ಆರೋಗ್ಯ ಇತಿಹಾಸ ದಾಖಲಾತಿಗೆ ಆಧಾರ್ ಬಳಕೆ

ಮಂಗಳವಾರ, ಜೂಲೈ 23, 2019
25 °C
ಜು.15ರಿಂದ ಕ್ಷಯ ರೋಗ ಪತ್ತೆ ಅಭಿಯಾನ

ಆರೋಗ್ಯ ಇತಿಹಾಸ ದಾಖಲಾತಿಗೆ ಆಧಾರ್ ಬಳಕೆ

Published:
Updated:
Prajavani

ಕೋಲಾರ: ‘ಪ್ರತಿ ವ್ಯಕ್ತಿಯ ಸಮಗ್ರ ಆರೋಗ್ಯ ಇತಿಹಾಸವನ್ನು ಸಂಗ್ರಹಿಸಿ, ಆಧಾರ್ ಸಂಖ್ಯೆಯ ಸಹಾಯದಿಂದ ದಾಖಲೀಕರಿಸುವ ವ್ಯವಸ್ಥೆಯನ್ನು ಜಾರಿ ಮಾಡಬೇಕಿದೆ’ ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ಸಲಹೆ ನೀಡಿದರು.

ಜು.15ರಿಂದ 27ರವರೆಗೆ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಅಭಿಯಾನದ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆಗೆ ಬುಧವಾರ ಪೂರ್ವಭಾವಿ ಸಭೆ ನಡೆಸಿದರು.

‘ಕ್ಷಯ ರೋಗ, ಪಲ್ಸ್ ಪೋಲಿಯೋ ಸೇರಿದಂತೆ ವಿವಿಧ ಅಭಿಯಾನದಡಿ ಜನರ ಆರೋಗ್ಯದ ಬಗ್ಗೆ ಮಾಹಿತಿಯನ್ನು ಪ್ರತಿ ವರ್ಷ ಸಂಗ್ರಹಿಸಲಾಗುತ್ತಿದೆ. ಆದರೆ, ವ್ಯವಸ್ಥಿತವಾಗಿ ದಾಖಲೀಕರಣ ನಡೆಯುತ್ತಿಲ್ಲ. ಇದರಿಂದಾಗಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಚ್‌ಎಫ್‌ಎಸ್‌) ಸೇರಿದಂತೆ ವಿವಿಧ ಏಜೆನ್ಸಿಗಳು ನೀಡುವ ಮಾಹಿತಿಯನ್ನೇ ಅವಲಂಬಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಅದೇ ನಿಖರ ಮಾಹಿತಿ ಎಂದು ನಂಬಬೇಕಾಗುತ್ತದೆ. ಹಾಗಾಗಿ ನಮ್ಮಲ್ಲಿರುವ ಸೌಲಭ್ಯವನ್ನು ಬಳಸಿಕೊಂಡು ಆರೋಗ್ಯ ಇತಿಹಾಸವನ್ನು ಡಿಜಿಟಲೀಕರಣ ಮಾಡಬೇಕು’ ಎಂದರು.

‘ಜಿಲ್ಲೆಯ ಒಟ್ಟು ಜನಸಂಖ್ಯೆ 16ಲಕ್ಷವಾಗಿದ್ದು, ಇದೀಗ ಕ್ಷಯರೋಗ ಜಾಗೃತಿ ಅಭಿಯಾನದಡಿ ಎರಡು ವಾರದಲ್ಲಿ 3.30ಲಕ್ಷ ಜನರ ಆರೋಗ್ಯ ಮಾಹಿತಿಯನ್ನು ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರ ಸಹಾಯದಿಂದ ಸಂಗ್ರಹಿಸಲಾಗುತ್ತದೆ. ಅನಾರೋಗ್ಯದ ಕಾರಣದಿಂದ ಹಲವಾರು ಮಂದಿ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ. ಅವರ ಆರೋಗ್ಯದ ಮಾಹಿತಿಯನ್ನು ಡಿಜಿಟಲೀಕರಿಸಿ, ಶೇಖರಣೆ ಮಾಡಬೇಕು. ಆ ಮಾಹಿತಿಯನ್ನು ಆಧಾರ್ ಸಂಖ್ಯೆ ಸಹಾಯದಿಂದ ಪ್ರತ್ಯೇಕವಾಗಿ ಇರಿಸಿದಲ್ಲಿ ಮುಂದೆ ಚಿಕಿತ್ಸೆಗೆ ಕೂಡ ಸಹಾಯಕವಾಗಲಿದೆ. ಅಷ್ಟೇ ಅಲ್ಲ, ಜಿಲ್ಲೆಯಲ್ಲಿ ಎಷ್ಟು ಮಂದಿ ಆರೋಗ್ಯವಾಗಿದ್ದಾರೆ ಎನ್ನುವುದನ್ನು ಸುಲಭವಾಗಿ ತಿಳಿಯಬಹುದಾಗಿದೆ. ಇದಕ್ಕೆ ಮೊಬೈಲ್‌ ಆ್ಯಪ್ ಅಭಿವೃದ್ಧಿಪಡಿಸಬೇಕು’ ಎಂದು ಸಭೆಯಲ್ಲಿದ್ದವರಿಗೆ ತಿಳಿಸಿದರು.

ಇದಕ್ಕೆ ಉತ್ತರಿಸಿದ ಆರೋಗ್ಯಾಧಿಕಾರಿಗಳು, ‘ ಕ್ಷಯ ರೋಗ ದೃಢಪಟ್ಟ ರೋಗಿಗಳ ವೈದ್ಯಕೀಯ ಇತಿಹಾಸವನ್ನು ಸಮರ್ಪಕವಾಗಿ ದಾಖಲಿಸಲಾಗುತ್ತದೆ. ಅಷ್ಟೇ ಅಲ್ಲ, ಚಿಕಿತ್ಸೆ ಮುಂದುವರೆಸಿದ್ದಾರೆಯೇ ಎಂದು ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ. ಇದಕ್ಕಾಗಿ ‘ನಿಕ್ಷಯ್’ ಪೋರ್ಟಲ್‌ ಹಾಗೂ ಮೊಬೈಲ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ರೋಗಿಯ ಹೆಸರು ಟೈಪ್‌ ಮಾಡಿದರೆ ಚಿಕಿತ್ಸೆಯ ಪೂರ್ಣ ವಿವರ ದೊರೆಯುತ್ತದೆ’ ಎಂದು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಮಾಹಿತಿ ಸಂಗ್ರಹಕ್ಕೆ ನೀವು ಶ್ರಮ ಹಾಕುತ್ತಿರುವಿರಿ. ಆದರೆ, ಎಲ್ಲಾ ಜನರನ್ನು ತಲುಪಬೇಕಾದರೆ ಇರುವ ಅತ್ಯಾಧುನಿಕ ಸೌಲಭ್ಯವನ್ನು ಬಳಸಿಕೊಳ್ಳಬೇಕು. ಈ ಕಾರ್ಯಕ್ಕೆ ಸ್ವಲ್ಪ ಸಮಯ ಹಿಡಿದರೂ ಅನಂತರ ಸುಲಭವಾಗಿ ನಿರ್ವಹಣೆ ಮಾಡಬಹುದಾಗಿದೆ. ಆದ್ದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ನಿಗದಿತ ಪರೀಕ್ಷೆಗಳ ಪಟ್ಟಿಯನ್ನು ಸೂಚಿಸುವುದು ಉತ್ತಮ’ ಎಂದರು.

ಕ್ಷಯಕ್ಕೆ 156ಮಂದಿ ಸಾವು: ‘ಜಿಲ್ಲೆಯ ಜನತೆಗೆ ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸಿದರೂ ಕೂಡ ಕಳೆದ ವರ್ಷ 156ಮಂದಿ ಸಾವನ್ನಪ್ಪಿದ್ದಾರೆ. ಕ್ಷಯ ರೋಗ ಪತ್ತೆಯಾದ ವ್ಯಕ್ತಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಅಷ್ಟೇ ಅಲ್ಲ, ಗುಣಮುಖವಾದ ಬಳಿಕ ಕೂಡ ರೋಗ ಮರುಕಳಿಸದಂತೆ ನಿಗಾ ಇಡಲಾಗುವುದು. ಅದೇ ರೀತಿ, ಪೌಷ್ಠಿಕ ಆಹಾರ ಸೇವನೆಗೆ ರೋಗಿಗೆ ಪ್ರತಿ ತಿಂಗಳು ₹500 ನೀಡಲಾಗುತ್ತದೆ’ ಎಂದು ಜಿಲ್ಲಾ ಕ್ಷಯರೋಗ ಆರೋಗ್ಯಾಧಿಕಾರಿ ಡಾ. ಜಗದೀಶ್ ಮಾಹಿತಿ ನೀಡಿದರು.

‘ಕ್ಷಯ ರೋಗ ನಿವಾರಣೆ ಕಾರ್ಯಕ್ರಮದಲ್ಲಿ ಕೋಲಾರ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಪತ್ತೆಯಾದ ಒಟ್ಟು ಪ್ರಕರಣಗಳಲ್ಲಿ ಶೇ 85ರಷ್ಟು ಗುಣಪಡಿಸಲಾಗುತ್ತಿದೆ. ಶೇ 5ರಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಅಂತಿಮ ಹಂತದಲ್ಲಿ ಪತ್ತೆಯಾದರೆ ವ್ಯಕ್ತಿ ಬದುಕುಳಿಯುವುದು ಕಷ್ಟ. ಹಾಗಾಗಿ ಲಕ್ಷಣಗಳು ಗೋಚರಿಸಿದ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ, ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅರಿವು ಮೂಡಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ವಿಜಯ್‌ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರೋಸ್ಲಿನ್ ಪಿ.ಸತ್ಯ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !