ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆ ಸಿಗಬೇಕು

ಸಭೆಯಲ್ಲಿ ಅಧಿಕಾರಿಗಳಿಗೆ ಸಂಸದ ಮುನಿಸ್ವಾಮಿ ಸೂಚನೆ
Last Updated 21 ಏಪ್ರಿಲ್ 2021, 16:45 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಕೋವಿಡ್‌ 2ನೇ ಅಲೆ ಜೋರಾಗಿದ್ದು, ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆ ಸಿಗಬೇಕು’ ಎಂದು ಸಂಸದ ಎಸ್‌.ಮುನಿಸ್ವಾಮಿ ಸೂಚಿಸಿದರು.

ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಲ್ಲಿ ಬುಧವಾರ ನಡೆದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ ಸುರಕ್ಷತಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು’ ಎಂದು ತಿಳಿಸಿದರು.

‘ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಸಭೆ, -ಸಮಾರಂಭ, ಮದುವೆ ಮೊದಲಾದ ಆಚರಣೆಗಳಿಗೆ ಕೆಲ ಷರತ್ತು ವಿಧಿಸಿದೆ. ಈ ಷರತ್ತುಗಳು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಸೋಂಕಿತರಿಗೆ ಧೈರ್ಯ ತುಂಬಿ. ಸಾರ್ವಜನಿಕರಿಗೆ ಕೋವಿಡ್‌ 2ನೇ ಅಲೆ ಬಗ್ಗೆ ಜಾಗೃತಿ ಮೂಡಿಸಿ’ ಎಂದು ಹೇಳಿದರು.

‘ಹೋಬಳಿ ಕೇಂದ್ರಗಳಲ್ಲಿ ಸೋಂಕಿತರಿಗೆ ಶೀಘ್ರವೇ ಆಂಬುಲೆನ್ಸ್ ಸೇವೆ ಸಿಗಬೇಕು. ಆಂಬುಲೆನ್ಸ್‌ಗಳಲ್ಲಿ ಜಿಪಿಎಸ್ ವ್ಯವಸ್ಥೆ ಇರಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗೆ ತೊಂದರೆಯಾಗಬಾರದು. ದೇಹ ಸ್ಥಿತಿ ಗಂಭೀರವಾಗಿರುವ ಸೋಂಕಿತರಿಗೆ ಆಕ್ಸಿಜನ್‌ ಕೊರತೆ ಆಗಬಾರದು. ಸೋಂಕಿತರ ಜತೆಗೆ ವೈದ್ಯರು ಸೌಜನ್ಯದಿಂದ ವರ್ತಿಸಬೇಕು. ಜನರೇ ಸ್ವಪ್ರೇರಣೆಯಿಂದ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳವಂತೆ ಪ್ರೇರೇಪಿಸಬೇಕು’ ಎಂದರು.

‘ಜಿಲ್ಲೆಯಲ್ಲಿ ಬಡವರು, ನಿರ್ಗತಿಕರು ಸೇರಿದಂತೆ ಎಲ್ಲರಿಗೂ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗುವಂತಾಗಬೇಕು. ರೆಮ್‌ಡಿಸಿವರ್‌ ಔಷಧ ಅತ್ಯಗತ್ಯವಾಗಿ ಬೇಕಾಗಿರುವ ಕೊರೊನಾ ಸೋಂಕಿತರಿಗೆ ಸಕಾಲಕ್ಕೆ ಸಿಗಬೇಕು’ ಎಂದು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಹೇಳಿದರು.

ಥರ್ಮಲ್ ಸ್ಕ್ರೀನಿಂಗ್‌: ‘ಜಿಲ್ಲೆಯಲ್ಲಿ ಸರ್ಕಾರದ ಆದೇಶದಂತೆ ಬುಧವಾರದಿಂದಲೇ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತೇವೆ. ಅಂತರರಾಜ್ಯ ಗಡಿ ಭಾಗದಲ್ಲಿ ಥರ್ಮಲ್ ಸ್ಕ್ರೀನಿಂಗ್‌ ಮಾಡುತ್ತೇವೆ. ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ಬೆಡ್‌ ಮತ್ತು ಆಕ್ಸಿಜನ್‌ ಲಭ್ಯತೆ, ತೀವ್ರ ನಿಗಾ ಘಟಕಗಳಲ್ಲಿ ಬೆಡ್‌ಗಳ ಸ್ಥಿತಿಗತಿ ಬಗ್ಗೆ ಪರಿಶೀಲನೆ ಮಾಡುತ್ತೇವೆ’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಮಾಹಿತಿ ನೀಡಿದರು.

‘ಕೋವಿಡ್‌ ಪರೀಕ್ಷೆ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ. ಜಿಲ್ಲೆಯಲ್ಲಿ ಈವರೆಗೆ 1.70 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. ಕೇಂದ್ರ ಸರ್ಕಾರದ ಆದೇಶದಂತೆ ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ಹಾಕಲಾಗುವುದು. ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಆ್ಯಕ್ಸಿಜನ್ ಕೊರತೆಯಾಗದಂತೆ ಎಚ್ಚರ ವಹಿಸುತ್ತೇವೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ ದಿನದ 24 ತಾಸೂ ಆಂಬುಲೆನ್ಸ್‌ ಸೇವೆ ಲಭ್ಯವಿರಬೇಕು. ಆಂಬುಲೆನ್ಸ್‌ಗಳ ಕೊರತೆ ಎದುರಾದರೆ ಖಾಸಗಿಯವರಿಗೆ ಹೆಚ್ಚಿನ ಆಂಬುಲೆನ್ಸ್ ಸೇವೆ ಪಡೆಯಲಾಗುತ್ತದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ 2,200 ಬೆಡ್‌ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಬೆಡ್‌ ಮೀಸಲಿಡಲಾಗಿದೆ. ಪ್ರತಿ ತಾಲ್ಲೂಕು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ 5 ಬೆಡ್ ವ್ಯವಸ್ಥೆಯಿದೆ’ ಎಂದರು.

ಪಾರ್ಸಲ್‌್ ಸೇವೆ: ‘ಸರ್ಕಾರದ ಮಾರ್ಗಸೂಚಿಯಂತೆ ಈಜುಕೊಳ, ಚಿತ್ರಮಂದಿರ, ಆಟದ ಮೈದಾನ ಬಂದ್ ಮಾಡಿಸುತ್ತೇವೆ. ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಪಾರ್ಸಲ್ ಸೇವೆಗೆ ಮಾತ್ರ ಅವಕಾಶವಿದೆ. ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಗುರುತಿನ ಚೀಟಿ ಕಡ್ಡಾಯ. ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ, ಪ್ರಾರ್ಥನಾ ಮಂದಿರಗಳಲ್ಲಿ ಭಕ್ತರಿಗೆ ಪ್ರವೇಶವಿಲ್ಲ. ಆದರೆ, ಪೂಜಾ ಕಾರ್ಯ ನಡೆಸಲು ಅರ್ಚಕರಿಗೆ ಅವಕಾಶವಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಹೇಳಿದರು.

ಮುಳಬಾಗಿಲು ಶಾಸಕ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಎಚ್.ನಾಗೇಶ್, ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಎಂ.ರೂಪಕಲಾ, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಎನ್.ಎಂ.ನಾಗರಾಜ್, ಕೆಜಿಎಫ್‌ ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ, ಉಪ ವಿಭಾಗಾಧಿಕಾರಿ ಸೋಮಶೇಖರ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT