ಸೋಮವಾರ, ಸೆಪ್ಟೆಂಬರ್ 27, 2021
22 °C

ವಿಶ್ವನಾಥ್‌ರ ನಡವಳಿಕೆ ಸರಿಯಲ್ಲ: ಸಚಿವ ಕೃಷ್ಣ ಬೈರೇಗೌಡ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಶಾಸಕರ ವಿರುದ್ಧ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್‌ ಹೇಳಿಕೆ ನೀಡಿರುವುದು ಸರಿಯಾದ ನಡವಳಿಕೆಯಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣ ಬೈರೇಗೌಡ ಟೀಕಿಸಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿದ್ದರಾಮಯ್ಯ ಅವರು ಸಮರ್ಥ ಮುಖ್ಯಮಂತ್ರಿ ಎಂಬುದು ನಿರ್ವಿವಾದ. ನಾಡಿನ ಜನರೇ ಇದನ್ನು ಒಪ್ಪಿಕೊಂಡಿದ್ದಾರೆ. ವಿಶ್ವನಾಥ್‌ರ ಹೇಳಿಕೆಯು ಸಿದ್ದರಾಮಯ್ಯರ ನಡವಳಿಕೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದರು.

‘ಚುನಾವಣೆ ಫಲಿತಾಂಶ ಆಧರಿಸಿ ಮುಖ್ಯಮಂತ್ರಿ ಸಮರ್ಥರು ಅಥವಾ ಅಸಮರ್ಥರೆಂದು ಭಾವಿಸಲು ಆಗಲ್ಲ. ಸೋಲು ಗೆಲುವು ಬೇರೆ, ದೇವರಾಜ ಅರಸು ಸಹ ಚುನಾವಣೆಯಲ್ಲಿ ಸೋತಿದ್ದರು. ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರವೂ ಸೋತಿತ್ತು. ಉತ್ತಮ ಆಡಳಿತಕ್ಕೆ ಚುನಾವಣೆಯೊಂದೇ ಮಾನದಂಡವಲ್ಲ’ ಎಂದು ಹೇಳಿದರು.

‘ವಿಶ್ವನಾಥ್‌ ಅವರು ಸಹೋದ್ಯೋಗಿ ಶಾಸಕರ ಕುರಿತು ಚಮಚಾಗಿರಿ ಪದ ಬಳಸಿರುವುದು ಸರಿಯಲ್ಲ. ಸಾರ್ವಜನಿಕ ಜೀವನದಲ್ಲಿ ಈ ರೀತಿ ಮಾತನಾಡಬಾರದು. ಇದು ಅವರ ವೈಯುಕ್ತಿಕ ಟೀಕೆ ಇರಬಹುದು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲ್ಲ ಮತ್ತು ಹೇಳಿಕೆಯು ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ತಿಳಿಸಿದರು.

ಶಿಸ್ತು ಕಾಪಾಡಬೇಕು: ‘ಉಭಯ ಪಕ್ಷಗಳ ಮುಖಂಡರು ಶಿಸ್ತು ಕಾಪಾಡಬೇಕು, ಯಾವುದೇ ವಿಷಯವನ್ನು ಬಹಳ ವೈಯಕ್ತಿಕವಾಗಿ ತೆಗೆದುಕೊಳ್ಳುವುದು ಸರಿಯಲ್ಲ, 2 ಪಕ್ಷಗಳ ಹಾದಿಯಲ್ಲಿ ಸಮನ್ವಯದ ಅಡಿ ಸಾಗಬೇಕಾಗುತ್ತದೆ’ ಎಂದು ಸಲಹೆ ನೀಡಿದರು.

‘ವಿಶ್ವನಾಥ್‌ರ ಹೇಳಿಕೆಯನ್ನು ಆಳವಾಗಿ ವಿಶ್ಲೇಷಣೆ ಮಾಡಲ್ಲ. ಅವರ ಉದ್ದೇಶ ಏನೆಂದು ಅವರನ್ನೇ ಪ್ರಶ್ನಿಸಬೇಕು. ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಅಳಿವು- ಉಳಿವಿನ ಚರ್ಚೆಯ ಅಗತ್ಯವೂ ಇಲ್ಲ. ನಾವೆಲ್ಲಾ ಒಟ್ಟಾಗಿದ್ದೇವೆ. ಸರ್ಕಾರದಲ್ಲಿ 2 ಪಕ್ಷ ಇರುವುದರಿಂದ ಭಿನ್ನಾಭಿಪ್ರಾಯ ಸಹಜ. ಉಭಯ ಪಕ್ಷಗಳ ವರಿಷ್ಠರು ಇದನ್ನು ಬಗೆಹರಿಸುತ್ತಾರೆ’ ಎಂದು ಸ್ಪಷ್ಟಪಡಿಸಿದರು.

‘ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ಬದಲಾವಣೆ ಬಯಸಿದ್ದಾರೆ. ರಾಜಕೀಯವಾಗಿ ಖಂಡಿತ ಬದಲಾವಣೆ ಆಗುತ್ತದೆ. ಪ್ರತಿ ಪಕ್ಷಗಳ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಇದರಿಂದ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಅನುಕೂಲವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು