ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಬೆಲೆ ಕುಸಿತ ತಾತ್ಕಾಲಿಕ

ಆತಂಕ ಬೇಡ: ರೈತರಿಗೆ ಜಿಲ್ಲಾಧಿಕಾರಿ ಸೆಲ್ವಮಣಿ ಕಿವಿಮಾತು
Last Updated 3 ಮೇ 2021, 14:40 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್ 2ನೇ ಅಲೆ ಭೀತಿ ಹಿನ್ನೆಲೆಯಲ್ಲಿ ತರಕಾರಿಗಳ ಬೆಲೆ ಕೊಂಚ ಕುಸಿತವಾಗಿದೆ. ಕೋವಿಡ್‌ ಪರಿಸ್ಥಿತಿ ಸುಧಾರಿಸಿದರೆ ತರಕಾರಿಗಳ ಬೆಲೆ ಏರಿಕೆಯಾಗುತ್ತದೆ. ಬೆಲೆ ಕುಸಿತ ತಾತ್ಕಾಲಿಕವಾಗಿದ್ದು, ರೈತರು ಆತಂಕಪಡಬೇಕಿಲ್ಲ’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಕಿವಿಮಾತು ಹೇಳಿದರು.

ಕೊರೊನಾ ಸೋಂಕಿನ ಹೆಚ್ಚಳದ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಸೋಮವಾರ ಭೇಟಿ ನೀಡಿ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿಯು ಅಧಿಕಾರಿಗಳ ಜತೆ ಸಭೆ ನಡೆಸಿದರು.

‘ಕೊರೊನಾ ಸೋಂಕು ಹರಡುವ ಭೀತಿ ಇರುವುದರಿಂದ ಮಾರುಕಟ್ಟೆಯಲ್ಲಿ ಕೋವಿಡ್‌ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಸೋಂಕು ಹರಡುವಿಕೆ ತಡೆಗೆ ಮಾರುಕಟ್ಟೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆಗೆ ಬರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸ್ಯಾನಿಟೈಸರ್‌ ಬಳಸಬೇಕು’ ಎಂದು ಸೂಚಿಸಿದರು.

‘ಮಂಡಿಗಳಲ್ಲಿ ಮತ್ತು ತರಕಾರಿ ವಹಿವಾಟಿನ ಸ್ಥಳದಲ್ಲಿ ವರ್ತಕರು, ದಲ್ಲಾಳಿಗಳು, ರೈತರು ಅಂತರ ಕಾಯ್ದುಕೊಳ್ಳಬೇಕು. ಮಂಡಿಗಳ ಬಳಿ ಹೆಚ್ಚು ಜನ ಗುಂಪುಗೂಡದಂತೆ ಎಚ್ಚರಿಕೆ ವಹಿಸಬೇಕು. ರೈತರು ಅನಗತ್ಯವಾಗಿ ಎಪಿಎಂಸಿಗೆ ಬರುವುದು ತಪ್ಪಬೇಕು. ಮಾರುಕಟ್ಟೆಯಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ಕೊಡಬೇಕು’ ಎಂದು ಸಲಹೆ ನೀಡಿದರು.

‘ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ತರಕಾರಿಗಳ ಬೆಲೆ ಕುಸಿದು ರೈತರು ತೊಂದರೆ ಅನುಭವಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಎಪಿಎಂಸಿಗಳಲ್ಲಿ ತರಕಾರಿ ವಹಿವಾಟಿಗೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಅವಕಾಶ ಕಲ್ಪಿಸಿದೆ. ಜಿಲ್ಲೆಯಲ್ಲಿ ರೈತರಿಗೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಿ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ಅವರಿಗೆ ಸೂಚಿಸಿದರು.

ಸಹಾಯವಾಣಿ: ‘ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಮೇ 12ರವರೆಗೂ ಜನತಾ ಕರ್ಫ್ಯೂ ವಿಧಿಸಲಾಗಿದೆ. ಜಿಲ್ಲೆಯಲ್ಲಿ ಸದ್ಯ 5 ಸಾವಿರ ಹೆಕ್ಟೇರ್‌ನಲ್ಲಿ ತರಕಾರಿ ಬೆಳೆ ಮತ್ತು 275 ಹೆಕ್ಟೇರ್‌ನಲ್ಲಿ ಹೂವಿನ ಬೆಳೆಯಿದೆ. ತೋಟಗಾರಿಕೆ ಉತ್ಪನ್ನಗಳ ಸಾಗಾಣಿಕೆ ಮತ್ತು ಮಾರಾಟದ ಸಂಬಂಧ ರೈತರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಸಹಾಯವಾಣಿ ತೆರೆಯಲಾಗಿದೆ’ ಎಂದು ಗಾಯತ್ರಿ ಮಾಹಿತಿ ನೀಡಿದರು.

‘ಬೆಂಗಳೂರಿನಲ್ಲಿ 3 ಟೊಮೆಟೊ ಸಂಸ್ಕರಣಾ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯಿಂದ ಆ ಘಟಕಗಳಿಗೆ ಪ್ರತಿನಿತ್ಯ ಸುಮಾರು 150 ಟನ್‌್ ಟೊಮೆಟೊ ಪೂರೈಕೆಯಾಗುತ್ತಿದೆ. ರೈತರಿಗೆ ವ್ಯಾಪಾರಸ್ಥರು ಮತ್ತು ಖರೀದಿದಾರರ ಜತೆ ನೇರ ಸಂಪರ್ಕ ಕಲ್ಪಿಸಿ ತರಕಾರಿ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ರೈತರು ನೆರವಿಗಾಗಿ ಸಹಾಯವಾಣಿ ಸಂಖ್ಯೆ 08152 222246ಕ್ಕೆ, ಜಿಲ್ಲಾ ನಿಯಂತ್ರಣ ಕೊಠಡಿ ಸಂಖ್ಯೆ 1077 ಅಥವಾ 08152 243506ಕ್ಕೆ ಕರೆ ಮಾಡಬಹುದು’ ಎಂದು ವಿವರಿಸಿದರು.

ಬೆಲೆಯಲ್ಲಿ ಚೇತರಿಕೆ: ‘ಸೋಮವಾರದಿಂದ (ಮೇ 3) ಅನ್ವಯವಾಗುವಂತೆ ಎಪಿಎಂಸಿಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12ರವರೆಗೆ ವಹಿವಾಟಿಗೆ ಅನುಮತಿ ನೀಡಲಾಗಿದೆ. ಟೊಮೆಟೊ ಖರೀದಿಗೆ ಹೊರ ರಾಜ್ಯಗಳಿಂದ ಖರೀದಿದಾರರು ಬರುತ್ತಿದ್ದು, ಬೆಲೆಯಲ್ಲಿ ಚೇತರಿಕೆ ಕಾಣುತ್ತಿದೆ’ ಎಂದು ಎಂಪಿಎಂಸಿ ಕಾರ್ಯದರ್ಶಿ ರವಿಕುಮಾರ್ ಹೇಳಿದರು.

‘ಕಳೆದ ಕೆಲ ದಿನಗಳಿಂದ ಟೊಮೆಟೊ ಬೆಲೆ ಕುಸಿದು ರೈತರಿಗೆ ತೊಂದರೆಯಾಗಿತ್ತು. ಇದೀಗ ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ಹೊರ ರಾಜ್ಯಗಳಿಂದ ವ್ಯಾಪಾರಿಗಳು ಎಪಿಎಂಸಿಗೆ ಬರುತ್ತಿದ್ದಾರೆ. ಜತೆಗೆ ಸರ್ಕಾರ ತರಕಾರಿ ಮಾರಾಟಕ್ಕೆ ಹೆಚ್ಚಿನ ಅವಕಾಶ ನೀಡಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್‌.ಎಂ.ನಾಗರಾಜ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT