ಮಂಗಳವಾರ, ಮಾರ್ಚ್ 28, 2023
33 °C

ಶೋಷಿತರ ದನಿಯಾಗಿ ಕೆಲಸ ಮಾಡಿ: ಸರ್ಕಾರಿ ನೌಕರರಿಗೆ ಸಂಸದ ಮುನಿಸ್ವಾಮಿ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸರ್ಕಾರಿ ನೌಕರರು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಒತ್ತಡ ಮುಕ್ತರಾಗಿ. ಕಚೇರಿಗಳಿಗೆ ಬರುವ ಶೋಷಿತರು, ಬಡವರು ಹಾಗೂ ರೈತರ ದನಿಯಾಗಿ ಕೆಲಸ ಮಾಡಿ’ ಎಂದು ಸಂಸದ ಎಸ್.ಮುನಿಸ್ವಾಮಿ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಇಲ್ಲಿ ಹಮ್ಮಿಕೊಂಡಿರುವ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿ, ‘ನೌಕರರ ಭವನ ನವೀಕರಣ ಕಾಮಗಾರಿಗೆ ಸಂಸದರ ನಿಧಿಯಿಂದ ₹ 20 ಲಕ್ಷ ಬಿಡುಗಡೆ ಮಾಡಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸರ್ಕಾರಿ ನೌಕರರ ದಿನಾಚರಣೆ ನೀರಸವಾಗಿತ್ತು. ಆದರೆ, ಕ್ರೀಡಾಕೂಟದಲ್ಲಿ ಹೆಚ್ಚಿನ ನೌಕರರ ಪಾಲ್ಗೊಳ್ಳುವ ಮೂಲಕ ಸಂಭ್ರಮ ಮನೆ ಮಾಡಿದೆ. ಮುಂದಿನ ಬಾರಿ ಸರ್ಕಾರಿ ನೌಕರರ ದಿನಾಚರಣೆಯಲ್ಲಿ 10 ಸಾವಿರ ನೌಕರರು ಪಾಲ್ಗೊಳ್ಳಬೇಕು’ ಎಂದು ಹೇಳಿದರು.

‘ದೇಶದಲ್ಲಿ 135 ಕೋಟಿ ಜನಸಂಖ್ಯೆಯಿದ್ದರೂ ಕ್ರೀಡೆಗಳಲ್ಲಿ ನಾವು ಹಿಂದುಳಿದಿದ್ದೇವೆ. ಜಾಗತಿಕ ಮಟ್ಟದ ಕ್ರೀಡೆಗಳಲ್ಲಿ ಕೋಟಿಗೊಬ್ಬ ಕ್ರೀಡಾಪಟುವಿಗೆ ಚಿನ್ನದ ಪದಕ ಸಿಕ್ಕಿದರೂ ಭಾರತ ವಿಶ್ವದಲ್ಲೇ ಮೊದಲಾಗುತ್ತದೆ. ದೇಶದ ಘನತೆ ಹೆಚ್ಚಿಸಲು ಕ್ರೀಡೆಗಳ ಅಗತ್ಯವಿದೆ. ಖೇಲೋ ಇಂಡಿಯಾ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಸರ್ಕಾರಿ ನೌಕರರು ಪ್ರತಿಭಾವಂತ ಕ್ರೀಡಾಪಟುಗಳನ್ನು ದತ್ತು ಪಡೆದು ಪ್ರೋತ್ಸಾಹಿಸಬೇಕು' ಎಂದರು.

ಮನಸ್ಥಿತಿ ಚೆನ್ನಾಗಿರಬೇಕು: ‘ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ದಿಗೆ ಸರ್ಕಾರಿ ನೌಕರರ ಕೊಡುಗೆ ಶೇ 80ರಷ್ಟು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಸಮರ್ಪಕವಾಗಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ’ ಎಂದು ಸರ್ಕಾರದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

‘ನೌಕರರ ಮನಸ್ಥಿತಿ ಚೆನ್ನಾಗಿರಬೇಕು. ಆಗ ಮಾತ್ರ ಉತ್ತಮ ಕೆಲಸ ನಿರೀಕ್ಷಿಸಬಹುದು. ದೈಹಿಕವಾಗಿ ಆರೋಗ್ಯವಿದ್ದರೆ ಮಾತ್ರ ಮಾನಸಿಕ ಆರೋಗ್ಯ ಸಾಧ್ಯ ಎಂಬುದನ್ನು ಅರಿತು ಕ್ರೀಡೆಗಳಲ್ಲಿ ಭಾಗವಹಿಸಿ. ನೌಕರರ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ₹ 10 ಲಕ್ಷ ನೀಡುವೆ’ ಎಂದು ಹೇಳಿದರು.

‘ಸರ್ಕಾರಿ ನೌಕರರ ಸಂಘದ ಕಟ್ಟಡಕ್ಕೆ 5 ಎಕರೆ ಜಮೀನು ಕೇಳಿರುವುದಕ್ಕೆ ನನ್ನ ಸಹಮತವಿದ್ದು, ಜಮೀನು ಮಂಜೂರಿಗೆ ಜಿಲ್ಲಾಡಳಿತ ಕೂಡಲೇ ಕ್ರಮ ವಹಿಸಬೇಕು. ಮುಂದಿನ ವರ್ಷದೊಳಗೆ ಹೊಸ ಭವನ ನಿರ್ಮಿಸಿ ಅ‌ಲ್ಲಿಯೇ ಸರ್ಕಾರಿ ನೌಕರರ ದಿನಾಚರಣೆ ನಡೆಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಆಶಿಸಿದರು.

ಮಾದರಿಯಾಗಲಿ: ‘ಕೋಲಾರ ಜಿಲ್ಲೆಯು ಅಭಿವೃದ್ಧಿಯಲ್ಲಿ ರಾಷ್ಟ್ರಕ್ಕೆ ಮಾದರಿಯಾಗುವಂತೆ ಕೆಲಸ ಮಾಡಿ. ಕಚೇರಿಗಳಿಗೆ ಜನರ ಅಲೆದಾಟ ತಪ್ಪಿಸಿ. ಜನರನ್ನು ಕುಟುಂಬದ ಸದಸ್ಯರೆಂದು ಭಾವಿಸಿ ಸಮಾಜಮುಖಿಯಾಗಿ ಕೆಲಸ ಮಾಡಿ. ಐಎಎಸ್, ಕೆಎಎಸ್‍ ಅಧಿಕಾರಿಗಳು ಜಿಲ್ಲೆಯವರೇ ಹೆಚ್ಚು ಎಂಬ ಗೌರವವಿದೆ. ಇಂತಹ ಪುಣ್ಯ ಭೂಮಿಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ’ ಎಂದು ಜಿಲ್ಲಾಧಿಕಾರಿ ವೆಂಕಟ್‍ರಾಜಾ ಹೇಳಿದರು.

ನಗರಸಭೆ ಅಧ್ಯಕ್ಷೆ ಶ್ವೇತಾ, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ, ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಉದಯಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು, ಪದಾಧಿಕಾರಿಗಳು ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು