ಶನಿವಾರ, ಮಾರ್ಚ್ 6, 2021
30 °C
ಜಿಲ್ಲೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ: ದೇವಾಲಯಗಳಲ್ಲಿ ಭಕ್ತರ ದಂಡು

ಸಂಪತ್ತಿನ ಅದಿದೇವತೆಯ ಆರಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಶ್ರಾವಣ ಮಾಸದ ಮೊದಲ ಹಬ್ಬ ವರ ಮಹಾಲಕ್ಷ್ಮಿ ವ್ರತವನ್ನು ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ಎಲ್ಲೆಡೆ ಹಬ್ಬದ ಸಂಭ್ರಮ ಕಳೆಗಟ್ಟಿತು.

ಮಹಿಳೆಯರು ಮುಂಜಾನೆಯೇ ನಿದ್ದೆಯಿಂದ ಎದ್ದು ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಅಂಗಳವನ್ನು ಚಿತ್ತಾಕರ್ಷಕಗೊಳಿಸಿದ್ದರು. ಬಾಗಿಲಿಗೆ ತಳಿರು ತೋರಣ ಕಟ್ಟಿ ಸಿಂಗರಿಸಿದ್ದರು.

ಮಹಿಳೆಯರು ಸಾಂಪ್ರದಾಯಿಕ ರೀತಿಯಲ್ಲಿ ಹೊಸ ಸೀರೆ ತೊಟ್ಟು ಮುಂಜಾನೆಯೇ ಲಕ್ಷ್ಮಿ ದೇವಿಗೆ ಪೂಜೆ ಸಲ್ಲಿಸಿದರು. ಕೆಲ ಮನೆಗಳಲ್ಲಿ ಲಕ್ಷ್ಮಿ ಕಳಶ ಪ್ರತಿಷ್ಠಾಪಿಸಿ, ಸೀರೆ ಹಾಗೂ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಬ್ಯಾಂಕ್‌ಗಳಲ್ಲೂ ಪೂಜೆ ಸಲ್ಲಿಸಲಾಯಿತು.

ಆರ್ಥಿಕವಾಗಿ ಸ್ಥಿತಿವಂತರಾದವರ ಮನೆಗಳಲ್ಲಿ ಚಿನ್ನಾಭರಣ ಹಾಗೂ ಹಣ ಇಟ್ಟು ಪೂಜೆ ಮಾಡಿದರು. ಬಡ ಹಾಗೂ ಮಧ್ಯಮ ವರ್ಗದ ಜನರು ಹೂವು, ಹಣ್ಣುಗಳಿಂದ ಸಂಪತ್ತಿನ ಅದಿದೇವತೆ ವರ ಮಹಾಲಕ್ಷ್ಮಿಯನ್ನು ಆರಾಧಿಸಿದರು. ಮತ್ತೆ ಕೆಲ ಮನೆಗಳಲ್ಲಿ ಕಳಸವಿಟ್ಟು, ಸೀರೆಯುಡಿಸಿ ವಿಶಿಷ್ಟ ರೀತಿಯಲ್ಲಿ ಹೂವಿನ ಅಲಂಕಾರ ಮಾಡಿ ಪೂಜಿಸಲಾಯಿತು. ಅಕ್ಕಪಕ್ಕದ ಮನೆಗಳ ಮುತ್ತೈದೆಯರನ್ನು ಮನೆಗೆ ಕರೆದು ಅರಿಶಿನ ಕುಂಕುಮ, ಬಳೆ, ಹೂವು ಹಾಗೂ ತಾಂಬೂಲ ಕೊಟ್ಟು ಸತ್ಕರಿಸಿದರು.

ದೇವಾಲಯಗಳಿಗೆ ಸಿಂಗಾರ: ಹಬ್ಬದ ಪ್ರಯುಕ್ತ ದೇವಸ್ಥಾನಗಳನ್ನು ಮಾವಿನ ತೋರಣ ಹಾಗೂ ಬಾಳೆ ದಿಂಡಿನಿಂದ ಸಿಂಗರಿಸಲಾಗಿತ್ತು. ದೇವರ ಮೂರ್ತಿಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

ದೇವರಿಗೆ ಮುಂಜಾನೆಯೇ ಅಭಿಷೇಕ ಮಾಡಲಾಯಿತು. ನಗರದೇವತೆ ಕೋಲಾರಮ್ಮ ದೇವರಿಗೆ ₹ 10ರ ಮುಖಬೆಲೆಯ ನೋಟುಗಳನ್ನು ಹಾರವಾಗಿ ಪೋಣಿಸಿ ಅಲಂಕಾರ ಮಾಡಿದ್ದು ವಿಶೇಷವಾಗಿತ್ತು. ಶಾರದಾ ಚಿತ್ರಮಂದಿರ ರಸ್ತೆಯ ಸಾಯಿಲಕ್ಷ್ಮಿ ದೇವಾಲಯ, ಕೋಟೆ ಬಡಾವಣೆಯ ಕೋಲಾರಮ್ಮ, ಬ್ರಾಹ್ಮಣರ ಬೀದಿಯ ಲಕ್ಷ್ಮಿ ದೇವಸ್ಥಾನ, ದೊಡ್ಡಪೇಟೆಯ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪೂಜೆ ನಡೆಯಿತು.

ಸಾರ್ವಜನಿಕರು ಕುಟುಂಬ ಸಮೇತ ದೇವಸ್ಥಾನಗಳಿಗೆ ತೆರಳಿ ಇಷ್ಟಾರ್ಥ ಸಿದ್ದಿಗಾಗಿ ದೇವರನ್ನು ಪ್ರಾರ್ಥಿಸಿದರು. ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇವಸ್ಥಾನಗಳಲ್ಲಿ ಸಂಜೆ ಭಕ್ತರ ಸಂಖ್ಯೆ ಹೆಚ್ಚಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ದೇವಸ್ಥಾನಗಳ ಬಳಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಕಚೇರಿಗಳು ಖಾಲಿ: ವರಮಹಾಲಕ್ಷ್ಮಿ ಹಬ್ಬಕ್ಕೆ ಸರ್ಕಾರ ರಜೆ ಘೋಷಿಸಿಲ್ಲ. ಆದರೆ, ಅಧಿಕಾರಿಗಳು ಹಾಗೂ ನೌಕರರು ನಿರ್ಬಂಧಿತ ರಜೆ ಪಡೆದು ಹಬ್ಬದ ಹಿನ್ನೆಲೆಯಲ್ಲಿ ಮನೆಯಲ್ಲೇ ಉಳಿದಿದ್ದರಿಂದ ಸರ್ಕಾರಿ ಕಚೇರಿಗಳಲ್ಲೂ ಹಾಜರಾತಿ ಕಡಿಮೆಯಿತ್ತು. ಸಾರ್ವಜನಿಕರು ಸಹ ಹಬ್ಬದ ಕಾರಣಕ್ಕೆ ಸರ್ಕಾರಿ ಕಚೇರಿಗಳತ್ತ ಸುಳಿಯಲಿಲ್ಲ.

ಹಬ್ಬದ ಹಿನ್ನೆಲೆಯಲ್ಲಿ ಮಕ್ಕಳು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಹಬ್ಬಕ್ಕಾಗಿ ಮನೆಗಳಲ್ಲಿ ಹೋಳಿಗೆ, ಪಾಯಸ, ವಡೆ, ಕೋಸಂಬರಿ, ಬೋಂಡಾ, ಚಕ್ಕುಲಿ, ರವೆ ಉಂಡೆ, ನಿಪ್ಪಟ್ಟು ಸಿದ್ಧಪಡಿಸಲಾಗಿತ್ತು. ಪೂಜೆಯ ನಂತರ ಮನೆ ಮಂದಿಯೆಲ್ಲಾ ಒಟ್ಟಾಗಿ ಕುಳಿತು ಹಬ್ಬದೂಟ ಸವಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.