ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡವಿಗೆ ತಟ್ಟಿದ ಜಲಕ್ಷಾಮದ ಬಿಸಿ

ಬತ್ತಿದ ಜೀವಸೆಲೆ: ಜಿಲ್ಲೆಯಲ್ಲಿ ಪ್ರಾಣಿ ಪಕ್ಷಿ ಸಂಕುಲದ ಮೂಕವೇದನೆ
Last Updated 26 ಮೇ 2020, 1:21 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಅರಣ್ಯ ಪ್ರದೇಶದಲ್ಲಿನ ಜೀವ ಸಂಕುಲಕ್ಕೂ ಬರದ ಬಿಸಿ ತಟ್ಟಿದ್ದು, ಪ್ರಾಣಿ ಪಕ್ಷಿಗಳು ಆಹಾರ ಮತ್ತು ಕುಡಿಯುವ ನೀರಿಗಾಗಿ ಮೂಕವೇದನೆ ಪಡುತ್ತಿವೆ. ಅಡವಿಯ ಹಳ್ಳ ಕೊಳ್ಳಗಳಲ್ಲಿ ಜೀವಸೆಲೆ ಬತ್ತಿದ್ದು, ಪ್ರಾಣಿ ಪಕ್ಷಿ ಸಂಕುಲದ ಗೋಳು ಹೇಳತೀರದು.

ಜಿಲ್ಲೆಯಲ್ಲಿ ಸುಮಾರು 50 ಹೆಕ್ಟೇರ್‌ ಅರಣ್ಯ ಪ್ರದೇಶವಿದೆ. ನೀರು, ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುತ್ತಿರುವ ಪ್ರಾಣಿಗಳು ಆಕಸ್ಮಿಕವಾಗಿ ವಾಹನಗಳಿಗೆ ಸಿಲುಕಿ ಮೃತಪಡುತ್ತಿವೆ. ಮತ್ತೊಂದೆಡೆ ನಾಯಿಗಳು ನಾಡಿಗೆ ಬರುವ ಜಿಂಕೆ, ಕೃಷ್ಣಮೃಗದಂತಹ ಪ್ರಾಣಿಗಳನ್ನು ಹಿಡಿದು ತಿನ್ನುತ್ತಿವೆ.

ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ, ಬೇತಮಂಗಲ ಮತ್ತು ಬಡಮಾಕನಹಳ್ಳಿ, ಕೋಲಾರ ತಾಲ್ಲೂಕಿನ ಹರಟಿ, ಹೊತ್ತೂರು ಮತ್ತು ಹೊಳಲಿ ಹೊಸೂರು, ಮಾಲೂರು ತಾಲ್ಲೂಕಿನ ಎಸ್‌.ಕೆ.ಹೊಸಳ್ಳಿ, ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಮತ್ತು ಅಡ್ಡಗಲ್‌ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಕೃಷ್ಣಮೃಗ ಹಾಗೂ ಜಿಂಕೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಅರಣ್ಯ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಸುಮಾರು 1,500 ಕೃಷ್ಣಮೃಗಗಳು ಹಾಗೂ 4 ಸಾವಿರ ಜಿಂಕೆಗಳಿವೆ. ಅರಣ್ಯ ಪ್ರದೇಶದಲ್ಲಿ ಸದ್ದಿಲ್ಲದೆ ಬೇಟೆಗಾರರ ಹಾವಳಿ ಶುರುವಾಗಿದೆ. ಅರಣ್ಯ ಪ್ರದೇಶದ ಸುತ್ತಮುತ್ತ ಬೇಟೆಗಾರರು ರಾತ್ರಿ ವೇಳೆ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ.

ತೊಟ್ಟಿ ನಿರ್ಮಾಣ: ಬೇಸಿಗೆ ಕಾರಣಕ್ಕೆ ಅರಣ್ಯ ಪ್ರದೇಶದಲ್ಲಿನ ಹಳ್ಳ, ಹೊಂಡಗಳಲ್ಲಿ ನೀರು ಬತ್ತಿದೆ. ಹೀಗಾಗಿ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಸಿಮೆಂಟ್‌ ತೊಟ್ಟಿಗಳನ್ನು ನಿರ್ಮಿಸಿ ಅವುಗಳಿಗೆ ಟ್ಯಾಂಕರ್‌ ನೀರು ತುಂಬಿಸುತ್ತಿದ್ದಾರೆ. ಆದರೂ ಕಾಡು ಪ್ರಾಣಿಗಳು ನೀರು ಅರಸಿ ಅರಣ್ಯದಂಚಿನ ಕೃಷಿ ಜಮೀನು, ಗ್ರಾಮಗಳಿಗೆ ಬರುತ್ತಿವೆ.

ಕೆಜಿಎಫ್‌ ಹೊರವಲಯದ ಕೃಷ್ಣವರಂ, ಡಿ.ಕೆ ಪ್ಲಾಂಟೇಷನ್‌, ಬೆಮಲ್‌ ನಗರ, ಪಾಲ್‌ಘಾಟ್‌ ಸುತ್ತಮುತ್ತ ಕಳೆದ ಒಂದು ತಿಂಗಳಲ್ಲಿ 5 ಕೃಷ್ಣಮೃಗ ಮೃತಪಟ್ಟಿವೆ. ಆಹಾರ ಹಾಗೂ ನೀರು ಅರಸಿ ಬಂದಿದ್ದ ಕೃಷ್ಣಮೃಗಗಳನ್ನು ಬೀದಿ ನಾಯಿಗಳು ಬೇಟೆಯಾಡಿವೆ.

ದಟ್ಟ ಕಾಡಿನ ಭಯ: ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸೌದೆಗಾಗಿ ಮರ ಕಡಿಯುವವರ ಸಂಖ್ಯೆ ಕಡಿಮೆಯಾಗಿದ್ದು, ಕಾಡುಗಳಲ್ಲಿ ಮರ ಗಿಡಗಳು ದಟ್ಟವಾಗಿ ಬೆಳೆದಿವೆ. ಸಾಮಾನ್ಯವಾಗಿ ಬಯಲು ಪ್ರದೇಶದಲ್ಲಿ ವಾಸಿಸ ಬಯಸುವ ಕೃಷ್ಣಮೃಗಗಳು ದಟ್ಟ ಕಾಡು ಬಿಟ್ಟು ನಾಡಿಗೆ ಬರುತ್ತಿವೆ. ಅವು ಕಾಡು ದಟ್ಟವಾಗಿರುವ ಕಡೆ ವಾಸ ಮಾಡಲು ಭಯಪಡುತ್ತವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಅರಣ್ಯದಂಚಿನ ಗ್ರಾಮಗಳ ಸುತ್ತಮುತ್ತ ಹೆಚ್ಚಾಗಿ ಬೆಳೆದಿರುವ ಅಕೇಶಿಯಾ ಗಿಡಗಳನ್ನು ತಿನ್ನಲು ಕೃಷ್ಣಮೃಗ ಮತ್ತು ಜಿಂಕೆಗಳು ಕಾಡು ಬಿಟ್ಟು ಬರುತ್ತಿವೆ. ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ನೀರಿನ ಮೂಲಗಳೇ ಇಲ್ಲದಂತಾಗಿದೆ. ಹೀಗಾಗಿ ಕೃಷ್ಣಮೃಗ ಮತ್ತು ಜಿಂಕೆಗಳು ನೀರು ಕುಡಿಯಲು ಕಾಡಿನಂಚಿನ ಕೃಷಿ ಜಮೀನುಗಳಿಗೆ ಬರುತ್ತಿವೆ. ಇದೇ ರೀತಿ ನವಿಲುಗಳೂ ಬರುತ್ತಿವೆ. ಜಲಕ್ಷಾಮದಿಂದ ನಲುಗಿರುವ ಕಾಡು ಪ್ರಾಣಿಗಳಿಗೆ ಅಡವಿ ಮತ್ತು ನಾಡು ಎರಡೂ ಸುರಕ್ಷಿತವಲ್ಲ ಎಂಬಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT