ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ

ಹೆಸರು ಸೇರ್ಪಡೆ–ತಿದ್ದುಪಡಿಗೆ ಅವಕಾಶ: ಜಿಲ್ಲಾಧಿಕಾರಿ ಸೆಲ್ವಮಣಿ ಹೇಳಿಕೆ
Last Updated 30 ಅಕ್ಟೋಬರ್ 2021, 13:36 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ನ.8ರಿಂದ ಡಿ.8ರವರೆಗೆ ಭಾವಚಿತ್ರವುಳ್ಳ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಹೆಸರು ತೆಗೆದು ಹಾಕುವುದು ಹಾಗೂ ತಿದ್ದುಪಡಿ ಮಾಡಲಾಗುತ್ತದೆ. ಮತದಾರರು ಇದರ ಸದುಪಯೋಗ ಪಡೆಯಬೇಕು’ ಎಂದು ಮನವಿ ಮಾಡಿದರು.

‘ಭಾವಚಿತ್ರವಿರುವ ಮತದಾರರ ಕರಡು ಪಟ್ಟಿಯನ್ನು ಎಲ್ಲಾ ತಾಲ್ಲೂಕುಗಳ ಮತಗಟ್ಟೆಗಳಲ್ಲಿ, ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ ಕಚೇರಿ, ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಪ್ರಕಟಿಸಲಾಗುತ್ತದೆ. ಸಾರ್ವಜನಿಕರು ವೋಟರ್‌ ಹೆಲ್ಪ್‌ಲೈನ್‌ ಆ್ಯಪ್‌ನಲ್ಲಿ ನಮೂನೆ 6, 7, 8 ಮತ್ತು 8ಎ ಅರ್ಜಿಗಳನ್ನು ಆನ್‌ಲೈನ್‌ ಮೂಲಕ ದಾಖಲೆಪತ್ರ ಸಮೇತ ಅಪ್‌ಲೋಡ್‌ ಮಾಡಬಹುದು. ನ.8ರಿಂದ ಡಿ.12ರವರೆಗೆ ಮತದಾರರು ಹಕ್ಕು ಮತ್ತು ಆಕ್ಷೇಪಣಾ ಅರ್ಜಿ ಸಲ್ಲಿಸಬಹುದು’ ಎಂದು ಹೇಳಿದರು.

‘ನ.7ರ ಸೇರಿದಂತೆ ನ.14, ನ.21, ನ.28ರ ಭಾನುವಾರದಂದು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. 2022ರ ಜ.13ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಈಗಾಗಲೇ ಮತಗಟ್ಟೆ ಹಂತದ ಅಧಿಕಾರಿಗಳನ್ನು ನೇಮಿಸಲಾಗಿದೆ. 18 ವರ್ಷ ತುಂಬಿದವರು, ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು, ತಿದ್ದುಪಡಿ ಮತ್ತು ಹೆಸರು ತೆಗೆಯುವ ಬಗ್ಗೆ ಅರ್ಜಿ ನೀಡಬಹುದು’ ಎಂದು ವಿವರಿಸಿದರು.

‘ಮತದಾರರು ಪರಿಷ್ಕರಣೆ ಅವಧಿಯಲ್ಲಿ ತಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ, ಇದ್ದಲ್ಲಿ ತಂದೆ, ತಾಯಿ, ಗಂಡನ ಹೆಸರು, ವಯಸ್ಸು, ಲಿಂಗ ಮತ್ತಿತರ ವಿವರಗಳ ಬಗ್ಗೆ ಪರಿಶೀಲಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. 18 ವರ್ಷ ಪೂರ್ಣಗೊಳ್ಳುವವರು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡದೆ ಇರುವವರು ನಮೂನೆ 6ರಲ್ಲಿ ಅರ್ಜಿ ಸಲ್ಲಿಸಬಹುದು’ ಎಂದು ಮಾಹಿತಿ ನೀಡಿದರು.

ದಾಖಲೆಪತ್ರ ನೀಡಬೇಕು: ‘ಇತರೆ ಪ್ರದೇಶಗಳಲ್ಲಿ ನೋಂದಣಿ ಆಗಿರುವವರು ಹಿಂದಿನ ವಾಸ ಸ್ಥಳದ ಬಗ್ಗೆ ನಮೂನೆ 6ರಲ್ಲಿ ಭಾಗ 4ರಲ್ಲಿರುವ ಘೋಷಣೆಯನ್ನು ಕಡ್ಡಾಯವಾಗಿ ಭರ್ತಿ ಮಾಡಿ ಸಹಿ ಮಾಡಬೇಕು. ಜತೆಗೆ ಹಿಂದಿನ ನೋಂದಣಿ ವಿವರ ನೀಡಬೇಕು. ನಮೂನೆ 6ರ ಜತೆ ಇತ್ತೀಚಿನ ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ, ವಯಸ್ಸಿನ ಹಾಗೂ ವಾಸ ಸ್ಥಳದ ದಾಖಲೆಪತ್ರ ನೀಡಬೇಕು’ ಎಂದು ಸೂಚಿಸಿದರು.

‘ಮತದಾರರ ಪಟ್ಟಿಯಲ್ಲಿನ ವಿವರ ತಪ್ಪಿದ್ದರೆ ನಮೂನೆ 8ರಲ್ಲಿ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬಹುದು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಮತ ಪ್ರದೇಶದ ವರ್ಗಾವಣೆ ಬಯಸುವವರು ನಮೂನೆ 8ಎರಲ್ಲಿ ಅರ್ಜಿ ಸಲ್ಲಿಸಿ ವರ್ಗಾವಣೆ ಅವಕಾಶ ಪಡೆಯಬಹುದು. ಆದರೆ, 2 ಕಡೆ ಗುರುತಿನ ಚೀಟಿ ಹೊಂದಿದ್ದರೆ ಶಿಕ್ಷಾರ್ಹ ಅಪರಾಧ’ ಎಂದು ಎಚ್ಚರಿಕೆ ನೀಡಿದರು.

‘ಭಾರತ ಚುನಾವಣಾ ಆಯೋಗವು www.voterreg.kar.nic.in ಹಾಗೂ www.nvsp.in ವೆಬ್‌ಸೈಟ್‌ ವಿಳಾಸದ ಮೂಲಕ ನಮೂನೆ 6, 7, 8 ಮತ್ತು 8ಎ ಅರ್ಜಿಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿದೆ. ಆಯೋಗವು ನಿಗದಿಪಡಿಸಿರುವ ದಾಖಲೆಪತ್ರಗಳನ್ನು ಆನ್‌ಲೈನ್‌ಲ್ಲಿ ಅಡಕ ಮಾಡಿ ಹೆಸರು ನೋಂದಾಯಿಸಬಹುದು’ ಎಂದರು.

1,593 ಮತಗಟ್ಟೆ: ‘ಹುಟ್ಟಿದ ದಿನಾಂಕದ ದೃಢೀಕರಣಕ್ಕೆ ಜನನ ಪ್ರಮಾಣಪತ್ರ, ಆಧಾರ್‌ ಕಾರ್ಡ್‌, ಪಾನ್‌ಕಾರ್ಡ್, ಚಾಲನಾ ಪರವಾನಗಿ (ಡಿ.ಎಲ್‌), ಎಸ್ಸೆಸ್ಸೆಲ್ಸಿ ಅಥವಾ ದ್ವಿತೀಯ ಪಿಯುಸಿ ಅಂಕಪಟ್ಟಿ, ಪಾಸ್‌ಪೋರ್ಟ್‌ ಪೈಕಿ ಯಾವುದಾದರೂ ಒಂದನ್ನು ಸಲ್ಲಿಸಬಹುದು. ಮನೆ ವಿಳಾಸದ ಖಾತ್ರಿಗೆ ನೀರು, ವಿದ್ಯುತ್, ಗ್ಯಾಸ್ ಸಂಪರ್ಕದ ಬಿಲ್, ಆಧಾರ್ ಕಾರ್ಡ್, ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್‌ಬುಕ್ ಅಥವಾ ಪೋಸ್ಟ್ ಆಫೀಸ್ ಪುಸ್ತಕ, ಪಾಸ್‌ಪೋರ್ಟ್‌, ನೋಂದಾಯಿತ ಬಾಡಿಗೆ ಕರಾರುಪತ್ರ ಸಲ್ಲಿಸಬಹುದು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ 1,593 ಮತಗಟ್ಟೆಗಳು ಮತ್ತು 12,32,032 ಮತದಾರರು ಇದ್ದಾರೆ. ಈ ಪೈಕಿ 6,14,892 ಮಂದಿ ಪುರುಷ, 6,17,001 ಮಂದಿ ಮಹಿಳಾ ಹಾಗೂ 139 ಇತರೆ ಮತದಾರರುಇದ್ದಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT