರ ಸಾಮಗ್ರಿಗಳನ್ನು ಕಂಡಕಂಡಲ್ಲಿ ಹಾಕುತ್ತಿವೆ.

ಬಟ್ಟೆ ಅಂಗಡಿಗಳು, ಹೋಟೆಲ್‌ಗಳು, ಚಿನ್ನಾಭರಣ ಮಳಿಗೆಗಳು, ಮೊಬೈಲ್‌ ಹಾಗೂ ಎಲೆಕ್ಟ್ರಾನಿಕ್ಸ್‌ ಉಪಕರಣ ಮಾರಾಟ ಮಳಿಗೆಗಳು ಸಹ ಪ್ರಚಾರದ ಗೀಳಿಗೆ ಅಂಟಿಕೊಂಡಿವೆ. ಜಾಹೀರಾತು ಶುಲ್ಕ ಉಳಿಸಲು ಕಳ್ಳದಾರಿ ಹಿಡಿದಿರುವ ಮಳಿಗೆಗಳ ಮಾಲೀಕರು ನಗರಸಭೆಯಿಂದ ಪೂರ್ವಾನುಮತಿ ಪಡೆಯದೆ ಪ್ರಚಾರ ಸಾಮಗ್ರಿ ಅಳವಡಿಸುತ್ತಿವೆ. ರಸ್ತೆ ಬದಿಯ ಮರ, ವಿದ್ಯುತ್‌ ಕಂಬ, ಟ್ರಾನ್ಸ್‌ಫಾರ್ಮರ್‌ಗಳ ಮೇಲೂ ಜಾಹೀರಾತು ಫಲಕಗಳ ಅಬ್ಬರ ಜೋರಾಗಿದೆ.

20 ಪಟ್ಟು ಹೆಚ್ಚು: ನಗರಸಭೆ ಅಧಿಕಾರಿಗಳ ಮಾಹಿತಿ ಪ್ರಕಾರ ನಗರದಲ್ಲಿ ಅನುಮತಿ ಪಡೆದು ಹಾಕಿರುವ ಪ್ರಚಾರ ಸಾಮಗ್ರಿಗಳ ಸಂಖ್ಯೆ ಕೇವಲ 200. ಈ ಸಂಖ್ಯೆಗೆ ಹೋಲಿಸಿದರೆ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ಮತ್ತು ಜಾಹೀರಾತು ಫಲಕಗಳ ಸಂಖ್ಯೆಯು 20 ಪಟ್ಟು ಹೆಚ್ಚಿದೆ.

ಈ ಬಗ್ಗೆ ಸಾರ್ವಜನಿಕರು ನಗರಸಭೆಗೆ ಹಲವು ಬಾರಿ ದೂರು ನೀಡಿ ಅನಧಿಕೃತ ಪ್ರಚಾರ ಸಾಮಗ್ರಿ ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಅಧಿಕಾರಿಗಳು ಆಗೊಮ್ಮೆ ಈಗೊಮ್ಮೆ ಅನಧಿಕೃತ ಪ್ರಚಾರ ಸಾಮಗ್ರಿ ತೆರವುಗೊಳಿಸಿದರೂ ಮರು ದಿನ ಅದೇ ಜಾಗದಲ್ಲಿ ಬ್ಯಾನರ್‌, ಫ್ಲೆಕ್ಸ್‌ಗಳು ನೇತಾಡುತ್ತಿರುತ್ತವೆ.

ರಾಜಕೀಯ ಒತ್ತಡ: ‘ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಅನಧಿಕೃತ ಪ್ರಚಾರ ಸಾಮಗ್ರಿ ತೆರವುಗೊಳಿಸಲು ಮುಂದಾದರೆ ರಾಜಕೀಯ ಒತ್ತಡ ಬರುತ್ತದೆ. ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು ಅಥವಾ ಅವರ ಬೆಂಬಲಿಗರು ಕರೆ ಮಾಡಿ ಫ್ಲೆಕ್ಸ್‌, ಬ್ಯಾನರ್‌ ತೆರವುಗೊಳಿಸದಂತೆ ಒತ್ತಡ ಹಾಕುತ್ತಾರೆ’ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.

‘ನಗರದ ಸೌಂದರ್ಯ ಕಾಪಾಡುವ ಬಗ್ಗೆ ನಮಗೂ ಕಾಳಜಿಯಿದೆ. ಕಾನೂನು ಪಾಲನೆಗೆ ನಾವು ಸಿದ್ಧರಿದ್ದೇವೆ. ಆದರೆ, ರಾಜಕೀಯ ಒತ್ತಡದಿಂದಾಗಿ ಕೈಚೆಲ್ಲಿದ್ದೇವೆ’ ಎಂದು ಅಧಿಕಾರಿಗಳು ಅಳಲು ತೋಡಿಕೊಳ್ಳುತ್ತಾರೆ.

ಒಟ್ಟಾರೆ ನಗರಸಭೆಯು ಸಾರ್ವಜನಿಕ ಸ್ಥಳ ವಿರೂಪ ತಡೆ ಕಾಯ್ದೆ ಅನುಷ್ಠಾನದಲ್ಲಿ ಎಡವಿದೆ. ಸಂಘ ಸಂಸ್ಥೆಗಳ ವಿರೋಧ ಹಾಗೂ ರಾಜಕೀಯ ಒತ್ತಡಕ್ಕೆ ಮಣಿದಿರುವ ಅಧಿಕಾರಿಗಳು ಅನಧಿಕೃತ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸುತ್ತಿಲ್ಲ. ಮತ್ತೊಂದೆಡೆ ಜಾಹೀರಾತು ಶುಲ್ಕ ವಸೂಲಿಯಲ್ಲೂ ಹಿಂದೆ ಬಿದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT