ಮಂಗಳವಾರ, ನವೆಂಬರ್ 24, 2020
26 °C

ಬಳಕೆಯಿಂದ ಭಾಷೆ ಜೀವಂತ: ಅಶೋಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕನ್ನಡ ಭಾಷೆಯ ಉಳಿವಿಗಾಗಿ ಕನ್ನಡವನ್ನು ಹೆಚ್ಚೆಚ್ಚು ಬಳಸಬೇಕು. ದೈನಂದಿನ ಚಟುವಟಿಕೆಗಳಲ್ಲಿ ಕನ್ನಡ ಭಾಷೆಯಲ್ಲೇ ಮಾತನಾಡಬೇಕು ಮತ್ತು ಬರೆಯಬೇಕು’ ಎಂದು ತಾಲ್ಲೂಕಿನ ಹರಟಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಆರ್.ಅಶೋಕ್ ಹೇಳಿದರು.

ಹರಟಿ ಗ್ರಾಮದಲ್ಲಿ ಸೋಮವಾರ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ‘ಪೋಷಕರು ಮನೆಗಳಲ್ಲಿ ಮಕ್ಕಳ ಜತೆ ಮಾತೃ ಭಾಷೆಯಲ್ಲೇ ಮಾತನಾಡಬೇಕು. ಮಕ್ಕಳು ಕನ್ನಡ ಭಾಷೆ ಕಲಿಯುವುದರಿಂದ ಮತ್ತು ಹೆಚ್ಚೆಚ್ಚು ಬಳಸುವುದರಿಂದ ಭಾಷೆ ಜೀವಂತವಾಗಿರುತ್ತದೆ. ಬಳಸಿದಂತೆ ಭಾಷೆ ಬೆಳೆಯುತ್ತದೆ’ ಎಂದರು.

‘ಒಂದು ಭಾಷೆಯ ಮೇಲಿನ ಪ್ರೀತಿಯು ಮತ್ತೊಂದು ಭಾಷೆ ಮೇಲಿನ ದ್ವೇಷವಲ್ಲ. ಬಳಸುವ ಭಾಷೆ ಬಗ್ಗೆ ಜ್ಞಾನ, ಸ್ಪಷ್ಟತೆ, ಶುದ್ಧತೆ ಇರಬೇಕು. ಮೋಜಿಗಾಗಿ ಮಾತನಾಡುವ ಅಸಭ್ಯ ಶೈಲಿ ತೊರೆಯಬೇಕು. ಕನ್ನಡದ ಮನಸ್ಸುಗಳು ಜಾಗೃತವಾಗಿ ಕನ್ನಡದ ವಾತಾವರಣ ನಿರ್ಮಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಆಧುನಿಕ ಯುಗದಲ್ಲಿ ದೇಸಿ ಭಾಷೆಯ ಸೊಗಡು ಮರೆಯಾಗಿ ಕನ್ನಡದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲಾ ಭಾಷೆ ಒಪ್ಪಿಕೊಳ್ಳುವ ವಿಶಾಲ ಹೃದಯವಂತರಾಗಬೇಕು. ಸ್ಥಳೀಯ ಭಾಷೆಗೆ ಆದ್ಯತೆ ನೀಡದಿದ್ದರೆ ಆತ್ಮವಂಚನೆ ಮಾಡಿಕೊಂಡಂತೆ’ ಎಂದು ಅಭಿಪ್ರಾಯಪಟ್ಟರು.

‘ಮಾತನಾಡುವ ಭಾಷೆ ಬಗ್ಗೆ ಜ್ಞಾನ ಇರಬೇಕು. ಭಾಷೆ ಬಳಕೆಯಲ್ಲಿ ಕ್ರಮಬದ್ಧತೆ, ಸ್ವಷ್ಟತೆ ಇಲ್ಲದಿದ್ದರೆ ಅಪಾರ್ಥವಾಗಿ ಅಪಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ. ರಾಜ್ಯದ ಗಡಿ ಜಿಲ್ಲೆಯ ಕೋಲಾರದಲ್ಲಿ ಕನ್ನಡ ಭಾಷೆ ಬಳಕೆಯಲ್ಲಿ ತೆಲುಗು, ತಮಿಳು ಪದಗಳ ಮಿಳಿತ ಕಾಣಬಹುದು’ ಎಂದು ಹರಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ನಾಗರಾಜ್ ತಿಳಿಸಿದರು.

‘ಪೋಷಕರ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಭಾಷೆಗೆ ಪೆಟ್ಟು ಬೀಳುತ್ತಿದೆ. ಪೋಷಕರು ಮಕ್ಕಳನ್ನು ಯಾವುದೇ ಮಾಧ್ಯಮದ ಶಾಲೆಗೆ ಸೇರಿಸಿದರೂ ಮಾತೃ ಭಾಷೆ ಕನ್ನಡವನ್ನೇ ಬಳಕೆ ಮಾಡಬೇಕು. ಇದರಿಂದ ಮಕ್ಕಳಲ್ಲಿ ಭಾಷಾ ಜಾಗೃತಿ ಮೂಡುತ್ತದೆ. ಆಡಳಿತದಲ್ಲಿ ಕನ್ನಡ ಜಾರಿಯಾಗಬೇಕಾದರೆ ಸಾರ್ವಜನಿಕರು ಕಚೇರಿಗಳಲ್ಲಿ ಕನ್ನಡದಲ್ಲಿ ಮಾತನಾಡಬೇಕು. ಆಗ ಮಾತ್ರ ಕನ್ನಡ ರಾಜ್ಯೋತ್ಸವಕ್ಕೆ ಅರ್ಥ ಬರುತ್ತದೆ’ ಎಂದರು.

ನಿತ್ಯೋತ್ಸವವಾಗಲಿ: ‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ನೀಡುವ ಉದ್ದೇಶಕ್ಕೆ ಸರ್ಕಾರ ಅನೇಕ ಯೋಜನೆ ರೂಪಿಸಿದೆ. ಆದರೆ, ಸಂಪನ್ಮೂಲ ಕೊರತೆಯಿಂದ ಶಾಲಾ ಕಾಲೇಜುಗಳಲ್ಲಿ ಸಮರ್ಪಕ ಕಲಿಕಾ ವಾತಾವರಣವಿಲ್ಲ. ರಾಜ್ಯೋತ್ಸವದ ಆಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಬದಲಿಗೆ ನಿತ್ಯೋತ್ಸವವಾಗಬೇಕು’ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಸಲಹೆ ನೀಡಿದರು.

ಕನ್ನಡ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಪಲ್ಲವಿ ಅವರನ್ನು ಸನ್ಮಾನಿಸಲಾಯಿತು. ಹರಟಿ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ವೆಂಕಟರಮಣಪ್ಪ, ಶಿಕ್ಷಕರಾದ ಸೊಣ್ಣೇಗೌಡ, ಗೋವಿಂದಪ್ಪ, ಮೀನಾ, ಮಮತಾ, ಕೃಷ್ಣಪ್ಪ, ಮುನಿಯಪ್ಪ, ಶ್ರೀನಿವಾಸಗೌಡ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.