ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀಕೆ ಬಿಟ್ಟು ಬೇರೆ ಕೆಲಸವಿಲ್ಲ

ವಿಪಕ್ಷಗಳ ವಿರುದ್ಧ ಸಂಸದ ಮುನಿಸ್ವಾಮಿ ವ್ಯಂಗ್ಯ
Last Updated 11 ಸೆಪ್ಟೆಂಬರ್ 2020, 16:20 IST
ಅಕ್ಷರ ಗಾತ್ರ

ಕೋಲಾರ: ‘ಮಾದಕ ವಸ್ತುಗಳ ದಂಧೆ ವಿಚಾರದಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ವಿಪಕ್ಷದವರು ಈ ಹಿಂದೆ ಏನು ಕೆಲಸ ಮಾಡಿದ್ದಾರೆ ಎಂದು ಗೊತ್ತಿದೆ. ಸದ್ಯ ನಿರುದ್ಯೋಗಿಗಳಾಗಿರುವ ಅವರಿಗೆ ಟೀಕಿಸುವುದನ್ನು ಬಿಟ್ಟರೆ ಬೇರೆ ಕೆಲಸವಿಲ್ಲ’ ಎಂದು ಸಂಸದ ಎಸ್‌.ಮುನಿಸ್ವಾಮಿ ವ್ಯಂಗ್ಯವಾಡಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಭಾರತವು ಮಾದಕ ವ್ಯಸನ ಮುಕ್ತ ದೇಶವಾಗಬೇಕು. ಕೋವಿಡ್‌–19 ವಿಚಾರ ಮರೆಮಾಚಲು ಸರ್ಕಾರ ಮಾದಕ ವಸ್ತುಗಳ ದಂಧೆಯ ವಿಚಾರ ತೆಗೆದಿಲ್ಲ. ಆದರೂ ಕೆಲವರು ಈ ಬಗ್ಗೆ ಮಾತನಾಡಿದ್ದಾರೆ. ಪಕ್ಷವು ಅವರ ಟೀಕೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದರು.

‘ಮಾದಕ ವಸ್ತುಗಳ ದಂಧೆಯಲ್ಲಿ ಎಷ್ಟೇ ಪ್ರಭಾವಿಗಳು ಭಾಗಿಯಾಗಿದ್ದರೂ ಅವರಿಗೆ ಶಿಕ್ಷೆ ಆಗಲಿದೆ. ದಂಧೆಯಲ್ಲಿ ರಾಜಕಾರಣಿಗಳ ಮಕ್ಕಳಿದ್ದರೂ ಸರ್ಕಾರ ಬಿಡುವುದಿಲ್ಲ. ಸರ್ಕಾರ ಯಾರನ್ನೂ ರಕ್ಷಿಸುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ತಪ್ಪಿದ್ದಲ್ಲ. ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಯುವಕ ಯುವತಿಯರು ಮಾದಕ ವ್ಯಸನಿಗಳಾಗಿದ್ದು, ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಮಾದಕ ವಸ್ತುಗಳ ದಂಧೆಯಲ್ಲಿ ತಮ್ಮ ಪಾತ್ರ ಇರುವುದನ್ನು ಸಾಬೀತುಪಡಿಸಿದರೆ ಸರ್ಕಾರಕ್ಕೆ ಆಸ್ತಿ ಬರೆದು ಕೊಡುವುದಾಗಿ ಕಾಂಗ್ರೆಸ್‌ ಶಾಸಕ ಜಮೀರ್ ಅಹಮ್ಮದ್‌ ಖಾನ್ ಹೇಳಿದ್ದಾರೆ. ಜಮೀರ್‌ ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರೆ ಅವರ ಮನೆ ಮುಂದೆ ಕಾವಲುಗಾರನಾಗಿ ಕೆಲಸ ಮಾಡುವುದಾಗಿ ಹೇಳಿದ್ದರು. ಅವರು ಮೊದಲು ಆ ಮಾತು ಪೂರೈಸಲಿ’ ಎಂದು ಸವಾಲು ಹಾಕಿದರು.

‘ಜಮೀರ್ ಯಾರ ಜತೆ ಹೇಗೆ ಕೆಲಸ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಅವರು ಏನೇ ಹೇಳಿದರೂ ಜನ ಕೇಳುವ ಸ್ಥಿತಿಯಲ್ಲಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಜಮೀರ್ ತಮ್ಮ ಆಸ್ತಿ ದಾನ ಮಾಡುವುದಿದ್ದರೆ ಬಡವರಿಗೆ ಬರೆದು ಕೊಡಲಿ’ ಎಂದು ಕುಟುಕಿದರು.

ದಂಧೆಗೆ ಕಡಿವಾಣ: ‘ಪಕ್ಕದ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯದಿಂದ ಜಿಲ್ಲೆಗೆ ಗಾಂಜಾ ಬರುತ್ತಿದೆ. ಜಿಲ್ಲೆಯ ಪೊಲೀಸರು ಸಮರ್ಥವಾಗಿ ಕೆಲಸ ಮಾಡಿ ಗಾಂಜಾ ದಂಧೆಕೋರರನ್ನು ಪತ್ತೆ ಹಚ್ಚಿ ದಂಧೆಗೆ ಕಡಿವಾಣ ಹಾಕಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ ರಚನೆ ವಿಚಾರ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು. ಪಕ್ಷ ಸಂಘಟನೆ ನಿಟ್ಟಿನಲ್ಲಿ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಸಂಗತಿ ಗೊತ್ತಿಲ್ಲ. ಹಾಲಿ ಉಸ್ತುವಾರಿ ಸಚಿವರನ್ನೇ ಮುಂದುವರಿಸಬೇಕೆ ಅಥವಾ ಬೇಡವೆ ಎಂಬ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT