ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಗುಂಪುಗಾರಿಕೆ ಇಲ್ಲ: ಮುನಿಸ್ವಾಮಿ

Published 17 ಏಪ್ರಿಲ್ 2024, 14:52 IST
Last Updated 17 ಏಪ್ರಿಲ್ 2024, 14:52 IST
ಅಕ್ಷರ ಗಾತ್ರ

ಕೆಜಿಎಫ್‌: ‘ತಾಲ್ಲೂಕಿನ ಎಲ್ಲಾ ಬಿಜೆಪಿ ಮುಖಂಡರನ್ನು ಒಂದೆಡೆಗೆ ಸೇರಿಸಿ ಸಮನ್ವಯದಿಂದ ಪ್ರಚಾರ ಮಾಡಲು ಹಿರಿಯ ನಾಯಕರು ಸೂಚಿಸಿದ್ದಾರೆ. ಅದರಂತೆ ಸಮಿತಿ ರಚನೆ ಮಾಡಲಾಗುವುದು’ ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.

ತಾಲ್ಲೂಕಿನ ಕ್ಯಾಸಂಬಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರ ಜಂಟಿ ಸಭೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿ, ‘ಪಾರಾಂಡಹಳ್ಳಿಯಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಬಹಳಷ್ಟು ಪ್ರಮುಖರು ಭಾಗವಹಿಸಿರಲಿಲ್ಲ. ಆದ್ದರಿಂದ ಎಲ್ಲಾ ಮುಖಂಡರ ಸಭೆಯನ್ನು ಇಲ್ಲಿ ಆಯೋಜನೆ ಮಾಡಲಾಗಿತ್ತು. ಮುಖಂಡ ಮೋಹನಕೃಷ್ಣ ಅವರೊಂದಿಗೆ ಕೂಡ ಮಾತನಾಡಲಾಗಿದೆ. ಅವರು ಕೂಡ ಈಗಾಗಲೇ ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ನಮ್ಮಲ್ಲಿ ಸಂಪಂಗಿ ಗುಂಪು, ಮೋಹನಕೃಷ್ಣ ಗುಂಪು ಎಂಬುದು ಇಲ್ಲ. ಎಲ್ಲವೂ ಮೋದಿ ಗುಂಪು, ಮೈತ್ರಿ ಗುಂಪು’ ಎಂದರು.

’ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡ ಪರಿಣಾಮವಾಗಿ ಬಿಜೆಪಿಗೆ 25 ಮತ್ತು ಜೆಡಿಎಸ್‌ಗೆ 3 ಸೀಟ್ ಬಿಟ್ಟುಕೊಡಲಾಯಿತು. ಪಕ್ಷ ಹೇಳಿದ್ದರಿಂದ ನಾನು ಅಭ್ಯರ್ಥಿಯಾಗಲಿಲ್ಲ, ಬಿಟ್ಟುಕೊಟ್ಟಿದ್ದೇನೆ. ಮುಂದೆ ಉತ್ತಮ ಅವಕಾಶ ನೀಡುವುದಾಗಿ ವರಿಷ್ಠರು ಭರವಸೆ ನೀಡಿದ್ದಾರೆ. ಬಂಗಾರಪೇಟೆ ವಿಧಾನಸಭೆ ಚುನಾವಣೆ ಇನ್ನೂ ದೂರ ಇದೆ. ಆದರೆ ನಾನು ಅದರ ಆಕಾಂಕ್ಷಿ ಅಲ್ಲ. ವಿಧಾನಸಭೆ ಚುನಾವಣೆ ಬರುವಷ್ಟರಲ್ಲಿ ಡಿ ಲಿಮಿಟೇಷನ್‌ ಬಂದು ಕ್ಷೇತ್ರಗಳು ಬದಲಾವಣೆಯಾಗಲಿದೆ. ಆಮೇಲೆ ನೋಡೋಣ’ ಎಂದು ಮುನಿಸ್ವಾಮಿ ಹೇಳಿದರು.

‘ಬಿಜೆಪಿ ಮತ್ತು ಜೆಡಿಎಸ್‌ ಪಕ್ಷದ ಮುಖಂಡರು ಅಭ್ಯರ್ಥಿ ಮಲ್ಲೇಶ್‌ಬಾಬು ಅವರನ್ನು ಚುನಾವಣೆ ನಡೆಸಲು ಮುಕ್ತವಾಗಿ ಬಿಡಬೇಕು. ಎನ್‌ಡಿಎ ಸರ್ಕಾರ ಬಂದ ಮೇಲೆ ಕೆಜಿಎಫ್ ಅಭಿವೃದ್ಧಿಯಾಗಿದೆ. ಬಿಜಿಎಂಎಲ್‌ ಕಾರ್ಮಿಕರಿಗೆ ಕಾಂಗ್ರೆಸ್ ಮೋಸ ಮಾಡಿತು. 2,800 ಬಿಜಿಎಂಎಲ್‌ ಕಾರ್ಮಿಕರಿಗೆ ಮನೆಗಳ ಹಕ್ಕು ಪತ್ರ ಕೊಟ್ಟಿದ್ದು ಬಿಜೆಪಿ. ಮಾರಿಕುಪ್ಪಂನಿಂದ ಕುಪ್ಪಂಗೆ ರೈಲು ಮಾರ್ಗ ಅಭಿವೃದ್ಧಿಗೆ ₹ 200 ಕೋಟಿ ಬಿಡುಗಡೆ ಮಾಡಲಾಗಿದೆ.ಕ್ಯಾಸಂಬಳ್ಳಿಯಲ್ಲಿ ಪ್ರೌಢಶಾಲೆ ಮತ್ತು ಕಾಲೇಜಿಗೆ ಜಾಗ ಕೊಟ್ಟಿದ್ದು ಯಡಿಯೂರಪ್ಪ ಸರ್ಕಾರ’ ಎಂದು ಹೇಳಿದರು.

‘ಕಾಂಗ್ರೆಸ್‌ ಮುಖಂಡರು ಕೂಡ ರಮೇಶ್‌ ಕುಮಾರ್ ಮತ್ತು ಮುನಿಯಪ್ಪ ಅವರಿಗೆ ನಾಮ ಇಟ್ಟು ಬೆಂಗಳೂರಿನಿಂದ ಕರೆದುಕೊಂಡು ಬಂದು ಇಲ್ಲಿ ಸ್ಪರ್ಧೆ ಮಾಡಲು ಬಿಟ್ಟಿದ್ದಾರೆ. ಕೋಲಾರದಿಂದ ಸ್ಪರ್ಧೆ ಮಾಡಿರುವ ಗೌತಮ್ ಅವರಿಗೆ ಕಾಂಗ್ರೆಸ್‌ನ ಎರಡು ಗುಂಪುಗಳು ಸಹಕಾರ ನೀಡುತ್ತಿಲ್ಲ. ಅಭ್ಯರ್ಥಿ ಗೌತಮ ಅವರು ಡಿ.ಕೆ. ಶಿವಕುಮಾರ್ ಬಳಿ ನೋವು ತೋಡಿಕೊಂಡಿದ್ದಾರೆ’ ಎಂದು ಮುನಿಸ್ವಾಮಿ ಲೇವಡಿ ಮಾಡಿದರು.

ಮಹಿಳಾ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷೆ ಗೀತಾ ವಿವೇಕಾನಂದ ಮಾತನಾಡಿ, ‘ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದೆ. ₹ 2000 ಕೊಟ್ಟು ₹ 6000 ಕೀಳುತ್ತಿದೆ. ವಿದ್ಯುತ್ ಬಿಲ್ ಹೆಚ್ಚಿಸಲಾಗಿದೆ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ’ ಎಂದು ದೂರಿದರು.

ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ವೇಣುಗೋಪಾಲ್‌, ಜೆಡಿಎಸ್ ಮುಖಂಡ ಕೆ.ರಾಜೇಂದ್ರನ್‌, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಹನುಮಂತು ಮಾತನಾಡಿದರು. ಮುಖಂಡರಾದ ನವೀನರಾಮ, ಜಯಪ್ರಕಾಶ್ ನಾಯ್ಡು, ಕಣ್ಣೂರು ವಿಜಿ, ಹೇಮಾರೆಡ್ಡಿ, ಚೆಂಗೇಗೌಡ, ಅಶ್ವತ್ಥ ನಾಯ್ಡು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT