ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ನಗರ ಅನೈರ್ಮಲ್ಯ; ಡಿ.ಸಿ ಕೆಂಡಾಮಂಡಲ

ನಾಗರಿಕರಿಂದ ದೂರು ಬಂದಲ್ಲಿ ಕಠಿಣ ಕ್ರಮ: ನಗರಸಭೆ ಅಧಿಕಾರಿಗಳಿಗೆ ಅಕ್ರಂ ಪಾಷ ಎಚ್ಚರಿಕೆ
Published 12 ಜುಲೈ 2023, 14:14 IST
Last Updated 12 ಜುಲೈ 2023, 14:14 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾಧಿಕಾರಿ ಅಕ್ರಂ ಪಾಷ ಮಂಗಳವಾರ ಬೆಳ್ಳಂಬೆಳಿಗ್ಗೆ ನಗರ ಪ್ರದಕ್ಷಿಣೆ ನಡೆಸಿ ಸ್ವಚ್ಛತೆ ಪರಿಶೀಲಿಸಿದರು. ರಸ್ತೆ ಬದಿಗಳಲ್ಲಿ ಅನೈರ್ಮಲ್ಯ, ಕಾಲುವೆಗಳಲ್ಲಿ ಕಸದ ರಾಶಿ ಕಂಡು ಕೆಂಡಮಂಡಲವಾದರು.

‌‘ದಿನವೂ ಸ್ವಚ್ಛತಾ ಕಾರ್ಯ ಕೈಗೊಳ್ಳುವುದಿಲ್ಲವೇ? ಎಷ್ಟು ದಿನಗಳಿಗೊಮ್ಮೆ ಕಸ ವಿಲೇವಾರಿ ಮಾಡುತ್ತೀರಿ ? ದಿನವು ವಾರ್ಡ್‍ಗಳಿಗೆ ಭೇಟಿ ನೀಡಿ ಕಾರ್ಮಿಕರು ಮಾಡುವ ಸ್ವಚ್ಛತಾ ಕೆಲಸ ಪರಿಶೀಲಿಸುವುದಿಲ್ಲವೇ? ಮೇಸ್ತ್ರಿಗಳು ಏನು ಮಾಡುತ್ತಿರುತ್ತಾರೆ’ ಎಂದು ಅವರು ನಗರಸಭೆ ಆಯುಕ್ತ ಶಿವಾನಂದ ಅವರನ್ನು ಪ್ರಶ್ನಿಸಿದರು.

ಇತರ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೂಡಲೇ ರಸ್ತೆ ಬದಿಯಲ್ಲಿರುವ ಕಸದ ರಾಶಿ ತೆರವುಗೊಳಿಸುವಂತೆ ಸೂಚನೆ ನೀಡಿದರು.

ಇಟಿಸಿಎಂ ಮುಂಭಾಗದಲ್ಲಿರುವ ರಾಜಕಾಲುವೆಯು ನಗರದ ಕೊಳಕನ್ನು ಕೆರೆಗೆ ಸೇರಿಸುವುದರ ಜೊತೆಗೆ ಕಸ ತುಂಬಿಕೊಂಡು ಸೊಳ್ಳೆಗಳ ಆವಾಸ ಸ್ಥಾನವಾಗಿರುವುದರ ಕುರಿತು ಪರಿಶೀಲಿಸಿ ಸ್ವಚ್ಛಗೊಳಿಸಲು ಸೂಚಿಸಿದರು.

ನಗರದ ಟೇಕಲ್ ರಸ್ತೆಯ ರೈಲ್ವೆ ಮಾರ್ಗದ ಬಳಿ, ರಸ್ತೆ ಬದಿಗಳಲ್ಲಿ, ಚರಂಡಿಯಲ್ಲಿ ಕಸದ ರಾಶಿ ತುಂಬಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದ ಅವರು, ‘ಚರಂಡಿ ಸ್ವಚ್ಛತೆ ಕಾಪಾಡದಿದ್ದರೆ ಕೊಳಚೆ ನೀರು ಹೇಗೆ ಹರಿಯುತ್ತದೆ‌? ಚರಂಡಿಗಳಲ್ಲಿ ನೀರು ನಿಂತರೆ ಸೊಳ್ಳೆಗಳು ಹೆಚ್ಚಾಗಿ ನಗರದಲ್ಲಿ ರೋಗ ಹರಡುವಿಕೆಗೆ ಕಾರಣವಾಗುತ್ತದೆ’ ಎಂದರು.

ಈ ಸಂಬಂಧ ಆರೋಗ್ಯಾಧಿಕಾರಿಯನ್ನು ಪ್ರಶ್ನಿಸಿ, ‘ಇನ್ನು ಮುಂದಾದರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ತಾಕೀತು ಮಾಡಿದರು.

ಟೀಕಲ್ ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ಮಕ್ಕಳ ಉದ್ಯಾನ‌ಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉದ್ಯಾನದ ಮುಂದೆ ತಾತ್ಕಾಲಿಕ ಅಂಗಡಿಗಳವರು ರಸ್ತೆ ಬದಿಯಲ್ಲಿ ಹಾಕಿದ್ದ ಕಸದ ರಾಶಿ ಕಂಡು, ‘ಇಲ್ಲಿ ಹೇಳುವವರು ಕೇಳುವವರು ಇಲ್ಲವೇ, ಸಾರ್ವಜನಿಕರು ರಸ್ತೆಗಳಲ್ಲಿ ಸಂಚರಿಸುವುದು’ ಹೇಗೆ ಎಂದು ಪ್ರಶ್ನಿಸಿದರು.

‘ಈ ಭಾಗದಲ್ಲಿ ಶಾಲೆ ಇದೆ. ಪಾರ್ಕ್ ಇದೆ. ಜನ ಹೆಚ್ಚು ತಿರುಗಾಡುವ ರಸ್ತೆಗಳಲ್ಲಿ ಈ ರೀತಿ ಅವ್ಯವಸ್ಥೆ ಇದ್ದರೆ ಹೇಗೆ? ಮೊದಲು ಸ್ವಚ್ಛ ಮಾಡಿ, ಇದೇ ರೀತಿ ಕಸದ ರಾಶಿ ಅಂಗಡಿಗಳ ಮುಂದೆ ಕಂಡರೆ ಅಂಥ ಅಂಗಡಿಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿ’ ಎಂದು ಸಿಬ್ಬಂದಿಗೆ ನಿರ್ದೇಶಿಸಿದರು.

‘ಉದ್ಯಾನದ ಒಳಗಿರುವ ಶೌಚಾಲಯಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸಬೇಕು. ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಶುದ್ಧ ಕುಡಿಯುವ ಘಟಕಕ್ಕೆ ರಾತ್ರಿ ವೇಳೆ ಬೀಗ ಹಾಕಿ. ಹಾಳಾಗಿರುವ ಪರಿಕರಗಳನ್ನು ಸರಿಪಡಿಸಬೇಕು. ದೀಪಗಳ ವ್ಯವಸ್ಥೆ ಸಮರ್ಪಕವಾಗಿರಬೇಕು. ಹೂವಿನ ಗಿಡಗಳನ್ನು ಹೆಚ್ಚಾಗಿ ಬೆಳೆಸಬೇಕು. ಸೈಕ್ಲಿಂಗ್ ಯಂತ್ರವನ್ನು ದುರಸ್ತಿ ಮಾಡಿಸಿ, ಉದ್ಯಾನದ ಗ್ರೀಲ್‍ಗಳಿಗೆ ಮುಂದಿನ ದಿನಗಳಲ್ಲಿ ಯಾವುದೇ ಫ್ಲೆಕ್ಸ್‌ ಹಾಕದಂತೆ ಕ್ರಮಕೈಗೊಳ್ಳಿ. ಇದರಿಂದ ಉದ್ಯಾನದ ಸೌಂದರ್ಯ ಹಾಳಾಗಲಿದೆ’ ಹೇಳಿದರು.

ರೈಲ್ವೆ ಹಳಿ ಸಮೀಪದಲ್ಲಿ ಹಾದು ಹೋಗಿರುವ ರಾಜಕಾಲುವೆಗಳಲ್ಲಿ ತುಂಬಿರುವ ತ್ಯಾಜ್ಯದ ರಾಶಿ ಹಾಗೂ ಗಿಡಗಂಟೆಗಳನ್ನು ಕಂಡು ಸಿಟ್ಟಾದರು. ‘ಮೊದಲು ಗಿಡಗಳನ್ನು ತೆರವುಗೊಳಿಸಿ ಮಳೆ ನೀರು ಕೆರೆಗೆ ಸರಾಗವಾಗಿ ಹರಿಯುವಂತೆ ಮಾಡಬೇಕು’ ಸೂಚಿಸಿದರು.

‘ನಗರದಲ್ಲಿ ಬೀದಿ ದೀಪ, ಕುಡಿಯುವ ನೀರು ಸೇರಿದಂತೆ ಯಾವುದೇ ದೂರು ಬಾರದಂತೆ ಕ್ರಮ ವಹಿಸಬೇಕು’ ಎಂದರು.

ನಗರದ ಗಡಿಯಾರ ಗೋಪುರ ವೃತ್ತವನ್ನು ಹಾದು ಬಂದು ಅಂತರಗಂಗೆ ರಸ್ತೆಯ ಸಂಪೂರ್ಣ ಹಾಳಾಗಿರುವುದನ್ನು ಪರಿಶೀಲಿಸಿದರು. ಇಡೀ ರಸ್ತೆಗೆ ಡಾಂಬರೀಕರಣ ಮಾಡಬೇಕು ಎಂದು ಸೂಚಿಸಿದರು.

ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಖಲೀಲ್‌, ಕಂದಾಯ ಅಧಿಕಾರಿಗಳಾದ ಅನಿಲ್, ಮಾನೆ, ಎಂಜನಿಯರ್ ರಾಜಗೋಪಾಲ್, ಆರೋಗ್ಯಾಧಿಕಾರಿ ಇದ್ದರು.

ಕೋಲಾರ ನಗರದ ವಸತಿ ಪ್ರದೇಶದಲ್ಲಿ ಕಾಲುವೆಯಲ್ಲಿ ತ್ಯಾಜ್ಯ ತುಂಬಿಕೊಂಡಿರುವುದನ್ನು ವೀಕ್ಷಿಸಿದ ಜಿಲ್ಲಾಧಿಕಾರಿ 
ಕೋಲಾರ ನಗರದ ವಸತಿ ಪ್ರದೇಶದಲ್ಲಿ ಕಾಲುವೆಯಲ್ಲಿ ತ್ಯಾಜ್ಯ ತುಂಬಿಕೊಂಡಿರುವುದನ್ನು ವೀಕ್ಷಿಸಿದ ಜಿಲ್ಲಾಧಿಕಾರಿ 
ಕಾಲುವೆಯಲ್ಲಿ ತ್ಯಾಜ್ಯ ತುಂಬಿಕೊಂಡಿರುವುದನ್ನು ವೀಕ್ಷಿಸಿದ ಜಿಲ್ಲಾಧಿಕಾರಿ
ಕಾಲುವೆಯಲ್ಲಿ ತ್ಯಾಜ್ಯ ತುಂಬಿಕೊಂಡಿರುವುದನ್ನು ವೀಕ್ಷಿಸಿದ ಜಿಲ್ಲಾಧಿಕಾರಿ

ಬೆಳ್ಳಂಬೆಳಿಗ್ಗೆ ವಿವಿಧ ‌ವಾರ್ಡ್‌ಗಳಿಗೆ ಭೇಟಿ ನಗರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ತಾಕೀತು ನಗರಸಭೆ ಆಯುಕ್ತ ಶಿವಾನಂದಗೆ ಸೂಚನೆ

ಸಾರ್ವಜನಿಕರಿಗೆ ಮೂಲ ಸೌಲಭ್ಯ ಕಲ್ಪಿಸಬೇಕಾಗಿರುವುದು ನಗರಸಭೆಯ ಜವಾಬ್ದಾರಿ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ದೂರು ಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಅಕ್ರಂ ಪಾಷ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT