ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸೇವೆಗೆ ಹಿಂದೂ–ಮುಸ್ಲಿಂ ಭೇದವಿಲ್ಲ

ಉಮ್ರಾ ಚಾರಿಟಬಲ್‌ ಪ್ರತಿಷ್ಠಾನದ ಅಧ್ಯಕ್ಷ ಕೆಜಿಎಫ್ ಬಾಬು ಹೇಳಿಕೆ
Last Updated 2 ನವೆಂಬರ್ 2021, 14:30 IST
ಅಕ್ಷರ ಗಾತ್ರ

ಕೋಲಾರ: ‘ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಹಿಂದೂ ಹಾಗೂ ಮುಸ್ಲಿಂ ಎಂಬ ಭೇದ ಭಾವವಿಲ್ಲದೆ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಜನರಿಗೆ ಆರ್ಥಿಕ ನೆರವು ನೀಡುತ್ತಿದ್ದೇನೆ’ ಎಂದು ಉಮ್ರಾ ಚಾರಿಟಬಲ್‌ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸಮಾಜ ಸೇವಕ ಕೆಜಿಎಫ್ ಬಾಬು ಹೇಳಿದರು.

ತಾಲ್ಲೂಕಿನ ಕ್ಯಾಲನೂರು ಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲೆ ವಿದ್ಯಾರ್ಥಿಗಳಿಗೆ ಮಂಗಳವಾರ ವಿದ್ಯಾ ಪ್ರೋತ್ಸಾಹಧನದ ಚೆಕ್‌ ವಿತರಿಸಿ ಮಾತನಾಡಿ, ‘ಒಂದು ದಿನ ಜನರ ಸೇವೆ ಮಾಡಿ ಸುಮ್ಮನಾಗುವ ವ್ಯಕ್ತಿ ನಾನಲ್ಲ. ನನ್ನ ಕೊನೆಯ ಉಸಿರಿರುವವರೆಗೆ ಜನ ಸೇವೆ ಮಾಡುತ್ತೇನೆ’ ಎಂದು ತಿಳಿಸಿದರು.

‘ಬಡ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡುತ್ತಿದ್ದೇನೆ. ಪಿಯುಸಿಯಿಂದ ಪದವಿ ಹಂತದವರೆಗೆ ಬಿ.ಇ, ಕಾನೂನು, ನರ್ಸಿಂಗ್‌ ಸೇರಿದಂತೆ 20 ಸಾವಿರ ವಿದ್ಯಾರ್ಥಿಗಳಿಗೆ ವರ್ಷಕ್ಕೆ ತಲಾ ₹ 4 ಸಾವಿರ ಹಣಕಾಸು ನೆರವು ಮತ್ತು ನೋಟ್‌ ಪುಸ್ತಕ ಕೊಡುತ್ತೇನೆ. ಇದಕ್ಕಾಗಿ ವರ್ಷಕ್ಕೆ ₹ 8 ಕೋಟಿ ಮೀಸಲಿಟ್ಟಿದ್ದೇನೆ. 6ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗಿನ 30 ಸಾವಿರ ವಿದ್ಯಾರ್ಥಿಗಳಿಗೆ ವರ್ಷಕ್ಕೆ ತಲಾ ₹ 1 ಸಾವಿರ ಹಣಕಾಸು ನೆರವು ಮತ್ತು ನೋಟ್‌ ಪುಸ್ತಕ ನೀಡುತ್ತೇನೆ. ಇದಕ್ಕೆ ವಾರ್ಷಿಕ ₹ 3 ಕೋಟಿ ಮೀಸಲಿಟ್ಟಿದ್ದೇನೆ’ ಎಂದು ವಿವರಿಸಿದರು.

‘ಯಾವುದೇ ಜಾತಿ, ಮತಕ್ಕೆ ಸೀಮಿತವಾಗದೆ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ. ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತೇನೆ. ಪ್ರತಿ ಕಾಲೇಜಿನಿಂದ ವಿದ್ಯಾರ್ಥಿಗಳ ಮಾಹಿತಿ ಪಡೆದು ಹಣಕಾಸು ನೆರವು ಕಲ್ಪಿಸುತ್ತೇವೆ. ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನ ಸೇವೆ ಮಾಡುತ್ತೇನೆ’ ಎಂದರು.

₹ 24 ಕೋಟಿ ಮೀಸಲು: ‘ಬಡ, ಮಧ್ಯಮ ಹಾಗೂ ಮೇಲ್ವರ್ಗದವರು ಸೇರಿದಂತೆ ಕ್ಷೇತ್ರದ 2.40 ಲಕ್ಷ ಜನರಿಗೆ ಹಣಕಾಸು ನೆರವು ನೀಡುತ್ತೇವೆ. ಸದ್ಯದಲ್ಲೇ ಮನೆ ಮನೆಗೆ ಆರ್ಥಿಕ ನೆರವು ತಲುಪಿಸಲಾಗುತ್ತದೆ. ಕುಟುಂಬದ ಪ್ರತಿ ಸದಸ್ಯರಿಗೆ ತಲಾ ₹ 1 ಸಾವಿರ ಕೊಡುತ್ತೇವೆ. 4 ಮಂದಿ ಸದಸ್ಯರ ಕುಟುಂಬಕ್ಕೆ ₹ 4 ಸಾವಿರ, 6 ಸದಸ್ಯರ ಕುಟುಂಬಕ್ಕೆ ₹ 6 ಸಾವಿರ, 10 ಸದಸ್ಯರ ಕುಟುಂಬಕ್ಕೆ ₹ 10 ಸಾವಿರ ನೀಡುತ್ತೇವೆ. ಇದಕ್ಕಾಗಿ ವರ್ಷಕ್ಕೆ ₹ 24 ಕೋಟಿ ಮೀಸಲಿಟ್ಟಿದ್ದೇನೆ’ ಎಂದು ಘೋಷಿಸಿದರು.

‘ಬಡತನದ ಕಾರಣಕ್ಕೆ ನನಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಲಿಲ್ಲ. ಇಂತಹ ಪರಿಸ್ಥಿತಿ ಯಾವುದೇ ವಿದ್ಯಾರ್ಥಿಗೆ ಬರಬಾರದೆಂಬ ಉದ್ದೇಶಕ್ಕೆ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದೇನೆ. ನನ್ನ ಜೀವ ಇರುವವರೆಗೆ ಈ ಕಾರ್ಯ ಮುಂದುವರಿಸುತ್ತೇನೆ. ಮುಂದಿನ ದಿನಗಳಲ್ಲಿ ವೇಮಗಲ್ ಹೋಬಳಿಯಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳ ಶಿಕ್ಷಣಕ್ಕೆ ಎಲ್ಲಾ ಸೌಲಭ್ಯ ಕಲ್ಪಿಸುತ್ತೇನೆ’ ಎಂದು ಭರವಸೆ ನೀಡಿದರು.

ಗ್ರಾ.ಪಂ ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ಶೇಖ್‌ ಮಹಮ್ಮದ್, ರಾಮಣ್ಣ, ರಾಜೇಂದ್ರಪ್ರಸಾದ್, ಮಂಜುನಾಥ್, ಪಿಡಿಒ ಮುನಿರಾಜು, ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣಮೂರ್ತಿ, ಮುಖಂಡರಾದ ಸೈಯದ್ ಪಾಷಾ, ಕುಮಾರ್, ಭಾರತೀಯ ದಲಿತ ಸೇನೆ ರಾಜ್ಯ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT