ಶನಿವಾರ, ಮೇ 28, 2022
31 °C
ಬಿಜೆಪಿ ಗೌರವದಿಂದ ನಡೆಸಿಕೊಂಡಿದೆ: ಸಚಿವ ಮುನಿರತ್ನ ಹೇಳಿಕೆ

ಕಾಂಗ್ರೆಸ್‌ಗೆ ಮರಳುವ ಅನಿವಾರ್ಯತೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಕಾಂಗ್ರೆಸ್‌ ಬಿಟ್ಟು ಬಂದ ನಮಗೆ ಮತ್ತೆ ಆ ಪಕ್ಷಕ್ಕೆ ಹೋಗುವ ಅನಿವಾರ್ಯತೆ ಇಲ್ಲ, ಬಿಜೆಪಿ ನಮ್ಮನ್ನು ಗೌರವಯುತವಾಗಿ ನಡೆಸಿಕೊಂಡಿದೆ’ ಎಂದು ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಹೇಳಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಒಂದು ವೇಳೆ ಕಾಂಗ್ರೆಸ್‌ ಬಿಟ್ಟು ಬಂದವರ ಪೈಕಿ ಕನಿಷ್ಠ ಒಬ್ಬರೂ ಕಾಂಗ್ರೆಸ್‌ಗೆ ವಾಪಸ್‌ ಹೋದರೆ ಸಿದ್ದರಾಮಯ್ಯ ಅವರು ಆ ಪಕ್ಷದಲ್ಲಿ ಇರುವುದಿಲ್ಲ. ಏಕೆಂದರೆ ಸಿದ್ದರಾಮಯ್ಯರು ಕೊಟ್ಟ ಮಾತಿನಂತೆ ನಡೆದುಕೊಳ್ಳುವವರು. ನಾವು ಏನಾದರೂ ಕಾಂಗ್ರೆಸ್‌ಗೆ ವಾಪಸ್‌ ಹೋದರೆ ರಮೇಶ್‌ಕುಮಾರ್ ಮತ್ತು ಸಿದ್ದರಾಮಯ್ಯ ಆ ಪಕ್ಷ ಬಿಡುವವರಲ್ಲಿ ಮೊದಲಿಗರಾಗಿರುತ್ತಾರೆ’ ಎಂದು ತಿಳಿಸಿದರು.

‘ಸಿದ್ದರಾಮಯ್ಯ ಅವರು ಒಂದು ಸಾರಿ ಕೊಟ್ಟ ಮಾತು ಹಿಂಪಡೆಯುವುದಿಲ್ಲ, ಪ್ರಜಾಪ್ರಭುತ್ವದ ದೇವಾಲಯ ವಿಧಾನಸೌಧದಲ್ಲಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಕಾಂಗ್ರೆಸ್‌ ಬಿಟ್ಟು ಹೋಗಿರುವವರನ್ನು ಯಾವುದೇ ಕಾರಣಕ್ಕೂ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ, ಅಂತಹ ಪರಿಸ್ಥಿತಿಯೂ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ, ಆಗ ಸ್ಪೀಕರ್‌ ಆಗಿದ್ದ ರಮೇಶ್‌ಕುಮಾರ್‌ರ ಮಾತಿಗೆ ಪುಷ್ಟಿ ನೀಡುವಂತೆ ಮುಂದೆ ಅಂತಹ ಪರಿಸ್ಥಿತಿ ಬಂದರೆ ಎಂದಾಗಲೂ ಸಿದ್ದರಾಮಯ್ಯ ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ’ ಎಂದರು.

‘ರಮೇಶ್ ಜಾರಕಿಹೊಳಿ ಸಂಪರ್ಕದಲ್ಲಿ 17ರಿಂದ 20 ಶಾಸಕರು ಇರುವುದು ನಿಜ, ಅವರು ರಾಜಕೀಯವಾಗಿ ತುಂಬಾ ಪ್ರಭಾವಿ. ಅವರ ಮಾತು ತೆಗೆದು ಹಾಕುವಂತಿಲ್ಲ ಮತ್ತು ಅವರು ಇಂತಹ ಗಂಭೀರ ಸಂಗತಿಯನ್ನು ಬೇಜವಾಬ್ದಾರಿಯಿಂದ ಹೇಳುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

ಅಸಮಾಧಾನವಿಲ್ಲ: ‘ಮುಖ್ಯಮಂತ್ರಿಗಳು ನನಗೆ ಕೋಲಾರ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ಕೊಟ್ಟಿರುವ ಬಗ್ಗೆ ಯಾವುದೇ ಅಸಮಾಧಾನವಿಲ್ಲ, ಮುಖ್ಯಮಂತ್ರಿಯವರಿಗೆ ಪರಮಾಧಿಕಾರವಿದ್ದು, ಅವರು ಹೇಳುವ ಕೆಲಸ ಮಾಡುವೆ. ಕೆಲಸ ಮಾಡುವುದಕ್ಕೆ ಯಾವ ಜಿಲ್ಲೆಯಾದರೇನು? ಜನಪರವಾಗಿ ಕೆಲಸ ಮಾಡಿ ಜನರ ಮೆಚ್ಚುಗೆ ಗಳಿಸಬೇಕು’ ಎಂದರು.

‘ಈಗ ಮುಖ್ಯಮಂತ್ರಿಗಳು ಕೊಟ್ಟಿರುವ ಜಿಲ್ಲೆಗಳಲ್ಲಿ ಸಚಿವರು ಅವರ ತವರು ಜಿಲ್ಲೆಯಲ್ಲಿ ಕೆಲಸ ಮಾಡುವಂತಯೇ ಕೆಲಸ ಮಾಡಬೇಕಿದೆ. ಜಿಲ್ಲಾ ಉಸ್ತುವಾರಿ ನೀಡಿಕೆ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಚಿವ ಸಂಪುಟ ಪುನರ್‌ ರಚನೆಯು ಪಕ್ಷದ ತೀರ್ಮಾನ. ಚುನಾವಣೆ ದೃಷ್ಟಿಯಿಂದ ಯಾರಿಗೆ ಸ್ಥಾನಮಾನ ನೀಡಬೇಕು? ಯಾರನ್ನು ಸಂಘಟನೆಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಪಕ್ಷ ನಿರ್ಧರಿಸುತ್ತದೆ. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು. ಈಶ್ವರಪ್ಪ ಅವರು ಸೇರಿದಂತೆ ಎಲ್ಲರೂ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರಬೇಕು’ ಎಂದು ನುಡಿದರು.

‘ಕಾಂಗ್ರೆಸ್‌ನ ಮೇಕೆದಾಟು ಯೋಜನೆ ಹೋರಾಟದ ಹಿಂದೆ ರಾಜಕೀಯ ದುರುದ್ದೇಶವಿದೆ. ಅದೊಂದು ರಾಜಕೀಯ ಯೋಜನೆ. ಮೇಕೆದಾಟು ವಿಚಾರದಲ್ಲಿ ಕೋಲಾರ ಜಿಲ್ಲೆಯನ್ನು ಕಡೆಗಣಿಸುವ ಪ್ರಶ್ನೆಯಿಲ್ಲ. ಬೆಂಗಳೂರಿಗೆ ಹತ್ತಿರದಲ್ಲಿರುವ ಜಿಲ್ಲೆಗೆ ಅನ್ಯಾಯ ಆಗಲು ಬಿಡಲ್ಲ’ ಎಂದು ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು