ಶುಕ್ರವಾರ, ಸೆಪ್ಟೆಂಬರ್ 17, 2021
29 °C

ಮಹಿಳೆಯರು ಸ್ವಉದ್ಯೋಗದಿಂದ ಸಬಲರಾಗಿ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡುತ್ತಿರುವ ಮಹಿಳೆ ಸಬಲೆಯೇ ಹೊರತು ಅಬಲೆಯಲ್ಲ. ಮಹಿಳೆಯರು ಯಾವುದೇ ಕಾರಣಕ್ಕೂ ಅಸ್ತಿತ್ವ ಕಳೆದುಕೊಳ್ಳದೆ ಸ್ವಾಭಿಮಾನದಿಂದ ಬದುಕಬೇಕು’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಕಿವಿಮಾತು ಹೇಳಿದರು.

ನಗರದ ನರ್ಮದಾ ಮಹಿಳಾ ಪತ್ತಿನ ಸಹಕಾರ ಸಂಘದಲ್ಲಿ ಬ್ಯೂಟಿಷಿಯನ್‌ ತರಬೇತಿ ಪಡೆದಿದವರಿಗೆ ಇಲ್ಲಿ ಸೋಮವಾರ ಪ್ರಮಾಣಪತ್ರ ವಿತರಿಸಿ ಮಾತನಾಡಿ, ‘ಮಹಿಳೆಯು ನಾಲ್ಕು ಗೋಡೆಗಳ ಮಧ್ಯೆ ಕುಟುಂಬ ನಿರ್ವಹಣೆಗಷ್ಟೇ ಸೀಮಿತವೆಂಬ ಕಾಲ ಬದಲಾಗಿದೆ. ಮಹಿಳೆಯರು ಈಗ ಪುರುಷರಿಗೆ ಸರಿ ಸಮಾನ’ ಎಂದು ಅಭಿಪ್ರಾಯಪಟ್ಟರು.

‘ಮಹಿಳೆಯರು ಸ್ವಉದ್ಯೋಗದ ಮೂಲಕ ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಬೇಕು. ಉನ್ನತ ಸ್ಥಾನ ಅಲಂಕರಿಸಿ ಪುರುಷರಿಗೆ ಸಮನಾಗಿ ಬೆಳೆಯಬೇಕು’ ಎಂದು ಆಶಿಸಿದರು.

‘ಬಡತನ ಶಾಪವಲ್ಲ. ಬದುಕು ಕಟ್ಟಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಬ್ಯೂಟಿಷಿಯನ್‌ ವೃತ್ತಿಗೆ ಸಮಾಜದಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಇದು ಉದ್ಯಮವಾಗಿ ಬೆಳೆದಿದೆ. ಪ್ರತಿಯೊಬ್ಬರಿಗೂ ಇದರ ಅವಶ್ಯಕತೆಯಿದೆ. ಬ್ಯೂಟಿಷಿಯನ್‌ ತರಬೇತಿ ಪಡೆದ ಮಹಿಳೆಯರು ಇದನ್ನೇ ವೃತ್ತಿಯಾಗಿ ಸ್ವೀಕರಿಸಬೇಕು. ಇದಕ್ಕೆ ಬ್ಯಾಂಕ್‌ನಿಂದ ಆರ್ಥಿಕ ನೆರವು ಕೊಡುತ್ತೇವೆ’ ಎಂದು ಭರವಸೆ ನೀಡಿದರು.

‘ಬ್ಯೂಟಿಷಿಯನ್‌ ತರಬೇತಿ ವ್ಯರ್ಥವಾಗಬಾರದು. ಇದರಿಂದ ಬದುಕು ರೂಪಿಸಿಕೊಂಡರೆ ಕುಟುಂಬದ ಪೋಷಣೆ ಆಗುತ್ತದೆ. ಅಲ್ಪ ಬಂಡವಾಳದಿಂದ ಬ್ಯೂಟಿಷಿಯನ್‌ ವೃತ್ತಿ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಬ್ಯಾಂಕ್‌ನಿಂದ ವೃತ್ತಿಗೆ ಅನುಗುಣವಾಗಿ ಸಾಲ ಸೌಲಭ್ಯ ಕಲ್ಪಿಸುತ್ತೇವೆ. ಯಾವುದೇ ಕಾರಣಕ್ಕೂ ಮಕ್ಕಳನ್ನು ಶಾಲೆ ಬಿಡಿಸಬೇಡಿ. ಮಕ್ಕಳಿಗೆ ಶಿಕ್ಷಣ ಕೊಡಿಸಿ ವಿದ್ಯಾವಂತರಾಗಿ ಮಾಡಿ’ ಎಂದು ಸಲಹೆ ನೀಡಿದರು.

ಲಾಭದಾಯಕ: ‘ಬ್ಯೂಟಿಷಿಯನ್‌ ವೃತ್ತಿ ಲಾಭದಾಯಕವಾಗಿದೆ. ಕನಿಷ್ಠ ₹ 1 ಸಾವಿರ ಬಂಡವಾಳ ಹಾಕಿ ಬ್ಯೂಟಿಷಿಯನ್‌ ಸಾಮಗ್ರಿಗಳನ್ನು ಖರೀದಿಸಿದರೆ ದಿನಕ್ಕೆ ₹ 500ರವರೆಗೆ ಹಣ ಸಂಪಾದಿಸಬಹುದು. ಆರ್ಥಿಕ ಶಕ್ತಿಗೆ ಅನುಗುಣವಾಗಿ ಬಂಡವಾಳ ಹಾಕಿ ವೃತ್ತಿ ಮುಂದುವರಿಸಿ’ ಎಂದು ನರ್ಮದಾ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಅರುಣಮ್ಮ ತಿಳಿಸಿದರು.

‘ಸಂಘದಲ್ಲಿ 2 ತಿಂಗಳ ಕಾಲ ಬ್ಯೂಟಿಷಿಯನ್ ತರಬೇತಿ ಪಡೆದ 50 ಮಂದಿಗೆ ಪರೀಕ್ಷೆ ನಡೆಸಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ನೀಡಲಾಗುತ್ತಿದೆ. ಈ ತರಬೇತಿ ಸಾರ್ಥಕವಾಗಬೇಕು. ಸಾಧಕಿಯರು ಸ್ತ್ರೀ ಸಮುದಾಯಕ್ಕೆ ಆದರ್ಶವಾಗಬೇಕು. ಸಾಧನೆಯ ಛಲ ಮೈಗೂಡಿಸಿಕೊಳ್ಳಬೇಕು’ ಎಂದರು.

‘ಕೋವಿಡ್‌ 3ನೇ ಅಲೆ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಬದಲಿಗೆ ಮುನ್ನೆಚ್ಚರಿಕೆ ವಹಿಸಬೇಕು. ತಜ್ಞರ ಸಮೀಕ್ಷೆ ಪ್ರಕಾರ ವ್ಯಕ್ತಿಯೊಬ್ಬ ದಿನಕ್ಕೆ ಕನಿಷ್ಠ 2 ಸಾವಿರ ಬಾರಿ ಮುಖ ಮುಟ್ಟಿಕೊಳ್ಳುತ್ತೇನೆ. ಹೀಗಾಗಿ ಸ್ವಚ್ಛತೆಗೆ ಹೆಚ್ಚು ಒತ್ತು ಕೊಡಬೇಕು. ಕಡ್ಡಾಯವಾಗಿ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಮೇಶ್ ತಿಳಿಸಿದರು.

ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ರುದ್ರಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ, ವ್ಯವಸ್ಥಾಪಕ ಹುಸೇನ್ ದೊಡ್ಡಮನಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶಶಿಧರ್, ನರ್ಮದಾ ಮಹಿಳಾ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಅಶ್ವಿನಿ, ನಿರ್ದೇಶಕರಾದ ಅಂಬಿಕಾ, ತಸ್ಲೀಮ್ ಉನ್ನೀಸಾ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು