ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮೂಲ ಸಂರಕ್ಷಣೆ ಎಲ್ಲರ ಜವಾಬ್ದಾರಿ: ಸಂಸದ ಮುನಿಸ್ವಾಮಿ

Last Updated 1 ಜುಲೈ 2021, 5:03 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಸಾಂಘಿಕ ಪ್ರಯತ್ನದ ಮೂಲಕ ಕಲ್ಯಾಣಿಗಳ ಅಭಿವೃದ್ಧಿ ಮಾಡಬೇಕು. ಅಂತರ್ಜಲ ವೃದ್ಧಿಪಡಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು.

ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಬುಧವಾರ ಸ್ವಚ್ಛ ಭಾರತ ಯೋಜನೆಯಡಿ ಹಮ್ಮಿಕೊಳ್ಳಲಾಗಿದ್ದ ಕಲ್ಯಾಣಿ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಲಮೂಲಗಳ ಸಂರಕ್ಷಣೆ ಎಲ್ಲರ ಹೊಣೆ. ಸಮಾಜದ ಎಲ್ಲ ವರ್ಗದ ಜನರೂ ಸ್ವಯಂ ಸ್ಫೂರ್ತಿಯಿಂದ ಶ್ರಮದಾನದಲ್ಲಿ ಭಾಗವಹಿಸಬೇಕು. ಪರಿಸರ ಸಂರಕ್ಷಣೆ ಮಾಡಿದಲ್ಲಿ ಪರಿಸರ ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರು.

ಜಲಮೂಲಗಳ ಅಭಿವೃದ್ಧಿ ಯಾವುದೇ ಒಂದು ಸಮುದಾಯ ಅಥವಾ ಒಂದು ಪಕ್ಷಕ್ಕೆ ಸೀಮಿತವಾದ ಕಾರ್ಯಕ್ರಮವಲ್ಲ. ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಜಿಲ್ಲೆಯಲ್ಲಿ ಕನಿಷ್ಠ ತಿಂಗಳಿಗೊಂದು ಕಲ್ಯಾಣಿಯನ್ನು ಸ್ವಚ್ಛಗೊಳಿಸಲಾಗುವುದು. ಕೆರೆಕುಂಟೆಗಳ ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಯಲ್ದೂರು ಗ್ರಾಮದ ಐತಿಹಾಸಿಕ ಕಲ್ಯಾಣಿಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲಾಗುವುದು. ಈ ವಿಶಾಲವಾದ ಕಲ್ಯಾಣಿಯ ಸುತ್ತ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಕಲ್ಯಾಣಿಯನ್ನು ಮಾಲಿನ್ಯಗೊಳಿಸುವುದನ್ನು ತಪ್ಪಿಸುವ ಉದ್ದೇಶದಿಂದ ಸುತ್ತಲೂ ಮುಳ್ಳು ತಂತಿಬೇಲಿ ನಿರ್ಮಿಸಲಾಗುವುದು. ಸುತ್ತಲೂ ಗಿಡ ಮರ ಬೆಳೆಸಲಾಗುವುದು ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ.ಕೆ.ಎನ್. ವೇಣುಗೋಪಾಲ್ ಮಾತನಾಡಿ, ಬದಲಾದ ಪರಿಸ್ಥಿತಿಯಲ್ಲಿ ಗ್ರಾಮೀಣ ಪರಿಸರವೂ ಮಾಲಿನ್ಯಗೊಂಡಿದೆ. ಬೇರೆ ಬೇರೆ ಕಾರಣಗಳಿಂದ ಕೆರೆ, ಕುಂಟೆ, ಕಲ್ಯಾಣಿಗಳು ಬಳಕೆಗೆ ಯೋಗ್ಯವಾಗಿಲ್ಲ. ಇದನ್ನು ತಡೆಯಲು ಅಗತ್ಯ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಜನರ ಆರೋಗ್ಯ ಪರಿಸ್ಥಿತಿ ಹದಗೆಡುತ್ತದೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಫಲವಾಗಿ ಸ್ವಚ್ಛ ಭಾರತ ಅಭಿಯಾನವನ್ನು ಜಾರಿಗೆ ತರಲಾಗಿದೆ. ಇದರಿಂದ ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ತಡೆ ಸಾಧ್ಯವಾಗುತ್ತಿದೆ. ಲಕ್ಷಾಂತರ ಜನರು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವಚ್ಛತೆ ಪಾಲನೆ ಅಗತ್ಯ ಕುರಿತಾದ ತಿಳಿವಳಿಕೆ ಮೂಡುತ್ತಿದೆ. ಇದು ಒಂದು ಮೈಲುಗಲ್ಲಾಗಿದೆ ಎಂದು ಹೇಳಿದರು.

ತಹಶೀಲ್ದಾರ್ ಎಸ್.ಎಂ. ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಸ್. ಆನಂದ್, ಬಿಇಒ ಉಮಾದೇವಿ, ಪೊಲೀಸ್ ಇನ್‌ಸ್ಪೆಕ್ಟರ್ ಸಿ. ರವಿಕುಮಾರ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎ. ಅಶೋಕರೆಡ್ಡಿ, ನಮ್ಮೂರು ಟ್ರಸ್ಟ್ ಅಧ್ಯಕ್ಷ ರವೀಂದ್ರಯ್ಯ ಕುಲಕರ್ಣಿ, ರೋಟರಿ ಸಂಸ್ಥೆ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ಟಿ. ನಾರಾಯಣಸ್ವಾಮಿ, ಕೆ. ದಿವಾಕರ್, ನಾರಾಯಣಸ್ವಾಮಿ, ಶ್ರೀನಿವಾಸರೆಡ್ಡಿ, ರಾಮಾಂಜಿ ಆರ್.ಐ. ವಿನೋದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT