ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿ ಸಾಕಾಣಿಕೆ ಕೃಷಿಯಾಗಿ ಪರಿಗಣಿಸಿ

ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಯ್ಯಾರೆಡ್ಡಿ ಒತ್ತಾಯ
Last Updated 28 ಮೇ 2022, 14:24 IST
ಅಕ್ಷರ ಗಾತ್ರ

ಕೋಲಾರ: ‘ಕೋಳಿ ಸಾಕಾಣಿಕೆಯನ್ನು ಕೃಷಿಯೆಂದು ಪರಿಗಣಿಸಿ ಕುಕ್ಕುಟ ಉದ್ಯಮದ ಸಮರ್ಪಕ ನಿರ್ವಹಣೆಗೆ ಹೊಸ ಕಾನೂನು ರೂಪಿಸಬೇಕು. ಜತೆಗೆ ಸಹಕಾರಿ ಕ್ಷೇತ್ರವಾಗಿ ಮಾಡಬೇಕು’ ಎಂದು ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಒತ್ತಾಯಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೋಳಿ ಸಾಕಾಣಿಕೆಯನ್ನು ಕೃಷಿಯೆಂದು ಪರಿಗಣಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಹಲವು ಬಾರಿ ದುಂಡು ಮೇಜಿನ ಸಭೆ. ಹೋರಾಟ ನಡೆಸಿದ್ದೇವೆ. ಕೋಳಿ ಸಾಕಾಣಿಕೆದಾರರ ಬೇಡಿಕೆಗಳ ಸಂಬಂಧ ಪಶು ಸಂಗೋಪನಾ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದರು.

‘ಪಶು ಸಂಗೋಪನಾ ಇಲಾಖೆಯು ಬೇಡಿಕೆಗಳ ಸಂಬಂಧ ತೀರ್ಮಾನ ತೆಗೆದುಕೊಳ್ಳುವ ಸಂದರ್ಭದಲ್ಲಿ ರೈತರ ಹಾಗೂ ಸಂಘಟನೆಗಳ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟಿಲ್ಲ. ಸಂಘಟನೆಗಳು ನೀಡಿರುವ ಸೂಚನೆ ಮತ್ತು ತಿದ್ದುಪಡಿಗಳನ್ನು ಒಳಗೊಂಡಂತೆ ಅಂತಿಮ ತೀರ್ಮಾನ ಮಾಡಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಕುಕ್ಕುಟ ಉದ್ಯಮ ನಡೆಸುತ್ತಿದ್ದು, ಸುಮಾರು 1 ಲಕ್ಷ ಮಂದಿಗೆ ಉದ್ಯೋಗ ನೀಡಲಾಗಿದೆ. ಜಿಡಿಪಿಗೆ ವರ್ಷಕ್ಕೆ ₹ 2 ಲಕ್ಷ ಕೋಟಿ ನೀಡುತ್ತಾ ಬಂದಿದ್ದೇವೆ. ಕಂಪನಿಗಳ ಪರವಾದ ನಿಯಮಗಳನ್ನು ಕೈಬಿಟ್ಟು ಕೋಳಿ ಸಾಕಾಣಿಕೆದಾರರನ್ನು ಉಳಿಸಿ ಪ್ರೋತ್ಸಾಹಿಸಿ ಸೌಲಭ್ಯ ಒದಗಿಸಬೇಕು’ ಎಂದು ಮನವಿ ಮಾಡಿದರು.

ಸಭೆ ನಡೆಯಲಿದೆ: ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಹಿಡಿದು ಬಸವರಾಜ ಬೊಮ್ಮಾಯಿ ಸರ್ಕಾರದವರೆಗೂ ಹಲವು ಬಾರಿ ಮನವಿ ಮಾಡಿದರೂ ಕಾನೂನು ರೂಪಿಸಿಲ್ಲ. ಬೇಡಿಕೆಗಳ ಸಂಬಂಧ ಪಶು ಸಂಗೋಪನಾ ಇಲಾಖೆ, ಕೋಳಿ ಸಾಕಾಣಿಕೆದಾರರು ಮತ್ತು ಕಂಪನಿಗಳ ನೇತೃತ್ವದಲ್ಲಿ ಜೂನ್ 8ರಂದು ಸಭೆ ನಡೆಯಲಿದೆ. ಮರಿ ಸರಬರಾಜು, ಕನಿಷ್ಠ ಸಾಕಾಣಿಕೆ ದರ, ಪಾವತಿ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು’ ಎಂದು ಹೇಳಿದರು.

‘ರಾಜ್ಯ ಸರ್ಕಾರ ನಿಗದಿಪಡಿಸಿರುವ ತಾತ್ಕಾಲಿಕ ಕನಿಷ್ಠ ಸಾಕಾಣಿಕೆ ದರವನ್ನು ಷರತ್ತು ರಹಿತವಾಗಿ ಎಲ್ಲಾ ಕಂಪನಿಗಳು ಜಾರಿ ಮಾಡಬೇಕು. ಕಂಪನಿಗಳು ಮತ್ತು ರೈತರು ನಡುವೆ ಆಗಿರುವ ಒಪ್ಪಂದಗಳಿಗೆ ವಿರುದ್ಧವಾಗಿ ವಿನಾಕಾರಣ ನಿಗದಿತ ಸಮಯಕ್ಕೆ ಮರಿ ನೀಡದಿರುವ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಕೋಳಿ ಸಾಕಾಣಿಕೆದಾರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜೆ.ಸಿ.ಮಂಜುನಾಥ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ರೆಡ್ಡಿ, ಸದಸ್ಯರಾದ ಮಂಜುನಾಥ್‌, ಕೃಷ್ಣಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT