ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಂತ್ಯದ ಲಾಕ್‌ಡೌನ್‌: ಜಿಲ್ಲೆ ಸ್ತಬ್ಧ

ಕೋವಿಡ್‌ ವಿರುದ್ಧದ ಹೋರಾಟಕ್ಕೆ ಜನರ ಸಕಾರಾತ್ಮಕ ಸ್ಪಂದನೆ
Last Updated 5 ಜೂನ್ 2021, 12:01 IST
ಅಕ್ಷರ ಗಾತ್ರ

ಕೋಲಾರ: ಕೋವಿಡ್‌ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಜಾರಿಗೊಳಿಸಿರುವ ವಾರಾಂತ್ಯದ ಸಂಪೂರ್ಣ ಲಾಕ್‌ಡೌನ್‌ ಆದೇಶಕ್ಕೆ ಶನಿವಾರ ಇಡೀ ಜಿಲ್ಲೆ ಸ್ತಬ್ಧವಾಯಿತು.

ಜಿಲ್ಲಾಡಳಿತದ ಆದೇಶದಂತೆ ಪೆಟ್ರೋಲ್‌ ಬಂಕ್‌ಗಳು ಹಾಗೂ ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡವು. ವರ್ತಕರು ಸ್ವಇಚ್ಛೆಯಿಂದ ಅಂಗಡಿಗಳನ್ನು ಮುಚ್ಚಿ ಕೋವಿಡ್‌ ವಿರುದ್ಧದ ಹೋರಾಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಮಾತ್ರ ಹಾಲು ಮಾರಾಟ ಮಳಿಗೆಗಳು ತೆರೆದಿದ್ದವು.

ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ಜನರು ಮನೆಗಳಲ್ಲೇ ಉಳಿದು ಲಾಕ್‌ಡೌನ್‌ಗೆ ಬೆಂಬಲ ಸೂಚಿಸಿದರು. ಸಂಪೂರ್ಣ ಲಾಕ್‌ಡೌನ್‌ ಹಿನ್ನೆಲೆಯಲ್ಲಿ 2 ದಿನಕ್ಕೆ ಬೇಕಾಗುವಷ್ಟು ದಿನಸಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಮುಂಚಿತವಾಗಿ ಖರೀದಿಸಿದ್ದ ಜನರು ಮನೆಯಿಂದ ಹೊರಬರುವ ಪ್ರಯತ್ನ ಮಾಡಲಿಲ್ಲ.

ಕೆಎಸ್‌ಆರ್‌ಟಿಸಿ ಬಸ್‌, ಆಟೊಗಳು ಹಾಗೂ ಸರಕು ಸಾಗಣೆ ವಾಹನಗಳು ರಸ್ತೆಗೆ ಇಳಿಯಲೇ ಇಲ್ಲ. ರೈಲು ನಿಲ್ದಾಣಗಳು, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದವು. ಸದಾ ಜನಜಂಗುಳಿ ಹಾಗೂ ವಾಹನ ದಟ್ಟಣೆಯಿಂದ ಗಿಜಿಗುಡುತ್ತಿದ್ದ ಮಾರುಕಟ್ಟೆಗಳು, ವಾಣಿಜ್ಯ ಪ್ರದೇಶಗಳು ಹಾಗೂ ರಸ್ತೆಗಳು ಭಣಗುಡುತ್ತಿದ್ದವು. ಎಪಿಎಂಸಿಗಳು ಹಾಗೂ ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ 10ರವರೆಗೆ ಮಾತ್ರ ವಹಿವಾಟಿಗೆ ಅವಕಾಶ ನೀಡಲಾಯಿತು.

ಸಲೂನ್‌, ಬಾರ್‌, ರೆಸ್ಟೋರೆಂಟ್‌, ಬೇಕರಿ, ತಂಪು ಪಾನೀಯ ಅಂಗಡಿಗಳು, ಐಸ್‌ಕ್ರೀಮ್‌, ಚಾಟ್ಸ್‌ ಮಾರಾಟ ಮಳಿಗೆಗಳನ್ನು ಬಂದ್‌ ಮಾಡಲಾಗಿತ್ತು. ಪೆಟ್ರೋಲ್‌ ಬಂಕ್‌ಗಳು ತೆರೆದಿದ್ದರೂ ಗ್ರಾಹಕರ ಸಂಖ್ಯೆ ಕಡಿಮೆಯಿತ್ತು. ಹೋಟೆಲ್‌ ಮತ್ತು ಇಂದಿರಾ ಕ್ಯಾಂಟೀನ್‌ಗಳಲ್ಲಿ ಪಾರ್ಸೆಲ್‌ ಸೇವೆ ಮಾತ್ರ ಲಭ್ಯವಿತ್ತು. ಔಷಧ ಮಾರಾಟ ಮಳಿಗೆಗಳು ಎಂದಿನಂತೆ ತೆರೆದಿದ್ದವು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸೇವೆ ಒದಗಿಸಿದವು.

ಬ್ಯಾಂಕ್‌ ಬಂದ್‌: ಬ್ಯಾಂಕ್‌, ಅಂಚೆ ಕಚೇರಿಗಳು ಇಡೀ ದಿನ ಬಂದ್‌ ಆದವು. ಸರ್ಕಾರಿ ಕಚೇರಿಗಳು ತೆರೆದರೂ ಕೋವಿಡ್‌ ಮಾರ್ಗಸೂಚಿಯಂತೆ ಶೇ 50ರಷ್ಟು ಸಿಬ್ಬಂದಿಯೊಂದಿಗೆ ದೈನಂದಿನ ಕಾರ್ಯ ಚಟುವಟಿಕೆ ನಿರ್ವಹಿಸಲಾಯಿತು. ಆದರೆ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಕಚೇರಿಗಳಲ್ಲಿ ಸಾರ್ವಜನಿಕರ ಸಂಖ್ಯೆ ಕಡಿಮೆಯಿತ್ತು.

ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ಪಾರ್ಸೆಲ್‌ಗೆ ಸರ್ಕಾರ ಅವಕಾಶ ನೀಡಿದೆಯಾದರೂ ಮಾಲೀಕರು ಹೋಟೆಲ್‌ಗಳ ಬಾಗಿಲು ತೆರೆಯುವ ಮನಸ್ಸು ಮಾಡಲಿಲ್ಲ. ರಸ್ತೆ ಬದಿಯ ಫಾಸ್ಟ್‌ಫುಡ್‌, ಪೆಟ್ಟಿಗೆ ಅಂಗಡಿಗಳು ಬಂದ್‌ ಆಗಿದ್ದರಿಂದ ಜನರಿಗೆ ಟೀ, ಕಾಫಿ ಸಹ ಸಿಗಲಿಲ್ಲ. ಹೀಗಾಗಿ ಜನಜೀವನಕ್ಕೆ ತೀವ್ರ ತೊಂದರೆಯಾಯಿತು. ಹೋಟೆಲ್‌ಗಳ ಮೇಲೆ ಅವಲಂಬಿತರಾದ ಕೂಲಿ ಕಾರ್ಮಿಕರು ಹಾಗೂ ಗ್ರಾಹಕರು ಊಟ, ತಿಂಡಿಗಾಗಿ ಅಲೆದಾಡಿದರು.

ಪೊಲೀಸ್‌ ಬಂದೋಬಸ್ತ್‌: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲೆಡೆ ಪೊಲೀಸ್ ಗಸ್ತು ಹೆಚ್ಚಿಸಲಾಗಿತ್ತು. ಆಯಕಟ್ಟಿನ ಸ್ಥಳಗಳು, ವಾಣಿಜ್ಯ ಪ್ರದೇಶಗಳು, ಧಾರ್ಮಿಕ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳು ನಿಯಮಿತವಾಗಿ ಗಸ್ತು ನಡೆಸಿದರು. ಅಲ್ಲದೇ, ರಸ್ತೆಗಳಿಗೆ ಬ್ಯಾರಿಕೇಡ್‌ ಹಾಕಿ ವಾಹನ ಸಂಚಾರ ನಿರ್ಬಂಧಿಸಿದರು.

ಜಿಲ್ಲೆಯ ಹಲವೆಡೆ ಕೆಲ ಜನರು ಲಾಕ್‌ಡೌನ್‌ ಆದೇಶ ಲೆಕ್ಕಿಸದೆ ರಸ್ತೆಗಿಳಿದರು. ಲಾಕ್‌ಡೌನ್‌ ಲೆಕ್ಕಿಸದೆ ಬೈಕ್‌ ಹಾಗೂ ಕಾರುಗಳಲ್ಲಿ ಸಂಚರಿಸುತ್ತಿದ್ದ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಮತ್ತೆ ಕೆಲವೆಡೆ ಪೊಲೀಸರು ಮಾರ್ಗ ಮಧ್ಯೆಯೇ ವಾಹನಗಳನ್ನು ಜಪ್ತಿ ಮಾಡಿ ದಂಡ ವಿಧಿಸಿದರು. ಆಟೊ ಚಾಲಕರನ್ನು ಕೆಳಗಿಳಿಸಿ ವಾಹನ ವಶಕ್ಕೆ ಪಡೆದರು. ಆದರೂ ಕೆಲ ಮಂದಿ ಮನೆಯಿಂದ ಹೊರ ಬಂದು ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT