ಅಂಗಡಿ ತೆರವಿಗೆ ನಗರಸಭೆ ಸಿದ್ಧತೆ

ಕೆಜಿಎಫ್: ಎಂ.ಜಿ. ಮಾರುಕಟ್ಟೆ ಸೇರಿದಂತೆ ನಗರಸಭೆಗೆ ಸೇರಿದ 1,779 ಅಂಗಡಿಗಳ ಮಾಲೀಕರಿಗೆ ಅಂಗಡಿ ಖಾಲಿ ಮಾಡಿ ನಗರ ಸ್ಥಳೀಯ ಆಡಳಿತಕ್ಕೆ ಒಪ್ಪಿಸುವಂತೆ ನೋಟಿಸ್ ನೀಡಲು ನಗರಸಭೆ ನಿರ್ಧರಿಸಿದೆ.
ಅಂಗಡಿಯ ಬಾಡಿಗೆ ಅವಧಿ ಈಗಾಗಲೇ ಮುಗಿದಿರುವುದರಿಂದ ನೋಟಿಸ್ ತಲುಪಿದ ಹತ್ತು ದಿನಗಳೊಳಗೆ ಅಂಗಡಿ ಖಾಲಿ ಮಾಡಿ ನಗರಸಭೆಗೆ ಒಪ್ಪಿಸಬೇಕು. ಬಾಕಿ ಇರುವ ಬಾಡಿಗೆ ಪಾವತಿ ಮಾಡಬೇಕು. 2016ರಲ್ಲಿ ಹೈಕೋರ್ಟ್ ನೀಡಿರುವ ಅಂತಿಮ ಆದೇಶದಂತೆ ಅಂಗಡಿ ತೆರವು ಮಾಡಿ ನಗರಸಭೆ ಸ್ವಾಧೀನಕ್ಕೆ ನೀಡಬೇಕು ಎಂದು ತಿಳಿಸಲಾಗಿದೆ.
ನಗರಸಭೆ ಈಗ ಅಂಗಡಿಗಳನ್ನು ಹರಾಜು ಹಾಕಲು ನಿರ್ಧರಿಸಿದೆ. ಜಿಲ್ಲಾಧಿಕಾರಿ ಅನುಮೋದನೆ ನೀಡಿದ್ದಾರೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಅಂಗಡಿಗಳನ್ನು ಖಾಲಿ ಮಾಡದೆ ಇದ್ದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಮಧ್ಯೆ ನಗರಸಭೆ ಉದ್ದೇಶಿಸಿರುವ ಇ–ಹರಾಜು ಪ್ರಕ್ರಿಯೆಗೆ ತಡೆಯೊಡ್ಡಲು ವರ್ತಕರು ನ್ಯಾಯಾಲಯಕ್ಕೆ ಮೊರೆ ಹೋಗಬಹುದು ಎಂದು ಶಂಕಿಸಿರುವ ಅಧಿಕಾರಿಗಳು ಗುರುವಾರ ನಗರದ ಸಿವಿಲ್ ಹಿರಿಯ ಶ್ರೇಣಿ ಮತ್ತು ಸಿವಿಲ್ ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಕೇವಿಯಟ್ ಹಾಕಿದ್ದಾರೆ. ನಗರಸಭೆ ಪರವಾಗಿ ವಕೀಲ ವೆಂಕಟರಾಮಯ್ಯ ಕೇವಿಯಟ್ ಸಲ್ಲಿಸಿದ್ದಾರೆ.
ಎಂ.ಜಿ. ಮಾರುಕಟ್ಟೆ ನಿರ್ವಹಣೆಗೆ ನಗರಸಭೆಗೆ ಮಾಸಿಕ ₹ 10 ಲಕ್ಷ ಖರ್ಚು ಬರುತ್ತಿದೆ. ಆದರೆ ಆದಾಯ ಅತಿ ಕಡಿಮೆ ಇದೆ. ಅಂಗಡಿ ಮಾಲೀಕರು ₹ 25ರಿಂದ ₹ 250 ರೀತಿಯಲ್ಲಿ ಬಾಡಿಗೆ ಕಟ್ಟುತ್ತಿದ್ದಾರೆ. ಆದ್ದರಿಂದ ನಗರಸಭೆಗೆ ಆದಾಯ ಹೆಚ್ಚಿಸಲು ಸರ್ಕಾರ ನಿರ್ಧಾರ ಮಾಡಿದೆ. ಸಾಮಾಜಿಕ ನ್ಯಾಯದ ಆಧಾರದ ಮೇರೆಗೆ ಹರಾಜು ಮಾಡಲು 2016ರಲ್ಲಿಯೇ ನಿರ್ಧಾರ ಮಾಡಲಾಗಿದೆ. 12 ವರ್ಷಗಳ ಅವಧಿಗೆ ನೀಡಲಾಗುವುದು.
ಬ್ಲಾಕ್ 1ರಲ್ಲಿ ಬರುವ ಕುವೆಂಪು ಬಸ್ನಿಲ್ದಾಣದಲ್ಲಿ 245, ಬ್ಲಾಕ್ ಎರಡರಲ್ಲಿ 770, ಬ್ಲಾಕ್ 3ರಲ್ಲಿ 364, ಬ್ಲಾಕ್ 4ರಲ್ಲಿ 139, ಬ್ಲಾಕ್ 5ರಲ್ಲಿ 20, ಬ್ಲಾಕ್ 6ರಲ್ಲಿ 18 ಮತ್ತು ಆಂಡರ್ಸನ್ ಪೇಟೆ ಬ್ಲಾಕ್ 7ರಲ್ಲಿ 177 ಮತ್ತು ಬ್ಲಾಕ್ 8ರಲ್ಲಿ 7 ಅಂಗಡಿಗಳನ್ನು ಹರಾಜು ಮಾಡಲಾಗುತ್ತದೆ.
2016ರಲ್ಲಿ ವರ್ತಕರು ಹರಾಜಿಗೆ ತಡೆಯೊಡ್ಡಲು ಸಲ್ಲಿಸಿದ್ದ ಅರ್ಜಿಯನ್ನು ಹಿರಿಯ ಶ್ರೇಣಿ ನ್ಯಾಯಾಲಯ ತಿರಸ್ಕರಿಸಿದೆ. ನಂತರ ಹೈಕೋರ್ಟ್ನಲ್ಲಿ ಹರಾಜು ಪ್ರಕ್ರಿಯೆಗೆ ಸಹಕರಿಸುವುದಾಗಿ ವರ್ತಕರು ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ಕೇವಿಯಟ್ ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಮಧ್ಯೆ ಇ– ಹರಾಜು ಮಾಡುವುದನ್ನು ವಿರೋಧಿಸಿ ಮಾರುಕಟ್ಟೆ ವರ್ತಕರು 3ನೇ ದಿನವೂ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದರು. ವರ್ತಕರು ಗುರುವಾರವೂ ಪ್ರತಿಭಟನೆ ಮುಂದುವರಿಸಲಿದ್ದಾರೆ ಎಂದು ವರ್ತಕರ ಸಂಘದ ಅಧ್ಯಕ್ಷ ದೇವೇಂದ್ರನ್ ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.