ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಮಾನದ ಮಧ್ಯೆ ಶೂದ್ರರ ಬದುಕು: ಕಾಂಗ್ರೆಸ್‌ ಶಾಸಕ ಪರಮೇಶ್ವರ್ ಕಳವಳ

ಸಮಾರಂಭದಲ್ಲಿ ಕಾಂಗ್ರೆಸ್‌ ಶಾಸಕ ಪರಮೇಶ್ವರ್ ಕಳವಳ
Last Updated 22 ಜನವರಿ 2021, 15:11 IST
ಅಕ್ಷರ ಗಾತ್ರ

ಕೋಲಾರ: ‘ಹಿಂದುತ್ವದ ಹೆಸರಿನಲ್ಲಿ ಜಾತಿಗಳನ್ನು ವರ್ಗೀಕರಣ ಮಾಡುವುದನ್ನು ಬಿಟ್ಟರೆ ಮಾತ್ರ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಿ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯ’ ಎಂದು ಕಾಂಗ್ರೆಸ್‌ ಶಾಸಕ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ವೇಮಗಲ್‌ನಲ್ಲಿ ಗುರುವಾರ ರಾತ್ರಿ ನಡೆದ ರೇಣುಕಾ ಯಲ್ಲಮ್ಮ ದೇವಾಲಯ ಪ್ರತಿಷ್ಠಾಪನಾ ಸಮಾರಂಭದಲ್ಲಿ ಮಾತನಾಡಿ, ‘ಹಿಂದೂಗಳೆಲ್ಲಾ ಒಂದೇ ಎಂದು ಹೇಳುತ್ತೇವೆ. ಆದರೂ ಶೂದ್ರರು ಅಗೌರವ ಅಪಮಾನದ ಮಧ್ಯೆ ಬದುಕುವಂತಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.‌

‘ಶೂದ್ರರು, ದಲಿತರು ಇಂದಿಗೂ ಸಂವಿಧಾನದ ಚೌಕಟ್ಟಿನಲ್ಲಿ ನಿರಾಸೆ ನೋವು ಕೋಪದಲ್ಲಿ ಬದುಕುವ ಪರಿಸ್ಥಿತಿಯಿದೆ. ಮನುಷ್ಯ ನೆಮ್ಮದಿಯ ಬದುಕು ಸಾಗಿಸಲು ಅಧ್ಯಾತ್ಮಿಕತೆ ಹಾಗೂ ಭಕ್ತಿ ಭಾವ ಅವಶ್ಯಕ. ಹೀಗಾಗಿ ಗ್ರಾಮಗಳಲ್ಲಿ ದೇವಾಲಯಗಳನ್ನು ನಿರ್ಮಿಸಬೇಕು. ಮನುಷ್ಯನ ಮನಸ್ಸು ಶುದ್ಧಿಯಾಗಲು ದೇವರಲ್ಲಿ ಭಕ್ತಿ ಅಗತ್ಯ. ರೇಣುಕಾ ಯಲ್ಲಮ್ಮ ದೇವಾಲಯ ಜೀರ್ಣೋದ್ಧಾರಗೊಳಿಸಿ ಲೋಕಾರ್ಪಣೆ ಮಾಡಲಾಗಿದೆ. ದೇವರ ಹೆಸರಿನಲ್ಲಿ ತಪ್ಪು ಮಾಡುವುದು ಬಹಳ ಕಡಿಮೆ’ ಎಂದರು.

‘ಇತ್ತೀಚಿನ ವರ್ಷಗಳಲ್ಲಿ ದೇವರು, ಧರ್ಮದ ಹೆಸರಿನಲ್ಲಿ ಕೋಮು ಸಾಮರಸ್ಯ ಕದಡಲಾಗುತ್ತಿದೆ. ಮನುಷ್ಯರ ಮಧ್ಯೆ ಜಾತಿಯ ವಿಷ ಬೀಜ ಬಿತ್ತಿ ರಾಜಕೀಯ ಮಾಡುವುದನ್ನು ನೋಡುತ್ತಿದ್ದೇವೆ. ಇಂತಹ ಬೆಳವಣಿಗೆಗಳು ಸಮಾಜಕ್ಕೆ ಅಪಾಯಕಾರಿ’ ಎಂದು ಹೇಳಿದರು.

ಸಾಂಸ್ಕೃತಿಕ ಪರಂಪರೆ: ‘ಗುಡಿ, ಚರ್ಚ್, ಮಸೀದಿಗಳಲ್ಲಿ ಪ್ರಾರ್ಥನೆ ಇಲ್ಲದೆ ಹೋಗಿದ್ದರೆ ಜನರು ಹುಚ್ಚರಾಗುತ್ತಿದ್ದಾರೆ. ಜಗತ್ತಿನಲ್ಲಿ ದೇವರ ಮೇಲಿನ ಭಕ್ತಿಯಿದ್ದರೆ ಮಾನವನ ಏಳಿಗೆ ಸಾಧ್ಯ. ವೈವಿಧ್ಯತೆಯಲ್ಲಿ ಏಕತೆ ಕಾಣಲು ಭಾರತದ ಸಾಂಸ್ಕೃತಿಕ ಪರಂಪರೆ ಮುಂದುವರಿಸಿಕೊಂಡು ಹೋಗಬೇಕು’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಕಿವಿಮಾತು ಹೇಳಿದರು.

‘ಧರ್ಮದ ಹೆಸರಿನಲ್ಲಿ ಮನುಷ್ಯರ ಮನಸ್ಸುಗಳನ್ನು ಛಿದ್ರಗೊಳಿಸುವುದು ಒಳ್ಳೆಯದಲ್ಲಿ. ದೇವರ ಹೆಸರಿನಲ್ಲಿ ಸಮಾಜ ಒಡೆಯುವುದೂ ಅಪಾಯಕಾರಿ. ಸಮಾಜದಲ್ಲಿರುವ ಎಲ್ಲಾ ಧರ್ಮಗಳು ಶಾಂತಿಯ ಮಂತ್ರ ಹೇಳುತ್ತವೆ. ಜನರು ಸಹನೆ ಮತ್ತು ಪ್ರೀತಿಯಿಂದ ಬಾಳುವುದು ಎಲ್ಲಾ ಧರ್ಮಗಳ ತಾತ್ಪರ್ಯ’ ಎಂದು ವಿವರಿಸಿದರು.

ಕೃಷಿ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎಂ.ಬೈರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಬಿ.ಉದಯ್‌ಶಂಕರ್, ದೇವಾಲಯದ ಧರ್ಮದರ್ಶಿ ಪಿ.ವೆಂಕಟೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ನಾಗರಾಜ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT