ಶನಿವಾರ, ಜನವರಿ 18, 2020
19 °C
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವಿಜಯ್‌ಕುಮಾರ್ ಹೇಳಿಕೆ

ಗಂಟಲು ಮಾರಿ: ಲಸಿಕೆ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯಲ್ಲಿ ಗಂಟಲು ಮಾರಿ ರೋಗ ನಿಯಂತ್ರಣಕ್ಕೆ ಡಿ.11ರಿಂದ 31ರವರೆಗೆ ಲಸಿಕೆ ಅಭಿಯಾನ ಹಮ್ಮಿಕೊಂಡಿದ್ದು, ಶಾಲಾ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್ ಮನವಿ ಮಾಡಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಅಪಾಯದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಗಂಟಲು ಮಾರಿ ರೋಗ ಪ್ರಕರಣಗಳು ಪತ್ತೆಯಾಗಿದ್ದು, ಈ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವ ಅನಿವಾರ್ಯತೆಯಿದೆ’ ಎಂದರು.

‘ಮಕ್ಕಳಿಗೆ ಲಸಿಕೆ ಹಾಕಿಸುವುದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಪೋಷಕರು ವದಂತಿಗೆ ಕಿವಿಗೊಡಬಾರದು. ಖಾಸಗಿ ಶಿಕ್ಷಣ ಸಂಸ್ಥೆಯವರು ಲಸಿಕೆ ಅಭಿಯಾನ ಕುರಿತು ಪೋಷಕರಿಗೆ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳು, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ಶಾಲೆಗಳು, ಮದರಸಾ ಮತ್ತು ಧಾರ್ಮಿಕ ಶಾಲೆಗಳು, ಇತರ ಇಲಾಖೆಗಳ ವಸತಿ ಶಾಲೆಗಳು, ನವೋದಯ ವಿದ್ಯಾಲಯ ಮತ್ತು ಅನಾಥಾಶ್ರಮಗಳನ್ನು ಲಸಿಕೆ ಅಭಿಯಾನದಡಿ ಸೇರಿಸಬೇಕು’ ಎಂದು ಹೇಳಿದರು.

ರೋಗದ ಲಕ್ಷಣ: ‘ಗಂಟಲು ಮಾರಿ, ನಾಯಿ ಕೆಮ್ಮು ಮತ್ತು ಧನುರ್ವಾಯು ರೋಗದಿಂದ ಮಕ್ಕಳನ್ನು ರಕ್ಷಿಸಲು ಈ ಲಸಿಕೆ ಹಾಕಬೇಕು. ಸಾಧಾರಣ ಜ್ವರ, ಗಂಟಲು ನೋವು ಮತ್ತು ನುಂಗಲು ತೊಂದರೆ ಆಗುವುದು, ಗಂಟಲಿನಲ್ಲಿ ಬೂದು ಬಣ್ಣದ ದಪ್ಪ ಪೊರೆ, ಕತ್ತಿನ ದುಗ್ದರಸ ಗ್ರಂಥಿಗಳ ಮತ್ತು ಸುತ್ತಮುತ್ತಲಿನ ಮೃದು ಅಂಗಾಂಶಗಳ ಉರಿತವು ಗಂಟಲು ಮಾರಿ ರೋಗದ ಲಕ್ಷಣಗಳಾಗಿವೆ’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್‌ ವಿವರಿಸಿದರು.

‘2 ಅಥವಾ 3 ವಾರ ವಿಪರೀತ ಕೆಮ್ಮು, ಆಗಾಗ್ಗೆ ವಾಂತಿ, ದೇಹದ ಭಾಗಗಳು ಸೆಟೆಯುವುದು, ಉಸಿರಾಟ ಸಮಸ್ಯೆ ಮತ್ತು ಸಾವು ಸಂಭವಿಸವುದು ಧನುರ್ವಾಯು ರೋಗದ ಲಕ್ಷಣಗಳು. ಈ ಲಕ್ಷಣಗಳು ಕಂಡಬಂದ ತಕ್ಷಣ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯುವಂತೆ ಅಧಿಕಾರಿಗಳು ಪ್ರೇರೇಪಿಸಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 1ನೇ ತರಗತಿಯ (5ರಿಂದ 6 ವರ್ಷ) 19,537 ಮಕ್ಕಳಿಗೆ ಡಿಟಿಪಿ ಲಸಿಕೆ (ಗಂಟಲು ಮಾರಿ, ನಾಯಿ ಕೆಮ್ಮು ಮತ್ತು ಧನುರ್ವಾಯು ಕಾಯಿಲೆಯಿಂದ ರಕ್ಷಣೆ), 5ನೇ ತರಗತಿಯ 21,798 ಹಾಗೂ ಎಸ್ಸೆಸ್ಸೆಲ್ಸಿಯ 19,949 ಮಕ್ಕಳಿಗೆ ಟಿಡಿ ಲಸಿಕೆ (ಧನುರ್ವಾಯು ಮತ್ತು ಢಿಪ್ತೀರಿಯಾ ಕಾಯಿಲೆಯಿಂದ ರಕ್ಷಣೆ) ಲಸಿಕೆ ಹಾಕುವ ಗುರಿ ಹೊಂದಲಾಗಿದೆ’ ಎಂದು ಮಾಹಿತಿ ನೀಡಿದರು.

36,468 ಮಕ್ಕಳಿಗೆ ಲಸಿಕೆ: ‘ಜಿಲ್ಲೆಯಲ್ಲಿ ಲಸಿಕೆ ಲಭ್ಯತೆ ಮೇರೆಗೆ ಈಗಾಗಲೇ 1ನೇ ತರಗತಿಯ 8,763, 5ನೇ ತರಗತಿಯ 9,006 ಮತ್ತು ಎಸ್ಸೆಸ್ಸೆಲ್ಸಿಯ 7,047 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ವಿಶೇಷ ಲಸಿಕೆ ಅಭಿಯಾನದಡಿ 1ನೇ ತರಗತಿಯ 10,774, 5ನೇ ತರಗತಿಯ 12,902 ಹಾಗೂ ಎಸ್ಸೆಸ್ಸೆಲ್ಸಿಯ 12,902 ಮಕ್ಕಳು ಸೇರಿ 38,468 ಮಂದಿಗೆ ಲಸಿಕೆ ಹಾಕಲಾಗುವುದು. ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಲಾಗುವುದು’ ಎಂದು ಹೇಳಿದರು.

‘ಈ ಹಿಂದೆ ಮಕ್ಕಳಿಗೆ ಲಸಿಕೆ ಹಾಕಲು ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು ನಿರಾಕರಿಸಿದ್ದರು. ಇಲಾಖೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಖಾಸಗಿ ಶಾಲೆಯವರು ಸ್ಪಂದಿಸುತ್ತಿಲ್ಲ. ಕೋಲಾರದ ವಿದ್ಯಾ ಜ್ಯೋತಿ ಹಾಗೂ ಕೆಜಿಎಫ್‌ನ ಜೈನ್ ಸಂಸ್ಥೆಯವರಿಗೆ ಶಿಕ್ಷಣ ಇಲಾಖೆಯಿಂದ ಪತ್ರ ಕಳುಹಿಸಿದ ನಂತರ ಮಕ್ಕಳಿಗೆ ಲಸಿಕೆ ಹಾಕಿಸಿದರು’ ಎಂದರು.

‘976 ಮಂದಿ ಆಶಾ ಕಾರ್ಯಕರ್ತೆಯರು, 221 ಮಂದಿ ಆರೋಗ್ಯ ಸಿಬ್ಬಂದಿ ಹಾಗೂ ಮೇಲ್ವಿಚಾರಕರು, 90 ವೈದ್ಯಾಧಿಕಾರಿಗಳು ಹಾಗೂ 9 ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳನ್ನು ಅಭಿಯಾನಕ್ಕೆ ನಿಯೋಜಿಸಲಾಗಿದೆ’ ಎಂದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ ಹಾಜರಿದ್ದರು.

***
* 19,537 ಮಕ್ಕಳಿಗೆ ಡಿಟಿಪಿ ಲಸಿಕೆ
* 41,747 ಮಂದಿಗೆ ಟಿಡಿ ಲಸಿಕೆ
* 1,296 ಸಿಬ್ಬಂದಿ ನಿಯೋಜನೆ
* 36,468 ಮಕ್ಕಳಿಗೆ ಲಸಿಕೆ ಗುರಿ

ಪ್ರತಿಕ್ರಿಯಿಸಿ (+)