ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಹೊಣೆಗಾರಿಕೆ ತಪ್ಪಿಸಿಕೊಳ್ಳಲು ಯತ್ನ

ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಪ್ರಕಾಶ್ ಕೇಂದ್ರ ಸರ್ಕಾರದ ವಿರುದ್ಧ ವಗ್ದಾಳಿ
Last Updated 8 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಕೋಲಾರ: ‘ಕಾರ್ಮಿಕ ವಿರೋಧಿ ನೀತಿಗಳನ್ನು ಹಂತಹಂತವಾಗಿ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದ್ದು, ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳಲು ಹೊರಟಿದೆ’ ಎಂದು ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಪ್ರಕಾಶ್ ಆರೋಪಿಸಿದರು.

ನಗರ ಹೊರವಲಯದ ತೇರಹಳ್ಳಿ ಆದಿಮ ಸಾಮಸ್ಕೃತಿಕ ಕೇಂದ್ರದಲ್ಲಿ ಭಾನುವಾರ ನಡೆದ ಸಿಐಟಿಯು ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯ ಅಧ್ಯಯ ಶಿಬಿರ ಉದ್ಘಾಟಿಸಿ ಮಾತನಾಡಿ, ‘ಕಾರ್ಮಿಕರ ಪರವಾದ ಕಾನೂನು ರೂಪುಗೊಳ್ಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಂಡವಾಳಶಾಹಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಸಂಬಳಕ್ಕಾಗಿ ಶ್ರಮ ಮಾರಿಕೊಳ್ಳುವ ಎಲ್ಲರೂ ಕಾರ್ಮಿಕರೇ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು. ಕಾರ್ಮಿಕರ ಹಿತರಕ್ಷಣೆ ಹಾಗೂ ಕಾನೂನುಗಳ ಉಳಿವಿಗಾಗಿ ಸರ್ಕಾರದ ವಿರುದ್ಧ ಬೈಹತ್ ಹೋರಾಟ ರೂಪಿಸಬೇಕು’ ಎಂದು ಸಲಹೆ ನೀಡಿದರು.

‘ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ದೇಶದ 54 ಸಾರಿಗೆ ನಿಗಮಗಳನ್ನು ಕಾರ್ಪೋರೆಟ್ ಬಂಡವಾಳಗಾರರ ಹಿಡಿತಕ್ಕೆ ಕೊಡಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಇದನ್ನು ಖಂಡಿಸಿ ಹೋರಾಟ ಮಾಡಲಾಗಿದ್ದು, ಯಾವುದೇ ಸ್ಪಂದನೆ ಸಿಕ್ಕಿಲ್ಲ. ಜನಪರ ಕಾಯ್ದೆಗಳನ್ನು ರೂಪಿಸುತ್ತಿಲ್ಲ. ದೇಶವನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುವ ಕಾನೂನು ಜಾರಿಯಾಗುತ್ತಿವೆ’ ಎಂದು ಆರೋಪಿಸಿದರು.

‘ಮೋದಿ ನೇತೃತ್ವದ ಸರ್ಕಾರ ಕಾರ್ಮಿಕ ಕಾಯಿದೆಗಳಿಗೆ ತಿದ್ದುಪಡಿ ತಂದು 4 ಕಾರ್ಮಿಕ ಸಂಹಿತೆ ರೂಪಿಸಲು ಹೊರಟಿದೆ. ಅಲ್ಲದೇ, ಗುತ್ತಿಗೆ ಪದ್ಧತಿಗಿಂತಲೂ ಹೀನಾಯವಾಗಿರುವ ನಿಗದಿತ ಅವಧಿಯ ಉದ್ಯೋಗ ಅನುಷ್ಠಾನಗೊಳಿಸಿದೆ. ಇದರಡಿ ಉದ್ಯೋಗಿಗೆ ಭವಿಷ್ಯ ನಿಧಿ, ಇಎಸ್‍ಐ, ಗ್ರಾಚ್ಯೂಟಿ, ಬೋನಸ್ ಸೌಲಭ್ಯ ದೊರೆಯುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಎನ್.ಪ್ರತಾಪ್ ಸಿಂಹ ಮಾತನಾಡಿ, ‘ವಿದ್ಯಾವಂತ ಯುವಕರು ಕೆಲಸಕ್ಕಾಗಿ ಕಂಪನಿಗಳಿಗೆ ಸೇರುತ್ತಾರೆ, ಇದನ್ನು ಗಮನಿಸಿರುವ ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸಿ ಕಾರ್ಮಿಕರನ್ನು ಬೀದಿಪಾಲು ಮಾಡುತ್ತಿದೆ’ ಎಂದು ದೂರಿದರು.

‘ದೇಶದ ಕಾರ್ಮಿಕ ವರ್ಗವು ಸ್ವಾತಂತ್ರ್ಯ ಪೂರ್ವದಿಂದ ಹೋರಾಟ ಮಾಡಿ ಗಳಿಸಿದ್ದ 44 ಕಾರ್ಮಿಕ ಕಾನೂನುಗಳನ್ನು ಮಾಲೀಕರ ಪರವಾಗಿ ತಿದ್ದುಪಡಿ ಮಾಡಲು ಮುಂದಾಗಿದೆ. ಇದರಿಂದ ದೇಶದ ಕಾರ್ಮಿಕರ ಬದುಕನ್ನು ಬೀದಿಗೆ ತಂದಿದ್ದು ಜನತೆಗೆ ಅತ್ಯಂತ ಆತಂಕದ ಸಂಗತಿಯಾಗಿದೆ’ ಎಂದರು.

‘ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ಮತ್ತು ದೇಶದ್ರೋಹಿ ನೀತಿ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳಿಂದ ಜ.8ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯಲಿದ್ದು, ಸಿಐಟಿಯು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.

ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎನ್.ಗೋಪಾಲಗೌಡ, ಬೆಂಗಳೂರು ಉತ್ತರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮುನಿರಾಜು, ಪ್ರಧಾನ ಕಾರ್ಯದರ್ಶಿ ಎಂ.ವಿಜಿಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT