ಸೋಮವಾರ, ಸೆಪ್ಟೆಂಬರ್ 28, 2020
28 °C
ಜನಜಾಗೃತಿ ಗುಲಾಬಿ ಆಂದೋಲನದಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಕಿವಿಮಾತು

ತಂಬಾಕು ವ್ಯಸನಿಗಳ ಮನಪರಿವರ್ತಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿದರೆ ಸಾರ್ವಜನಿಕರು ಎಚ್ಚೆತ್ತುಕೊಳ್ಳುತ್ತಾರೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತವು ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಂಬಾಕು ಉತ್ಪನ್ನಗಳ ಸೇವನೆಯ ದುಷ್ಪರಿಣಾಮ ಕುರಿತ ಜನಜಾಗೃತಿ ಗುಲಾಬಿ ಆಂದೋಲನ ಉದ್ಘಾಟಿಸಿ ಮಾತನಾಡಿ, ‘ತಂಬಾಕು ಉತ್ಪನ್ನ ಸೇವನೆ ವ್ಯಸನಿಗಳ ಮನಪರಿವರ್ತನೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಜಿಲ್ಲೆಯ ಜನಸಂಖ್ಯೆಯಲ್ಲಿ ಶೇ 39ರಷ್ಟು ಜನ ತಂಬಾಕು ಉತ್ಪನ್ನ ಸೇವನೆಯಲ್ಲಿ ತೊಡಗಿದ್ದಾರೆ. ಇವರಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡಬೇಕು. ದುಶ್ಚಟಗಳಿಂದ ತಪ್ಪಿಸಿ ಉತ್ತಮ ಸಮಾಜ ನಿರ್ಮಾಣದಲ್ಲಿ ಪಾತ್ರ ವಹಿಸುವಂತೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಶಾಲಾ ಕಾಲೇಜುಗಳಿಂದ 200 ಮೀಟರ್ ದೂರದಲ್ಲಿ ಈ ಉತ್ಪನ್ನಗಳನ್ನು ಮಾರಬಾರದು. ಮಕ್ಕಳಿಂದ ತಂಬಾಕು ಉತ್ಪನ್ನ ಮಾರಾಟ ಮಾಡಿಸುವುದು ಶಿಕ್ಷಾರ್ಹ ಅಪರಾಧ. ಈ ಬಗ್ಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮ ತಡೆಯಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಹಾಗೂ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆಯನ್ನು (ಕೋಟ್ಪಾ) 2016ರಿಂದ ಕಡ್ಡಾಯವಾಗಿ ಜಾರಿ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿರುವ ವ್ಯಸನ ಮುಕ್ತ ಕೇಂದ್ರದ ಮೂಲಕ ತಂಬಾಕು ಉತ್ಪನ್ನ ವ್ಯಸನಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು’ ಎಂದು ಮನವಿ ಮಾಡಿದರು.

‘ತಂಬಾಕು ಉತ್ಪನ್ನ ಸೇವನೆ ವ್ಯಸನಿಗಳಲ್ಲಿ ಬದಲಾವಣೆ ತರಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದು, 2016ರಿಂದ ಈವರೆಗೆ ವ್ಯಸನ ಮುಕ್ತ ಕೇಂದ್ರದಲ್ಲಿ 4,518 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಸುಮಾರು 530 ಮಂದಿಯನ್ನು ವ್ಯಸನದಿಂದ ಮುಕ್ತಗೊಳಿಸಲಾಗಿದೆ. ಈ ಪ್ರಯತ್ನಕ್ಕೆ ಸಾರ್ವಜನಿಕರು ಕೈಜೋಡಿಸಬೇಕು’ ಎಂದು ಕೋರಿದರು.

ಶೇ 5ರಷ್ಟು ಆದಾಯ: ‘ತಂಬಾಕು ಉತ್ಪನ್ನಗಳ ಬಳಕೆ ಯೂರೋಪ್ ದೇಶದಿಂದ ಆರಂಭವಾಗಿ, 2ನೇ ಶತಮಾನದಿಂದ ಭಾರತ ದೇಶದಲ್ಲೂ ಬಳಕೆ ಆರಂಭವಾಯಿತು. ಈ ಉತ್ಪನ್ನಗಳು ಕೇಂದ್ರ ಸರ್ಕಾರಕ್ಕೆ ವಾರ್ಷಿಕ ಶೇ 5ರಷ್ಟು ಆದಾಯ ತಂದು ಕೊಡುತ್ತಿವೆ’ ಎಂದು ಶ್ರೀ ನರಸಿಂಹರಾಜ (ಎಸ್‌ಎನ್‌ಆರ್) ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಎಸ್.ಜಿ.ನಾರಾಯಣಸ್ವಾಮಿ ವಿವರಿಸಿದರು.

‘ತಂಬಾಕು ಉತ್ಪನ್ನಗಳ ಸೇವನೆಯಿಂದ 60 ರೀತಿಯ ಮಾರಕ ಕಾಯಿಲೆಗಳು ಮತ್ತು ಭಯಾನಕ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಂಭವವಿದೆ. ತಂಬಾಕು ಉತ್ಪನ್ನ ಸೇವನೆ ವ್ಯಸನದಿಂದ ದೇಶದಲ್ಲಿ ಈವರೆಗೆ 60 ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲೂ 6 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಭವಿಷ್ಯದಲ್ಲಿ ತಂಬಾಕು ರಹಿತ ರಾಜ್ಯ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು’ ಎಂದು ಕೋರಿದರು.

ಆತಂಕಕಾರಿ ಬೆಳವಣಿಗೆ: ‘ತಂಬಾಕು ಬೆಳೆಯುವ ಮತ್ತು ತಂಬಾಕು ಉತ್ಪನ್ನ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ. 18 ವರ್ಷದಿಂದ 25 ವರ್ಷದೊಳಗಿನ ಯುವಕ ಯುವತಿಯರು ತಂಬಾಕು ಉತ್ಪನ್ನಗಳಿಗೆ ಆಕರ್ಷಿತರಾಗಿ ತಪ್ಪು ದಾರಿ ಹಿಡಿಯುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ ಕಳವಳ ವ್ಯಕ್ತಪಡಿಸಿದರು.

‘ಆರೋಗ್ಯದ ದೃಷ್ಟಿಯಿಂದ ಸ್ನೇಹಪೂರ್ವಕವಾಗಿ ತಂಬಾಕು ಸೇವನೆ ವ್ಯಸನ ತ್ಯಜಿಸುವಂತೆ ಅರಿವು ಮೂಡಿಸಬೇಕು. ತಂಬಾಕು ಉತ್ಪನ್ನಗಳ ಸೇವನೆಯಲ್ಲಿ ಹೊಸಬರು ಸೇರ್ಪಡೆಯಾಗದಂತೆ ಅರಿವು ಮೂಡಿಸಬೇಕು. ಈ ವರ್ಷ ಜಿಲ್ಲೆಯ 100 ಶಾಲೆಗಳನ್ನು ತಂಬಾಕು ಮುಕ್ತ ಶಾಲೆಗಳಾಗಿ ಮಾಡುವ ಗುರಿಯಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ಕುಮಾರ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಭಾರತಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.