ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಮೇಲಿನ ದೌರ್ಜನ್ಯ: ಪ್ರತಿಭಟನೆ

ಹೋರಾಟ ಹತ್ತಿಕ್ಕುವ ಪ್ರಯತ್ನ: ಪ್ರತಿಭಟನಾಕಾರರ ಆಕ್ರೋಶ
Last Updated 1 ಡಿಸೆಂಬರ್ 2020, 16:15 IST
ಅಕ್ಷರ ಗಾತ್ರ

ಕೋಲಾರ: ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಚಲೋ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವುದನ್ನು ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು ಇಲ್ಲಿ ಮಂಗಳವಾರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ಮಾಡಿದರು.

‘ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮತ್ತು ರೈತರ ಹಕ್ಕುಗಳ ರಕ್ಷಣೆಗಾಗಿ ನ್ಯಾಯಯುತ ರೀತಿಯಲ್ಲಿ ಹೋರಾಟ ಮಾಡುತ್ತಿದ್ದ ರೈತ ಮುಖಂಡರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಸರ್ಕಾರಗಳು ಪೊಲೀಸ್‌ ಬಲ ಬಳಸಿ ರೈತರ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿವೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಬಂಡವಾಳಶಾಹಿಗಳು, ಕಾರ್ಪೊರೇಟ್‌ ಕಂಪನಿಗಳು ಹಾಗೂ ಹಣವಂತ ರಾಜಕಾರಣಿಗಳಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ಕೃಷಿ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿ ರೈತರನ್ನು ಬೀದಿಗೆ ತಂದಿದೆ. ಸರ್ಕಾರದ ಜನ ವಿರೋಧಿ ನಡೆಯಿಂದ ರೈತ ಕುಲ ತಬ್ಬಲಿಯಾಗುವ ದುಸ್ಥಿತಿ ಬರಲಿದೆ’ ಎಂದು ಸಿಐಟಿಯು ಜಿಲ್ಲಾ ಘಟಕದ ಗೌರವ ಅಧ್ಯಕ್ಷ ನಾರಾಯಣಸ್ವಾಮಿ ಆತಂಕ ವ್ಯಕ್ತಪಡಿಸಿದರು.

‘ಸರ್ಕಾರಗಳು ಕೃಷಿ ಕ್ಷೇತ್ರ ನಾಶ ಮಾಡಿ ಆಹಾರ ಭದ್ರತೆಗಾಗಿ ಹೊರ ದೇಶಗಳತ್ತ ಕೈಚಾಚುವ ಪರಿಸ್ಥಿತಿ ಸೃಷ್ಟಿಸುತ್ತಿವೆ. ರೈತರ ಬೇಡಿಕೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ಪೊಲೀಸ್‌ ಬಳಸಿಕೊಂಡು ರೈತರನ್ನು ಶೋಷಿಸುತ್ತಿವೆ. ರೈತ ವಿರೋಧಿ ಕಾಯ್ದೆಗಳನ್ನು ಮಂಡಿಸಿ ತುಘಲಕ್‌ ದರ್ಬಾರ್‌ ನಡೆಸುತ್ತಿವೆ. ಲಜ್ಜೆಗೆಟ್ಟ ಸರ್ಕಾರಗಳಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯಿಲ್ಲ’ ಎಂದು ಕಿಡಿಕಾರಿದರು.

ರೈತ ವಿರೋಧಿ ನೀತಿ: ‘ನ್ಯಾಯ ಕೇಳಲು ದೆಹಲಿಗೆ ಹೊರಟಿರುವ ರೈತರನ್ನು ನಿಕೃಷ್ಟವಾಗಿ ನಡೆಸಿಕೊಳ್ಳಲಾಗಿದೆ. ರೈತರು ದೆಹಲಿ ಪ್ರವೇಶಿಸದಂತೆ ತಡೆಯಲು ರಸ್ತೆಯಲ್ಲಿ ಮುಳ್ಳು ಬೇಲಿ, ಬ್ಯಾರಿಕೇಡ್‌ ಹಾಕಿ ಮಣ್ಣು ತುಂಬಿದ ಲಾರಿಗಳನ್ನು ಅಡ್ಡ ನಿಲ್ಲಿಸಲಾಗಿದೆ. ಸರ್ಕಾರದ ಈ ನಡೆ ಖಂಡನೀಯ’ ಎಂದು ಪ್ರತಿಭಟನಾಕಾರರು ಗುಡುಗಿದರು.

‘ಸರ್ಕಾರಗಳು ರೈತರನ್ನು ಬೀದಿಗೆ ತಳ್ಳಿ ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಹಿತ ಕಾಯಲು ಹೊರಟಿವೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಕೈಗೊಂಬೆಯಾಗಿರುವ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಸಣ್ಣ ಭೂ ಹಿಡುವಳಿದಾರರು ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಂಬಲ ಬೆಲೆ: ‘ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಬೇಕು. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತ್ರಿಪಡಿಸುವ ಕಾಯ್ದೆ ಜಾರಿಗೆ ತರಬೇಕು. ರೈತರು, ಕೂಲಿಕಾರರು ಹಾಗೂ ಕಸುಬುದಾರರಿಗೆ ಬಡ್ಡಿರಹಿತ ಸಾಲ ನೀಡಬೇಕು. ಪ್ರಾಕೃತಿಕ ವಿಕೋಪದಿಂದ ಬೆಳೆ ನಷ್ಟವಾದರೆ ಸಾಲ ಮನ್ನಾ ಆಗುವ ಸಾಲ ಪರಿಹಾರ ಕಾಯ್ದೆ ಅಥವಾ ಋಣ ಮುಕ್ತ ಕಾಯ್ದೆಯನ್ನು ಸಂಸತ್‌ನಲ್ಲಿ ಅಂಗೀಕರಿಸಬೇಕು’ ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ, ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎನ್.ಶ್ರೀರಾಮ್, ಸದಸ್ಯರಾದ ದೇವರಾಜ್, ಯಲ್ಲಪ್ಪ, ಎಸ್‍ಎಫ್‍ಐ ರಾಜ್ಯ ಘಟಕದ ಕಾರ್ಯದರ್ಶಿ ಕೆ.ವಾಸುದೇವರೆಡ್ಡಿ, ದಲಿತ ಹಕ್ಕುಗಳ ಸಮಿತಿ ಸದಸ್ಯ ವಿ.ಅಂಬರೀಷ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT