ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರು ಡಿಸಿಸಿ ಬ್ಯಾಂಕ್‌ಗೆ ಆಧಾರಸ್ತಂಭ: ಮಾಜಿ ಶಾಸಕ ಶ್ರೀನಿವಾಸಯ್ಯ

Last Updated 11 ಅಕ್ಟೋಬರ್ 2021, 13:13 IST
ಅಕ್ಷರ ಗಾತ್ರ

ಕೋಲಾರ: ‘ರೈತರು, ಮಹಿಳೆಯರು, ಬಡವರು ಸಹಕಾರಿ ಕ್ಷೇತ್ರದಿಂದ ಬದುಕು ರೂಪಿಸಿಕೊಳ್ಳಲು ಸಾಧ್ಯವೆಂದು ಡಿಸಿಸಿ ಬ್ಯಾಂಕ್ ಇಡೀ ದೇಶಕ್ಕೆ ಸಾಧಿಸಿ ತೋರಿಸಿದೆ. ಜನಸ್ನೇಹಿಯಾಗಿ ಬೆಳೆಯುತ್ತಿರುವ ಈ ಸಂಸ್ಥೆಗೆ ರೈತರು ಮತ್ತು ಮಹಿಳೆಯರು ಆಧಾರಸ್ತಂಭವಾಗಿ ನಿಲ್ಲಬೇಕು’ ಎಂದು ಮಾಜಿ ಶಾಸಕ ಕೆ.ಆರ್.ಶ್ರೀನಿವಾಸಯ್ಯ ಕಿವಿಮಾತು ಹೇಳಿದರು.

ಇಲ್ಲಿ ಸೋಮವಾರ ಕಸಬಾ ದಕ್ಷಿಣ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಗ್ರೋ ಬೇಸ್ ಅಗ್ರಿ ಸಮುಚ್ಚಯ ಮತ್ತು ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

‘ನಿಷ್ಠೆ, ಪ್ರಾಮಾಣಿಕತೆ, ಶ್ರಮದಿಂದ ಅಧಿಕಾರದಲ್ಲಿರುವ ವ್ಯಕ್ತಿ ಸಮಾಜದಲ್ಲಿ ಗೌರವ ಗಳಿಸಲು ಸಾಧ್ಯ. ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಅನ್ನು ಎತ್ತರಕ್ಕೆ ನಿಲ್ಲಿಸಿರುವುದು ಜಿಲ್ಲೆಯ ಪಾಲಿಗೆ ಹೆಮ್ಮೆಯ ವಿಷಯ. ಡಿಸಿಸಿ ಬ್ಯಾಂಕ್ ಹೆಸರು ಇತಿಹಾಸದ ಪುಟ ಸೇರಿತು ಎಂದು ಭಾವಿಸಿದ್ದೆ. ಆದರೆ, ತನ್ನ ಮೇಲಿನ ಅಪವಾದ ದೂರ ಮಾಡಿಕೊಂಡು ಮತ್ತೆ ರೈತರು, ಮಹಿಳೆಯರ ನೆರವಿಗೆ ನಿಂತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಆರ್ಥಿಕವಾಗಿ ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಮತ್ತು ಕಸಬಾ ಸೊಸೈಟಿ ಇಂದು ಉತ್ತಮ ಸ್ಥಿತಿಗೆ ತಲುಪಿವೆ. ಈ ಭಾಗದ ಮಹಿಳೆಯರು, ರೈತರ ಜೀವನಾಡಿಯಾಗಿ ಬೆಳೆದಿವೆ. ಕಸಬಾ ಸೊಸೈಟಿ ಅಭಿವೃದ್ಧಿಗೆ ಕೈಜೋಡಿಸೋಣ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

‘ಎಲ್ಲರೂ ಸ್ವಾರ್ಥಕ್ಕಾಗಿ ಭೂಮಿ ಕಬಳಿಸುತ್ತಿರುವ ಕಾಲದಲ್ಲಿ ಈ ಹಿಂದೆ ಶಾಸಕರಾಗಿದ್ದ ಕೆ.ಆರ್.ಶ್ರೀನಿವಾಸಯ್ಯ ಅವರು ಸೊಸೈಟಿಗೆ ಜಾಗ ಮಂಜೂರು ಮಾಡಿಸಿಕೊಟ್ಟರು. ಛತ್ರಕೋಡಿಹಳ್ಳಿ ರಾಮಣ್ಣ ಅವರು ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿ ಜಾಗ ಉಳಿಸಿಕೊಟ್ಟರು’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸ್ಮರಿಸಿದರು.

‘ಬಡವರ ಅನುಕೂಲಕ್ಕಾಗಿ ಸಹಕಾರ ವ್ಯವಸ್ಥೆಯಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಹಕಾರದ ಸೌಲಭ್ಯಗಳು ತಲುಪಬೇಕು ಎಂಬುದು ಸಹಕಾರದ ಧ್ಯೇಯವಾಗಿದೆ. ನಿಷ್ಕ್ರಿಯಗೊಂಡಿದ್ದ ಸೊಸೈಟಿಗೆ ಶಾಸಕ ಶ್ರೀನಿವಾಸಗೌಡರು ₹ 2.50 ಕೋಟಿ ಸಾಲ ಸೌಲಭ್ಯ ಕಲ್ಪಿಸಿದ್ದರಿಂದ ಇಂದು ₹ 30 ಕೋಟಿ ವಹಿವಾಟು ನಡೆಸುವ ಶಕ್ತಿ ಹೊಂದಿದೆ’ ಎಂದರು.

‘ಸೊಸೈಟಿಯ ಕಟ್ಟಡ ನಿರ್ಮಾಣಕ್ಕೆ ಬಡ್ಡಿರಹಿತವಾಗಿ 10 ವರ್ಷಗಳ ಅವಧಿಗೆ ₹ 1.50 ಕೋಟಿ ಮಂಜೂರು ಮಾಡಲಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ವಿವಿಧೋದ್ದೇಶ ಸೇವಾ ಕೇಂದ್ರ (ಎಂಎಸ್ಎಂಇ) ಯೋಜನೆಯಡಿ ಹಂತ ಹಂತವಾಗಿ ಅನುದಾನ ನೀಡಿ ಕಾರ್ಯಗತಗೊಳಿಸಲಾಗುತ್ತಿದೆ’ ಎಂದು ವಿವರಿಸಿದರು.

₹ 1.50 ಕೋಟಿ: ‘ಸೊಸೈಟಿಯಿಂದ ₹ 1.50 ಕೋಟಿ ಅಂದಾಜು ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದ್ದು, ಗುತ್ತಿಗೆದಾರರು ವಾರದಲ್ಲಿ ಕಾಮಗಾರಿ ಆರಂಭಿಸುತ್ತಾರೆ. ಶೀಘ್ರವಾಗಿ ಕಟ್ಟಡ ನಿರ್ಮಿಸಿ ಸೊಸೈಟಿಗೆ ಹಸ್ತಾಂತರಿಸಬೇಕು. ಮೊದಲನೇ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಮತ್ತೆ ₹ 1 ಕೋಟಿ ಮಂಜೂರು ಮಾಡಬೇಕು’ ಎಂದು ಕಸಬಾ ಸೊಸೈಟಿ ಅಧ್ಯಕ್ಷ ಎನ್.ಶ್ರೀನಿವಾಸ್ ಮನವಿ ಮಾಡಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ಎಂ.ಎಲ್.ಅನಿಲ್‌ಕುಮಾರ್, ಕೆ.ವಿ.ದಯಾನಂದ್, ನಗರಸಭೆ ಮಾಜಿ ಅಧ್ಯಕ್ಷ ವಿ.ಪ್ರಕಾಶ್, ಕಸಬಾ ಸೊಸೈಟಿ ಉಪಾಧ್ಯಕ್ಷ ಶ್ರೀನಿವಾಸಪ್ಪ, ಮಾಜಿ ಅಧ್ಯಕ್ಷ ಮುನೇಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT