ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್‌ಗೆ ಸಚಿವ ನಾಗೇಶ್‌ ತರಾಟೆ

ಎಸ್.ಅಗ್ರಹಾರ ಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮ: ಶಿಷ್ಟಾಚಾರ ಉಲ್ಲಂಘನೆ
Last Updated 14 ಸೆಪ್ಟೆಂಬರ್ 2020, 14:20 IST
ಅಕ್ಷರ ಗಾತ್ರ

ಕೋಲಾರ: ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸದ ಕಾರಣಕ್ಕೆ ತಹಶೀಲ್ದಾರ್‌ ಶೋಭಿತಾ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಸಾರ್ವಜನಿಕವಾಗಿ ತೀವ್ರ ತರಾಟೆಗೆ ತೆಗೆದುಕೊಂಡರು.

ಇಲ್ಲಿ ಸೋಮವಾರ ಖಾಸಗಿ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಸಚಿವರು, ‘ಕೆ.ಸಿ ವ್ಯಾಲಿ ನೀರಿನಿಂದ ಭರ್ತಿಯಾಗಿ ಕೋಡಿ ಹರಿದಿರುವ ಎಸ್.ಅಗ್ರಹಾರ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಿದ್ದೀರಿ. ಉಸ್ತುವಾರಿ ಸಚಿವರನ್ನೇ ಬಿಟ್ಟು ಕಾರ್ಯಕ್ರಮ ನಡೆಸಿರುವ ನಿಮಗೆ ಎಷ್ಟು ಧೈರ್ಯ?’ ಎಂದು ತಹಶೀಲ್ದಾರ್‌ ವಿರುದ್ಧ ಹರಿಹಾಯ್ದರು.

‘ಶಿಷ್ಟಾಚಾರ ಉಲ್ಲಂಘನೆ ಸಂಬಂಧ ನಿಮ್ಮ ವಿರುದ್ಧ ಕಾನೂನು ಸಚಿವ ಮಾಧುಸ್ವಾಮಿ ಅವರಿಗೆ ದೂರು ಕೊಟ್ಟಿದ್ದೇನೆ. ಜತೆಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧವೂ ದೂರು ನೀಡಿದ್ದೇನೆ. ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸದೆ ರಾಜಕಾರಣ ಮಾಡಲು ಹೊರಟಿದ್ದೀರಿ’ ಎಂದು ಕೆಂಡಾಮಂಡಲರಾದರು.

ಇದಕ್ಕೆ ಧ್ವನಿಗೂಡಿಸಿದ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ‘ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ನನ್ನನ್ನೂ ಆಹ್ವಾನಿಸಿಲ್ಲ. ಅಧಿಕಾರಿಗಳು ತಮಗೆ ಬೇಕಾದವರನ್ನು ಕರೆಸಿಕೊಂಡು ಕಾರ್ಯಕ್ರಮ ಮಾಡಿದ್ದಾರೆ. ವಿಧಾನ ಪರಿಷತ್ ಸದಸ್ಯರು ಸರ್ಕಾರಿ ಕಾರ್ಯಕ್ರಮಕ್ಕೆ ಬರಲು ಅವಕಾಶವಿಲ್ಲವೇ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷಗಳ ಮುಖಂಡರನ್ನೂ ಆಹ್ವಾನಿಸಿದ್ದೀರಿ. ಆದರೆ, ನಮ್ಮನ್ನು ಯಾಕೆ ಬಿಟ್ಟಿರಿ? ನಾವು ಅಲ್ಲಿಗೆ ಬರಬಾರದೆ? ಸಂಸದ ಮುನಿಸ್ವಾಮಿ, ಶಾಸಕರಾದ ಶ್ರೀನಿವಾಸಗೌಡ ಹಾಗೂ ರಮೇಶ್‌ಕುಮಾರ್ ಅವರನ್ನು ಕರೆದ ಅಧಿಕಾರಿಗಳಿಗೆ ನಾವು ನೆನಪಿಗೆ ಬರಲಿಲ್ಲವೆ? ತಹಶೀಲ್ದಾರ್ ಕಚೇರಿಯಲ್ಲಿ ಈವರೆಗೆ ನನಗೆ ಕೊಠಡಿ ಕೊಟ್ಟಿಲ್ಲ. ಒಬ್ಬರು ಸಹಾಯಕರನ್ನು ನೀಡಿ ಎಂದು ಕೇಳಿದರೂ ಗಮನ ಹರಿಸುತ್ತಿಲ್ಲ’ ಎಂದು ಕಿಡಿಕಾರಿದರು.

ಬಿಜೆಪಿ ಕಾರ್ಯಕ್ರಮ: ಸಚಿವರು ಮತ್ತು ವಿಧಾನ ಪರಿಷತ್‌ ಸದಸ್ಯರಿಗೆ ಸ್ಪಷ್ಟನೆ ನೀಡಿದ ತಹಶೀಲ್ದಾರ್‌, ‘ಸರ್, ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಸಂಸದರ ಮೂಲಕ ನಡೆಯಿತು. ಸಂಸದರ ಸೂಚನೆಯಂತೆ ಬಿಜೆಪಿ ಮುಖಂಡರು ಕಾರ್ಯಕ್ರಮ ಏರ್ಪಾಡು ಮಾಡಿದ್ದರು. ತಾಲ್ಲೂಕು ಆಡಳಿತದಿಂದ ಈ ಕಾರ್ಯಕ್ರಮ ಆಯೋಜಿಸಿರಲಿಲ್ಲ’ ಎಂದು ಹೇಳಿದರು.

‘ಬಿಜೆಪಿ ಮುಖಂಡರ ಕಾರ್ಯಕ್ರಮಕ್ಕೆ ತಹಶೀಲ್ದಾರ್‌ ಆಗಿ ನೀವೇಕೆ ಹೋದಿರಿ? ಸರ್ಕಾರಿ ರಜಾ ದಿನವಾದ ಭಾನುವಾರ ಮನೆಯಲ್ಲಿರುವುದು ಬಿಟ್ಟು ರಾಜಕೀಯ ಪಕ್ಷವೊಂದರ ಕಾರ್ಯಕ್ರಮಕ್ಕೆ ಹೋಗಿದ್ದು ಏಕೆ?’ ಎಂದು ಸಚಿವರು ಸಿಡಿಮಿಡಿಗೊಂಡರು.

‘ಸಂಸದರ ಮಾತು ಮೀರಲಾರದೆ ಹೋಗ ಬೇಕಾಯಿತು’ ಎಂದು ತಹಶೀಲ್ದಾರ್‌ ಸಬೂಬು ಹೇಳಿದರು. ಆಗ ನಾಗೇಶ್‌, ‘ಕಾನೂನು ಸಚಿವರಿಗೆ ದೂರು ಕೊಟ್ಟಾಗಿದೆ. ನಿಮ್ಮ ಸ್ಪಷ್ಟನೆ ಬೆಂಗಳೂರಿನಲ್ಲಿ ಹೇಳಿಕೊಳ್ಳಿ’ ಎಂದು ರೇಗಿದರು. ಇದರಿಂದ ಕಸಿವಿಸಿಗೊಂಡ ತಹಶೀಲ್ದಾರ್‌ ಕಾರ್ಯಕ್ರಮದ ವೇದಿಕೆಯಿಂದ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT