ಮಂಗಳವಾರ, ಡಿಸೆಂಬರ್ 1, 2020
18 °C

ಒಕ್ಕುವ ಯಂತ್ರಕ್ಕೆ ಮೊರೆ ಹೋದ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಸುಗ್ಗಿ ಕಾಲ ಆರಂಭವಾಗಿದ್ದು, ರೈತರು ಯಂತ್ರದ ಸಹಾಯದಿಂದ ರಾಗಿ ಒಕ್ಕಣೆ ಮಾಡುತ್ತಿದ್ದಾರೆ. ಇದರಿಂದ ಸ್ವಚ್ಛವಾದ ರಾಗಿ ಕಣಜ ಸೇರುವಂತಾಗಿದೆ.

ಮೊದಲು ಕಣ ಪದ್ಧತಿ ಜಾರಿಯಲ್ಲಿತ್ತು. ರೈತರು ಸಾಂಘಿಕವಾಗಿ ಕಣ ಮಾಡಿ ಅದರಲ್ಲಿ ರಾಗಿ, ಭತ್ತ, ಅವರೆ, ಹುರುಳಿ ಮುಂತಾದ ದವಸ ಧಾನ್ಯ ಒಕ್ಕಣೆ ಮಾಡುತ್ತಿದ್ದರು. ಭಾರದ ಗುಂಡನ್ನು ಎತ್ತುಗಳಿಂದ ಎಳೆಸಿ ಒಕ್ಕಣೆ ಮಾಡುವುದು ಹಿಂದಿನಿಂದಲೂ ನಡೆದು ಬಂದಿತ್ತು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ರೈತರು ಎತ್ತುಗಳಿಗೆ ಬದಲಾಗಿ ಸೀಮೆ ಹಸುಗಳನ್ನು ಸಾಕಲು ಪ್ರಾರಂಭಿಸಿದರು. ಕೃಷಿ ಚಟುವಟಿಕೆಗೆ ಟ್ರ್ಯಾಕ್ಟರ್‌ ಬಳಕೆ ಶುರುವಾಯಿತು.

ಕಣ ಸಂಸ್ಕೃತಿ ನೇಪಥ್ಯಕ್ಕೆ ಸರಿದ ಮೇಲೆ, ರೈತರು ತಾವು ಬೆಳೆದ ಬೆಳೆಯನ್ನು ರಸ್ತೆಗಳ ಮೇಲೆ ಹರಡಿ ವಾಹನಗಳ ಚಕ್ರಗಳ ನೆರವಿನಿಂದ ಒಕ್ಕಣೆ ಮಾಡತೊಡಗಿದರು. ಅದು ಅತ್ಯಂತ ಅಪಾಯಕಾರಿ ಚಟುವಟಿಕೆಯಾಗಿತ್ತು. ರಸ್ತೆಯಲ್ಲಿ ಕೆಲಸ ಮಾಡುವ ರೈತರು ಹಾಗೂ ಮಕ್ಕಳು ವೇಗವಾಗಿ ಚಲಿಸುವ ವಾಹನಗಳಿಗೆ ಸಿಕ್ಕಿ ಜೀವ ಕಳೆದುಕೊಂಡ ಘಟನೆಗಳಿಗೆ ಲೆಕ್ಕವಿಲ್ಲ.

ಈಗ ರಾಗಿ, ಅವರೆ, ತೊಗರಿ ಮುಂತಾದ ದವಸ ಧಾನ್ಯ ಒಕ್ಕಣೆ ಮಾಡಲು ಯಂತ್ರಗಳು ಬಂದಿವೆ. ಟ್ರ್ಯಾಕ್ಟರ್‌ಗೆ ಅಳವಡಿಸಿದ ಈ ಯಂತ್ರ ಅತ್ಯಂತ ವೇಗವಾಗಿ ಕಾಳು ಒಕ್ಕುವ ಸಾಮರ್ಥ್ಯ ಪಡೆದಿದೆ. ಕಲ್ಲು, ಮಣ್ಣು ಮತ್ತಿತರ ಬೇಡವಾದ ವಸ್ತುಗಳನ್ನು ಬೇರ್ಪಡಿಸಿ ಸ್ವಚ್ಛವಾದ ದವಸ ಧಾನ್ಯ ಒಕ್ಕುವ ಈ ಯಂತ್ರ ರೈತರ ಪಾಲಿಗೆ ವರದಾನವಾಗಿದೆ.

‘ಈ ಯಂತ್ರದಿಂದಾಗಿ ರಾಗಿ ಸ್ವಚ್ಛಗೊಳಿಸುವ ಕಾರ್ಯ ಸುಲಭವಾಗಿದೆ. ರಸ್ತೆ ಒಕ್ಕಣೆಯಂಥ ಅಪಾಯಕಾರಿ ಕೆಲಸ ನಿಂತಿದೆ. ಎಲ್ಲ ರೈತರೂ ಯಂತ್ರ ಒಕ್ಕಣೆ ಮಾಡುವುದು ಹೆಚ್ಚು ಕ್ಷೇಮಕರ’ ಎಂದು ಪನಸಮಾಕನಹಳ್ಳಿಯ ಕೃಷಿಕ ಮಹಿಳೆ ವೀಣಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ಇಂದಿನ ಸಂದರ್ಭಕ್ಕೆ ಯಂತ್ರ ಒಕ್ಕಣೆ ಹೆಚ್ಚು ದುಬಾರಿಯೂ ಅಲ್ಲ. ಒಂದು ಕ್ವಿಂಟಲ್ ರಾಗಿ ಒಕ್ಕಲು ₹ 100 ಪಡೆಯಲಾಗುತ್ತಿದೆ. ಹೊಲದ ಸಮೀಪ ಬಂದು ಒಕ್ಕಣೆ ಮಾಡಿಕೊಡುವುದರಿಂದ ಸಾಗಾಣಿಕೆ ವೆಚ್ಚ ಉಳಿಯುತ್ತದೆ. ಸಮಯ ಉಳಿಯುವುದರ ಜತೆಗೆ ಕೃಷಿ ಕಾರ್ಮಿಕರ ಕೊರತೆಯಿಂದ ಉಂಟಾಗುವ ಸಮಸ್ಯೆ ತಪ್ಪುತ್ತದೆ. ಕೆಲವರು ಸುಗ್ಗಿ ಕಾಲದಲ್ಲಿ ಇಂಥ ಯಂತ್ರಗಳನ್ನು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ದು ರೈತರಿಗೆ ನೆರವಾಗುತ್ತಿದ್ದಾರೆ.

ಈ ಬಾರಿ ಉತ್ತಮ ಮಳೆಯಾದ ಪರಿಣಾಮವಾಗಿ ರಾಗಿ ಸಮೃದ್ಧವಾಗಿ ಬೆಳೆದಿದೆ. ಬಿತ್ತನೆ ಮಾಡಲಾದ ಪ್ರದೇಶದಲ್ಲಿ ಕಟಾವು ಕಾರ್ಯ ಭರದಿಂದ ನಡೆಯುತ್ತಿದೆ. ಒಣಗಿದ ತೆನೆಯನ್ನು ಯಂತ್ರಕ್ಕೆ ಹಾಕಿ ಒಕ್ಕಣೆ ಮಾಡಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು