ಬುಧವಾರ, ಜನವರಿ 19, 2022
26 °C

ನೀತಿಸಂಹಿತೆ ಉಲ್ಲಂಘನೆ: ಶಾಸಕರ ವಿರುದ್ಧ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ವಿಧಾನ ಪರಿಷತ್‌ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಸಂಬಂಧ ಜಿಲ್ಲೆಯ ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹಾಗೂ ಕೋಚಿಮುಲ್‌ ವ್ಯವಸ್ಥಾಪಕ ಮಹೇಶ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಶಾಸಕ ನಾರಾಯಣಸ್ವಾಮಿ ಅವರು ಬಂಗಾರಪೇಟೆ ಹೊರವಲಯದಲ್ಲಿನ ತಮ್ಮ ರೆಸಾರ್ಟ್‌ನಲ್ಲಿ ನ.29ರಂದು ಕಾಂಗ್ರೆಸ್‌ ಅಭ್ಯರ್ಥಿ ಎಂ.ಎಲ್‌.ಅನಿಲ್‌ಕುಮಾರ್‌ ಪರ ಚುನಾವಣಾ ಪ್ರಚಾರ ಸಭೆ ನಡೆಸಿದ್ದರು. ಸಭೆಗೆ ಬಂದಿದ್ದ ಗ್ರಾ.ಪಂ ಸದಸ್ಯರು ಹಾಗೂ ಇತರೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ್ದ ಶಾಸಕರು, ‘ತಾವು ಯಾರಿಗೆ ಮತ ಹಾಕುತ್ತೀರಿ ಎಂಬುದು ನನಗೆ ಗೊತ್ತಾಗುತ್ತದೆ. ಇಲ್ಲೊಂದು ಹೇಳಿ ಮತಗಟ್ಟೆಯಲ್ಲಿ ಮತ್ತೊಂದು ಮಾಡಬಾರದು’ ಎಂದು ಬೆದರಿಸಿದ್ದರು.

ಶಾಸಕರ ಭಾಷಣವನ್ನು ವಿಡಿಯೋ ಚಿತ್ರೀಕರಿಸಿಕೊಂಡಿದ್ದ ವ್ಯಕ್ತಿಯೊಬ್ಬರು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರು. ಬಳಿಕ ಆಯೋಗವು ಆ ದೃಶ್ಯಾವಳಿ ತುಣುಕನ್ನು ಜಿಲ್ಲಾಧಿಕಾರಿಗೆ ಕಳುಹಿಸಿ ದೂರು ದಾಖಲಿಸುವಂತೆ ನಿರ್ದೇಶನ ನೀಡಿತ್ತು. ಆ ದೃಶ್ಯಾವಳಿ ಆಧರಿಸಿ ಮಾದರಿ ಚುನಾವಣಾ ನೀತಿಸಂಹಿತೆ ತಂಡದ ಅಧಿಕಾರಿ ಯಶವಂತ್‌ಕುಮಾರ್‌ ಅವರು ಬಂಗಾರಪೇಟೆ ಠಾಣೆಗೆ ದೂರು ಕೊಟ್ಟಿದ್ದರು. ಪೊಲೀಸರು ಜನಪ್ರತಿನಿಧಿಗಳ ಕಾಯ್ದೆಯಡಿ ನಾರಾಯಣಸ್ವಾಮಿಯವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಅಧ್ಯಕ್ಷರಾದ ಮಾಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡರ ಅವರು ಮಾಲೂರು ಪಟ್ಟಣದಲ್ಲಿನ ಕೋಚಿಮುಲ್‌ ಶಿಬಿರ ಕಚೇರಿಯಲ್ಲಿ ನ.26ರಂದು ಪರಿಷತ್‌ ಚುನಾವಣೆ ಸಂಬಂಧ ಪಕ್ಷದ ಸಭೆ ನಡೆಸಿದ್ದರು.

ಕೋಚಿಮುಲ್‌ ಕಚೇರಿಯಲ್ಲಿ ರಾಜಕೀಯ ಪಕ್ಷವೊಂದರ ಸಭೆಗೆ ಅನುಮತಿ ನೀಡಿದ ಸಂಬಂಧ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅವರು ಕೋಚಿಮುಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಶ್‌ ಅವರಿಗೆ ಷೋಕಸ್‌ ನೋಟಿಸ್‌ ಜಾರಿ ಮಾಡಿ ನೀತಿಸಂಹಿತೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು