ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಜಿಲ್ಲೆಯಲ್ಲಿ ವರುಣ ದೇವನ ಅಬ್ಬರ

ಬಿತ್ತನೆಗೆ ಸಹಕಾರಿ: ತೋಟಗಾರಿಕೆ ಬೆಳೆಗಳ ಹಾನಿ
Last Updated 19 ಜುಲೈ 2020, 16:32 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಾದ್ಯಂತ ಭಾನುವಾರ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಮುಂಗಾರು ಹಂಗಾಮಿನ ಬಿತ್ತನೆಗಾಗಿ ಮಳೆ ನಿರೀಕ್ಷೆಯಲ್ಲಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದೆ.

ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು, ಮಾಲೂರು, ಕೆಜಿಎಫ್‌ ಹಾಗೂ ಬಂಗಾರಪೇಟೆ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಜಮೀನುಗಳು ಹದವಾಗಿವೆ.

ಮತ್ತೊಂದೆಡೆ ವರುಣ ದೇವ ರೈತರಿಗೆ ಕಣ್ಣೀರು ತರಿಸಿದ್ದು, ಟೊಮೆಟೊ, ಕೋಸು, ಬೀನ್ಸ್‌, ದಪ್ಪ ಮೆಣಸಿನಕಾಯಿ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾದ ಮಳೆ ಸುಮಾರು ಒಂದೂವರೆ ತಾಸು ಎಡೆಬಿಡದೆ ಸುರಿದಿದ್ದು, ರೈತರ ಜಮೀನುಗಳಲ್ಲಿ ಮಳೆ ನೀರು ಕೆರೆಯಂತೆ ನಿಂತಿದೆ.

ಆಕಾಶಕ್ಕೆ ತೂತು ಬಿದ್ದಂತೆ ಸುರಿದ ಮಹಾ ಮಳೆಗೆ ಜಿಲ್ಲಾ ಕೇಂದ್ರದಲ್ಲಿ ಜನಜೀವನ ಅಸ್ತವ್ಯಸ್ತವಾಯಿತು. ಮಳೆಯಿಂದಾಗಿ ಚರಂಡಿ ಹಾಗೂ ಮ್ಯಾನ್‌ಹೋಲ್‌ಗಳು ಕ್ಷಣ ಮಾತ್ರದಲ್ಲಿ ಭರ್ತಿಯಾಗಿ ಕೊಳಚೆ ನೀರು ರಸ್ತೆಗಳ ಮೇಲೆ ಹರಿಯಿತು.

ಚರಂಡಿ, ರಾಜಕಾಲುವೆ, ಉದ್ಯಾನ, ಮೈದಾನಗಳು ಸಂಪೂರ್ಣ ಜಲಾವೃತವಾಗಿದ್ದು, ಮಳೆಯ ತೀವ್ರತೆಗೆ ಹಳೆಯ ಕಟ್ಟಡಗಳು ಶಿಥಿಲಗೊಂಡಿವೆ. ತಗ್ಗು ಪ್ರದೇಶದ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ಮಳೆ ಹಾಗೂ ರಾಜಕಾಲುವೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸಿದೆ.

ನೀರಿನಿಂದ ಪೀಠೋಪಕರಣಗಳು, ವಿದ್ಯುತ್‌ ಉಪಕರಣಗಳಿಗೆ ಹಾನಿಯಾಗಿದೆ. ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌, ನೀರೆತ್ತುವ ಮೋಟರ್‌ನಂತಹ ವಿದ್ಯುತ್‌ ಉಪಕರಣಗಳು ಸುಟ್ಟು ಹೋಗಿವೆ. ಮನೆಯಲ್ಲಿದ್ದ ಬಟ್ಟೆ, ಹಾಸಿಗೆ, ಅಕ್ಕಿ, ರಾಗಿ, ಬೇಳೆ ಕಾಳು ಮೂಟೆಗಳು ನೀರಿನಲ್ಲಿ ಮುಳುಗಿವೆ. ನಿವಾಸಿಗಳು ಮಳೆ ನೀರನ್ನು ಮನೆಯಿಂದ ಹೊರ ಹಾಕುವುದರಲ್ಲೇ ರಾತ್ರಿ ಕಳೆದರು.

ಸಮಸ್ಯೆಗೆ ಸ್ಪಂದಿಸಲಿಲ್ಲ: ಚರಂಡಿ, ರಾಜಕಾಲುವೆಗಳಲ್ಲಿ ಕಸ ಕಟ್ಟಿಕೊಂಡಿದ್ದರಿಂದ ನೀರಿನ ಹರಿವಿಗೆ ಅಡ್ಡಿಯಾಗಿ ಅಕ್ಕಪಕ್ಕದ ಮನೆಗಳಿಗೆ ನುಗ್ಗಿದೆ. ಈ ಸಂಬಂಧ ಸ್ಥಳೀಯರು ನಗರಸಭೆ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ನೀಡಿದರೂ ಸಿಬ್ಬಂದಿ ಸಮಸ್ಯೆಗೆ ಸ್ಪಂದಿಸಲಿಲ್ಲ. ನಗರಸಭೆ ಸಿಬ್ಬಂದಿಯನ್ನು ಕಾದು ಹೈರಾಣಾದ ಸ್ಥಳೀಯರು ಸ್ವತಃ ಚರಂಡಿಗೆ ಇಳಿದು ಸ್ವಚ್ಛಗೊಳಿಸಿದರು. ಮ್ಯಾನ್‌ಹೋಲ್‌ಗಳಲ್ಲಿ ಕಟ್ಟಿಕೊಂಡಿದ್ದ ಕಸ ಹೊರತೆಗೆದರು.

ಸಂಪರ್ಕ ಕಡಿತ: ಮಳೆಯಿಂದಾಗಿ ಹಲವು ಬಡಾವಣೆಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿತು. ಮಳೆಗೆ ಜಿಲ್ಲಾ ಕೇಂದ್ರದ ರಸ್ತೆಗಳ ಚಿತ್ರಣವೇ ಬದಲಾಯಿತು. ರಸ್ತೆ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ರಸ್ತೆಗಳು ರಾಡಿಯಾದವು. ರೈಲ್ವೆ ಕೆಳ ಸೇತುವೆಗಳು ಹಾಗೂ ತಗ್ಗು ಪ್ರದೇಶದ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ನಿಂತಿದ್ದು, ಅಕ್ಕಪಕ್ಕದ ಬಡಾವಣೆಗಳಿಗೆ ಸಂಪರ್ಕ ಕಡಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT